ಉಡುಪಿ, ಸೆ.12: ಕಾರ್ಕಳ ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಸಾಗಾಟದ ವಿರುದ್ದ ಪೊಲೀಸರು ಕಟ್ಟುನಿಟ್ಟಿನ ಕ್ರಮವನ್ನು ಕೈಗೊಂಡಿದ್ದಾರೆ.

ಸೆ.10ರಂದು ರಾತ್ರಿ ವೇಳೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಯಾ ಗ್ರಾಮದ ಕುಂಟಾಡಿ ಎಂಬಲ್ಲಿನ ಸ್ಪೋಟಕವನ್ನು ಬಳಸಿ ಕಲ್ಲು ಪುಡಿಮಾಡಿ ಲಾರಿಗಳಲ್ಲಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿದ್ದು, ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಹರೀಶ್ ಶೆಟ್ಟಿ ಹಾಗೂ ಸಂತೋಷ್ ಶೆಟ್ಟಿ ಎಂಬವರನ್ನು ಬಂಧಿಸಿ, ಮೂರು ಲಾರಿಗಳನ್ನು ಹಾಗೂ ಒಂದು ಹಿಟಾಚಿ ಯಂತ್ರವನ್ನು ವಶಪಡಿಸಿ ಕೊಂಡಿದ್ದಾರೆ.

ಸೆ.11ರಂದು ಸಂಜೆ ವೇಳೆ ಕಲ್ಯಾ ಗ್ರಾಮದ ಸಿಎಂಎಸ್ ಸ್ಟೋನ್ ಕ್ರಶರ್‌ಗೆ ದಾಳಿ ನಡೆಸಿದ ಪೊಲೀಸರು, ಮೊಹಮ್ಮದ್ ಶಫಿ ಮತ್ತು ರಂಜಿತ್ ಎಂಬವರನ್ನು ಬಂಧಿಸಿ, ನಾಲ್ಕು ಟಿಪ್ಪರ್‌ಗಳು, ಮೂರು ಹಿಟಾಚಿ, ಒಂದು ಕ್ರಷರ್ ಯೂನಿಟ್ ಹಾಗೂ 20 ಲೋಡ್ ಜೆಲ್ಲಿ ಕಲ್ಲುಗಳನ್ನು ವಶಪಡಿಸಿ ಕೊಳ್ಳಲಾಗಿದೆ.

ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಸಾಂತೂರು ಸುಬ್ರಮಣ್ಯ ದೇವಸ್ಥಾನದ ಕಡೆಗೆ ಹೋಗುವ ರಸ್ತೆಯಲ್ಲಿರುವ ಕ್ರಷರ್‌ಗೆ ದಾಳಿ ನಡೆಸಿದ ಪೊಲೀಸರು, ಸ್ಥಳದಲ್ಲಿದ್ದ 40 ಯುನಿಟ್‌ನಷ್ಟು ಜೆಲ್ಲಿ, ಎರಡು ಲಾರಿ ಹಾಗೂ ಒಂದು ಜೆಸಿಬಿ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor