ಕುಂದಾಪುರ, ನ.21: ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ಅಕ್ಟೋಬರ್ ತಿಂಗಳಿನವರೆಗಿನ ಹಣ ಹಂತಹಂತವಾಗಿ ಬಹುತೇಕ ಎಲ್ಲಾ ಫಲಾನುಭವಿ ಗಳಿಗೆ ತಲುಪುತ್ತಿದೆ. ಗೃಹಲಕ್ಷ್ಮೀ ಯೋಜನೆಯ ಪರಿಷ್ಕರಣೆ ಬಗ್ಗೆ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಇನ್ನೂ ಸರಕಾರ ದಿನಾಂಕ ನಿಗದಿ ಮಾಡದಿದ್ದರಿಂದ ಆರಂಭವಾಗಿಲ್ಲ. ಗೃಹಜ್ಯೋತಿ ಯೋಜನೆಯ ಪರಿಷ್ಕರಣೆ ತಾಲೂಕಿನಲ್ಲಿ ಯಶಸ್ವಿಯಾಗಿ ನಡೆದಿದೆ ಎಂದು ಕುಂದಾಪುರ ತಾಲೂಕು ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಎಚ್.ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಹೇಳಿದ್ದಾರೆ.

ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶನಿವಾರ ನಡೆದ ಕುಂದಾಪುರ ತಾಲೂಕು ಮಟ್ಟದ ಗ್ಯಾರಂಟಿ ಅನುಷ್ಟಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ವಿದ್ಯುತ್ ಹೊಸ ಸಂಪರ್ಕ ಪಡೆಯುವಾಗ ಪ್ರಿಪೇಯ್ಡ್ ಮೀಟರ್ ವ್ಯವಸ್ಥೆ ಆರಂಭಿಸಿದ್ದು ವಿದ್ಯುತ್ ಸ್ವಯಂಚಾಲಿತ ರೀಡಿಂಗ್ ಆಗಲಿದೆ. ಇದಕ್ಕೆ ಮೊಬೈಲ್ ಆಪ್ ಬಳಸಬೇಕಿದ್ದು ಈ ಬಗ್ಗೆ ಜನಸಾಮಾನ್ಯರಿಗೆ ಯಾವುದೇ ಅರಿವಿಲ್ಲ. ಆರಂಭಿಕ ಹಂತದಲ್ಲಿಯೇ ಜನರಿಗೆ ಮಾಹಿತಿ ನೀಡುವ ಕಾರ್ಯವಾಗಬೇಕು ಎಂದು ಗ್ಯಾರೆಂಟಿ ಅನುಷ್ಟಾನ ಸಮಿತಿ ಸದಸ್ಯ ಅಭಿಜಿತ್ ಪೂಜಾರಿ ಹೇರಿಕುದ್ರು ಹೇಳಿದರು.

ಮೆಸ್ಕಾಂ ಸಿಬ್ಬಂದಿಗಳನ್ನು ಕಳುಹಿಸಿ ಅಗತ್ಯ ಮಾಹಿತಿ ನೀಡುವ ವ್ಯವಸ್ಥೆ ಮಾಡುವುದಾಗಿ ಮೆಸ್ಕಾಂ ಅಧಿಕಾರಿ ಸಭೆಗೆ ತಿಳಿಸಿದರು. ಗಂಗೊಳ್ಳಿ, ಗುಜ್ಜಾಡಿ, ಚಿತ್ತೂರು, ತಲ್ಲೂರು ಭಾಗದಲ್ಲಿ ಲೈನ್‌ಮೆನ್‌ಗಳ ಕೊರತೆ ಬಗ್ಗೆ ಸದಸ್ಯರಾದ ನಾರಾಯಣ ಆರ್ಚಾ ಕೋಣಿ, ಝಹೀರ್ ಅಹಮ್ಮದ್ ಗಂಗೊಳ್ಳಿ ಮಾತನಾಡಿದರು.

ಕುಂದಾಪುರದಿಂದ ಹೆಮ್ಮಾಡಿ-ಮಾರಣಕಟ್ಟೆ ಮಾರ್ಗವಾಗಿ ಕೆರಾಡಿಗೆ 4 ಕೆಎಸ್‌ಆರ್‌ಟಿಸಿ ಬಸ್ಸು ನಿತ್ಯ ಸಂಚರಿಸು ತ್ತದೆ. ಆದರೆ 650ಕ್ಕೂ ಅಧಿಕ ಮನೆಗಳಿರುವ ಬೆಳ್ಳಾಲದ ಜನರು ಕೆರಾಡಿಗೆ ಬರಲು ಬಸ್ ವ್ಯವಸ್ಥೆಯಿಲ್ಲ. ಕುಂದಾ ಪುರ-ತಲ್ಲೂರು-ನೇರಳಕಟ್ಟೆ-ಬೆಳ್ಳಾಲ ಮಾರ್ಗವಾಗಿ ಎರಡು ಬಸ್ಸು ಓಡಿಸಿದರೆ ಬೆಳ್ಳಾಲ ಜನರಿಗೆ ಅನುಕೂಲ ವಾಗಲಿದ್ದು ಅವರು ಕೆರಾಡಿ ಗ್ರಾ.ಪಂ ಸಹಿತ ಇತರ ಕೆಲಸಗಳಿಗೆ ತೆರಳಬಹುದು ಎಂದು ಸದಸ್ಯ ಮಂಜು ಕೊಠಾರಿ ಹೇಳಿದರು. ಇದರಿಂದ ಪರವಾನಿಗೆ ಸಮಯ ಬದಲಾವಣೆ ಆಗಲಿದ್ದು ಸಾರ್ವಜನಿಕರಿಂದ ಬೇಡಿಕೆ ಬಂದರೆ ಆರ್.ಟಿ.ಒ ಸಭೆಯಲ್ಲಿ ಈ ಬಗ್ಗೆ ಚರ್ಚಿಸುವುದಾಗಿ ಡಿಪೋ ಮ್ಯಾನೇಜರ್ ಉದಯ ಶೆಟ್ಟಿ ತಿಳಿಸಿದರು.

ಸರಕಾರಿ ಬಸ್ಸಿನಲ್ಲಿ ಶಕ್ತಿ ಯೋಜನೆ ಪಡೆಯಲು ಮಹಿಳೆಯರ ಬಳಿ ಆಧಾರ್ ಕಾರ್ಡ್ ಕಡ್ಡಾಯ ಬೇಕಿದೆಯೇ? ಕೆಲವು ನಿರ್ವಾಹಕರು ಬೇಕೆಂದು ಹೇಳುತ್ತಾರೆ ಎಂದು ಸದಸ್ಯೆ ಆಶಾ ಕರ್ವೆಲ್ಲೋ ಪ್ರಶ್ನಿಸಿದರು. ಆಧಾರ್ ಕಾರ್ಡ್ ಇಲ್ಲದಿದ್ದರೂ ಸ್ಮಾರ್ಟ್ ಫೋನ್‌ನಲ್ಲಿ ಡಿಜಿಟಲ್ ಪ್ರತಿ ಇದ್ದರೆ ಸಾಕಾಗುತ್ತದೆ ಅಧಿಕಾರಿ ತಿಳಿಸಿದರು. ಕುಂದಾಪುರ ರೈಲು ನಿಲ್ದಾಣಕ್ಕೆ ಅಗತ್ಯ ವೇಳೆ ಬಸ್ಸು ಬಿಡಬೇಕು. ಗಂಗೊಳ್ಳಿ-ಬೈಂದೂರು ಸಂಪರ್ಕಕ್ಕೆ ಸರಕಾರಿ ಬಸ್ ಒದಗಿಸಬೇಕೆಂದು ಝಹೀರ್ ಅಹಮ್ಮದ್ ಒತ್ತಾಯಿಸಿದರು.

ಅನ್ನಭಾಗ್ಯ ಯೋಜನೆಯ ಪಡಿತರ ಇ-ಕೆವೈಸಿ ಕಾರ್ಯ ತಾಲೂಕಿನಲ್ಲಿ ಪೂರ್ಣಗೊಂಡಿದ್ದು, ಕುಂದಾಪುರ ತಾಲೂಕು ರಾಜ್ಯದಲ್ಲಿ 3ನೇ ಹಾಗೂ ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ.ಶಿವರಾಮ ಕಾರಂತ ಟ್ರಸ್ಟ್‌ನಿಂದ ಕಾರಂತ ವಿಶೇಷ ಪುರಸ್ಕಾರ ಪ್ರಶಸ್ತಿಗೆ ಭಾಜನರಾದ ಸದಸ್ಯ ಗಣೇಶ್ ವಿ. ಕೊರಗ ಕುಂದಾಪುರ ಅವರನ್ನು ಇದೇ ಸಂದರ್ಭ ಗೌರವಿಸಲಾಯಿತು. ಕುಂದಾಪುರ ತಾಲೂಕು ಗ್ಯಾರಂಟಿ ಅನುಷ್ಟಾನ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ತಾಪಂ ಇಓ ಮಹೇಶ್ ಕೆ.ಜಿ. ಉಪಸ್ಥಿತರಿದ್ದರು.

‘ಪಂಚಗ್ಯಾರೆಂಟಿ ಯೋಜನೆಯಲ್ಲಿ ಅಕ್ಟೋಬರ್ ತಿಂಗಳ ಅಂತ್ಯಕ್ಕೆ ಗೃಹಜ್ಯೋತಿಯಲ್ಲಿ 4,50,32,520ರೂ. ಅನ್ನಭಾಗ್ಯ ಯೋಜನೆಯಲ್ಲಿ 2,40,66,508ರೂ., ಯುವನಿಧಿಯಲ್ಲಿ 20,79,000 ರೂ. ಮತ್ತು ಶಕ್ತಿ ಯೋಜನೆ ಯಲ್ಲಿ 3,59,32,987 ರೂ. ಸೇರಿ ಒಟ್ಟು 24,52,15,015ರೂ. ಹಣ ತಾಲೂಕಿಗೆ ಲಭಿಸಿದೆ. ಯೋಜನೆ ಪ್ರಾರಂಭದಿಂದ ಒಟ್ಟು ಇಲ್ಲಿಯ ತನಕ ಒಟ್ಟು 6,74,85,08,451 ಹಣ ಬಿಡುಗಡೆಯಾಗಿದೆ’

-ಎಚ್.ಹರಿಪ್ರಸಾದ್ ಶೆಟ್ಟಿ, ಅಧ್ಯಕ್ಷರು, ಗ್ಯಾರಂಟಿ ಅನುಷ್ಟಾನ ಸಮಿತಿ



 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor