ಉಡುಪಿ, ನ.23: ಸಮಸ್ತ ಸಮಾಜದ ಆರೋಗ್ಯ, ಕ್ಷೇಮ, ರಾಷ್ಟ್ರದ ಸುರಕ್ಷತೆ ಹಾಗೂ ಲೋಕಕಲ್ಯಾಣದ ಸಂಕಲ್ಪ ದೊಂದಿಗೆ ಸನಾತನ ಸಂಸ್ಥೆ ಇದೇ ನ.29ರ ರವಿವಾರದಂದು ಉಡುಪಿ ಕುಂಜಿಬೆಟ್ಟಿನ ಎಂ.ಜಿ.ಎಂ. ಕಾಲೇಜು ಮೈದಾನದಲ್ಲಿ ಬೃಹತ್ ‘ಶ್ರೀಮಹಾಧನ್ವಂತರಿ ಯಾಗ’ವನ್ನು ಆಯೋಜಿಸಿದೆ ಎಂದು ಯಾಗದ ಸ್ವಾಗತ ಸಮಿತಿಯ ಅಧ್ಯಕ್ಷರೂ ಆಗಿರುವ ಶಾಸಕ ಯಶಪಾಲ್ ಸುವರ್ಣ ತಿಳಿಸಿದ್ದಾರೆ.

ನಗರದ ಹೊಟೇಲ್ ಕಿದಿಯೂರಿನಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಯಶಪಾಲ್ ಸುವರ್ಣ, ಈ ಮಹಾಯಾಗದಲ್ಲಿ ಪಾಲ್ಗೊಳ್ಳಲು ಈಗಾಗಲೇ 9,000ಕ್ಕೂ ಅಧಿಕ ಭಕ್ತರು ಹೆಸರು ನೋಂದಣಿ ಮಾಡಿಕೊಂಡಿದ್ದು, ಸುಮಾರು 15,000 ಮಂದಿ ಇದರಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.

ಯಾಗದ ವಿಶೇಷತೆಯ ಕುರಿತು ವಿವರಗಳನ್ನು ನೀಡಿದ ಆಯೋಜನಾ ಸಮಿತಿಯ ಸಂಚಾಲಕ ಗುರುಪ್ರಸಾದ್ ಗೌಡ, ಸನಾತನ ಸಂಸ್ಥೆ ಮಾರ್ಗದರ್ಶನದಲ್ಲಿ ಯಾಗ ನಡೆಯಲಿದ್ದು, ಯಾವುದೇ ಶುಲ್ಕವಿಲ್ಲದೆ ಸಾರ್ವಜನಿಕರು ಹೆಸರು ನೊಂದಣಇ ಮಾಡಿಕೊಂಡು ಇದರಲ್ಲಿ ಭಾಗವಹಿಸಬಹುದು ಎಂದರು.

ನ.29ರಂದು ಅಪರಾಹ್ನ 3:00 ಗಂಟೆಗೆ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಅವರಿಂದ ದೀಪ ಪ್ರಜ್ವಲನದೊಂದಿಗೆ ಮಹಾಯಾಗ ಪ್ರಾರಂಭಗೊಳ್ಳಲಿದ್ದು, ಸಂಜೆ 7 ಗಂಟೆಯವರೆಗೆ ನಡೆಯಲಿದೆ. ಬಳಿಕ ನೆರೆದ ಭಕ್ತರಿಗೆ ಮಹಾಪ್ರಸಾದದ ವಿತರಣೆ ನಡೆಯಲಿದೆ ಎಂದರು.

ಉಡುಪಿಯಲ್ಲಿ ಮೊದಲ ಬಾರಿಗೆ ನಡೆಯಲಿರುವ ಮಹಾಧನ್ವಂತರಿ ಮಹಾಯಾಗದಲ್ಲಿ ಉಡುಪಿಯ ಅಷ್ಟಮಠಗಳ ಸ್ವಾಮೀಜಿಗಳು, ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಆನೆಗುಂದಿ ಮಠದ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ, ಕೊಂಡೆವೂರು ಮಠ ಹಾಗೂ ಕರಿಂಜೆ ಮುಕ್ತಾನಂದ ಸ್ವಾಮೀಜಿ ಅವರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಸ್ವಾಗತ ಸಮಿತಿಯ ಸಂಘಟನಾ ಕಾರ್ಯದರ್ಶಿ ವಿಜಯ್ ಕೊಡವೂರು ಮಾತನಾಡಿ, ಯಾಗದ ಕುರಿತು ಜಿಲ್ಲೆಯಾದ್ಯಂತ ವ್ಯಾಪಕ ಪ್ರಚಾರ ನಡೆಸಲಾಗಿದೆ. 25000ಕ್ಕೂ ಅಧಿಕ ಮನೆಗಳಿಗೆ ಆಮಂತ್ರಣ ಪತ್ರಿಕೆಯನ್ನು ಹಂಚಲಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಮಹಾಧನ್ವಂತರಿ ಯಾಗದ ಮಾಹಿತಿಯನ್ನು ಜನರಿಗೆ ತಲುಪಿಸಲು ವ್ಯಾಪಕ ಪ್ರಚಾರ ಕೈಗೊಳ್ಳಲಾಗಿದೆ ಎಂದರು.

ಉಉಡಪಿಯಲ್ಲಿ ನಡೆಯಲಿರುವ ಈ ಮಹಾಯಾಗದಲ್ಲಿ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು ಹಾಗೂ ಶಿವಮೊಗ್ಗ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸಾವಿರಾರು ಭಕ್ತಾದಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಸನಾತನ ಸಂಸ್ಥೆಯ ಧರ್ಮಪ್ರಚಾರಕ ರಮಾನಂದ ಗೌಡ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಕುಯಿಲಾಡಿ ಸುರೇಶ್ ನಾಯಕ್, ಹಿಂದೂ ಜನಜಾಗೃತಿ ಸಮಿತಿಯ ವಕ್ತಾರ ರಮೇಶ ಶಿಂದೆ ಹಾಗೂ ಶೋಭಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor