ನ.24ರಂದು ಕಾರ್ತಿಕದ ಹುಣ್ಣಿಮೆ ಚಂದಿರ ‘ಸೂಪರ್ ಮೂನ್’
ಉಡುಪಿ, ನ.23: ಕಾಕತಾಳೀಯ ಎಂಬಂತೆ ಕಾರ್ತೀಕದ ದೀಪೋತ್ಸವಕ್ಕೆ ಹುಣ್ಣಿಮೆ ಚಂದಿರ ತಾನೂ ಒಂದು ದೀಪದಂತೆ ನಾಳೆ ಹುಣ್ಣಿಮೆಯ ದಿನ ಸೂಪರ್ ಮೂನ್ ಆಗಿ ಗೋಚರಿಸಲಿದ್ದಾನೆ ಎಂದು ಖಗೋಳ ಶಾಸ್ತ್ರಜ್ಞ, ಹಿರಿಯ ವಿಜ್ಞಾನಿ ಉಡುಪಿಯ ಡಾ.ಎ.ಪಿ.ಭಟ್ ತಿಳಿಸಿದ್ದಾರೆ.
28 ದಿನಗಳಲ್ಲಿ ಚಂದ್ರ ಪ್ರತೀದಿನ ಒಂದೊಂದು ನಕ್ಷತ್ರಕ್ಕೆ ನೇರ ಬಂದಂತೆ ಕಾಣುವನು. ನ.24ರಂದು ಕೃತ್ತಿಕಾ ನಕ್ಷತ್ರ. ಅದೇ ದಿನ ಹುಣ್ಣಿಮೆ ಹಾಗಾಗಿ ಕಾರ್ತೀಕ ಮಾಸದ ಕಾರ್ತೀಕ ಹುಣ್ಣಿಮೆ. ಭೂಮಿ ಸುತ್ತುವ ಚಂದ್ರನ ಪಥ ವರ್ತುಲವಲ್ಲ. ದೀರ್ಘ ವೃತ್ತಾಕಾರ. ಈ ಪಥದಲ್ಲಿ 28 ದಿನಗಳಿಗೊಮ್ಮೆ ಭೂಮಿಗೆ ಚಂದ್ರ ಸಮೀಪ ಹಾಗೂ (ಇದನ್ನ ಎಪೊಜಿ ಸಮೀಪ ದೂರ) ದೂರದ ದೂರ (ಪೆರಿಜಿ) ಬರುವುದಿದೆ.
ಭೂಮಿ ಚಂದ್ರರ ಸರಾಸರಿ ದೂರ 3ಲಕ್ಷ 84 ಸಾವಿರ ಕಿಮೀ. ಅದೇ ಸಮೀಪ ಬಂದಾಗ 3 ಲಕ್ಷದ 60ಸಾವಿರ ಕಿಮೀ ಬರುವದು. ಹೀಗೆ ಹತ್ತಿರ ಬಂದಾಗ, ಸುಮಾರು 25 ಸಾವಿರ ಕಿಮೀ ಭೂಮಿಗೆ ಹತ್ತಿರದಲ್ಲಿ ಕಂಡು 14 ಅಂಶ ದೊಡ್ಡದಾಗಿ ಕಾಣುವುದು, ಹಾಗೆಯೇ ಹುಣ್ಣಿಮೆಯ ಬೆಳದಿಂಗಳ ಪ್ರಭೆ ಸುಮಾರು 30 ಅಂಶ ಹೆಚ್ಚಾಗಲಿದೆ.
ನ.24ರಂದು ಚಂದ್ರ ಭೂಮಿಯಿಂದ 3ಲಕ್ಷದ 60 ಸಾವಿರ ಕಿಮೀ ದೂರದಲ್ಲಿರುತ್ತದೆ. ಹೀಗಾಗಿ ಹುಣ್ಣಿಮೆ ದಿನ ಚಂದ್ರ ದೀಪೋತ್ಸವಗಳ ಜೊತೆ ಸೂಪರ್ ಆಕಾಶ ದೀಪವಾಗಿ ಕಾಣಲಿದೆ ಎಂದಿರುವ ಡಾ.ಭಟ್, ನಾಳೆ ಸಂಭ್ರಮದ ಸೂಪರ್ಮೂನ್ ನ ದೀಪೋತ್ಸವ ಆಚರಿಸೋಣ. ಅದರಲ್ಲೂ ಚಂದ್ರೋದಯ ಬಲು ಸುಂದರ. ನೋಡಿ ಆನಂದಿ ಸೋಣ ಎಂದು ಆಕಾಶ ವೀಕ್ಷಕ ಪ್ರಿಯರನ್ನು ಆಹ್ವಾನಿಸಿದ್ದಾರೆ.