ಅ.10: ಮಾಹೆಯಿಂದ ವಿಶ್ವ ಹಾಸ್ಪೈಸ್, ಉಪಶಾಮಕ ಆರೈಕೆ ದಿನ
ರೋಗಿಗೆ ಬದುಕಿನ ಕೊನೆದಿನಗಳ ಗೌರವ ನೀಡುವ ‘ಹಾಸ್ಪೈಸ್ ಸೆಂಟರ್’
ಉಡುಪಿ, ಅ.6: ಗಂಭೀರ ಹಾಗೂ ಮಾರಣಾಂತಿಕ ಕಾಯಿಲೆಗಳೊಂದಿಗೆ ಬದುಕುತ್ತಿರುವವರಿಗೆ ಉಪಶಾಮಕ ಆರೈಕೆಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಅ.10ರಂದು ವಿಶ್ವ ಹಾಸ್ಪೈಸ್ ಮತ್ತು ಉಪಶಾಮಕ ಆರೈಕೆ ದಿನವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಿದೆ ಎಂದು ಮಾಹೆಯ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಹೇಳಿದ್ದಾರೆ.
ಮಣಿಪಾಲ ಸಮೀಪದ ಹಾವಂಜೆ ಗ್ರಾಮದಲ್ಲಿ ಸುಮಾರು 12 ಎಕರೆ ವಿಶಾಲ ಪ್ರದೇಶದಲ್ಲಿ ಮಾಹೆ ನಿರ್ಮಿಸಿರುವ ಮಣಿಪಾಲ ಹಾಸ್ಪೈಸ್ ಆ್ಯಂಡ್ ರೆಸ್ಪೈಟ್ ಸೆಂಟರ್ (ಎಂಎಚ್‌ಆರ್‌ಸಿ)ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯವನ್ನು ತಿಳಿಸಿದರು.
ವಿಶ್ವ ಹಾಸ್ಪೈಸ್ ಮತ್ತು ಉಪಶಾಮಕ ಆರೈಕೆ ದಿನವನ್ನು ಪ್ರತಿ ವರ್ಷ ಅಕ್ಟೋಬರ್ ತಿಂಗಳ ಎರಡನೆಯ ಶನಿವಾರ ಆಚರಿಸಲಾಗುತ್ತಿದೆ. ಸಮಗ್ರ ಆರೈಕೆಯ ಭಾಗವಾಗಿ ಕಾಯಿಲೆಯ ಯಾತನೆಯನ್ನು ನಿರ್ವಹಿಸುವ ಮಹತ್ವವನ್ನು ಇದು ಎತ್ತಿ ತೋರಿಸುತ್ತದೆ. ಉಪಶಾಮಕ ಆರೈಕೆಯು ದೈಹಿಕ ಸ್ಥಿತಿಯನ್ನಷ್ಟೇ ಅಲ್ಲದೆ, ಮಾನಸಿಕ, ಸಾಮಾಜಿಕ ಮತ್ತು ಆಂತರಂಗಿಕ ಪರಿಸ್ಥಿತಿಗಳನ್ನು ಪರಿಗಣಿಸಿ, ನೆಮ್ಮದಿ, ಘನತೆ ಮತ್ತು ಜೀವನದ ಗುಣಮಟ್ಟಕ್ಕೆ ಆದ್ಯತೆ ನೀಡುತ್ತದೆ ಎಂದವರು ಹೇಳಿದರು.
ಕಳೆದ ವರ್ಷ ಎಪ್ರಿಲ್‌ನಲ್ಲಿ ರಾಜ್ಯಪಾಲರಿಂದ ಉದ್ಘಾಟನೆಗೊಂಡ ಎಂಎಚ್‌ಆರ್‌ಸಿ, ಮಾರಣಾಂತಿಕ ಕಾಯಿಲೆ ಯಿಂದ ನರಳುತ್ತಿರುವ ರೋಗಿ ಗಳಿಗೆ ಕ್ಲಿನಿಕಲ್ ಸೇವೆಯ ಮೊದಲ ವರ್ಷವನ್ನು ಪೂರೈಸಿದೆ. ಎಂಎಚ್‌ಆರ್‌ಸಿ, ಗಂಭೀರ ಹಾಗೂ ಜೀವಿತಾವಧಿಯನ್ನು ಸೀಮಿತಗೊಳಿಸುವ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಜೀವನಾಂತ್ಯದ ಆರೈಕೆ, ರೆಸ್ಪೈಟ್ (ವಿರಾಮ) ಆರೈಕೆ, ಪುನಶ್ಚೇತನ ಹಾಗೂ ಪೂರಕ ಶುಶ್ರೂಷೆಯನ್ನು ಒದಗಿಸುವ ವಿಶೇಷ ಆರೋಗ್ಯ ಸೇವಾಕೇಂದ್ರವಾಗಿದೆ ಎಂದರು.
ಇದು ರೋಗಿಯ ಕುಟುಂಬದೊಂದಿಗೆ ಸೌಹಾರ್ದದಿಂದ ವ್ಯವಹರಿಸುವ ಕಾರ್ಯವಿಧಾನದೊಂದಿಗೆ, ರೋಗಿಯ ವೈದ್ಯಕೀಯ ಶುಶ್ರೂಷೆ, ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಅಗತ್ಯಗಳನ್ನು ಪೂರೈಸುತ್ತದೆ. 10 ಹಾಸಿಗೆ ಗಳೊಂದಿಗೆ ಕಾರ್ಯಾರಂಭ ಮಾಡಿದ ಕೇಂದ್ರವು ಈಗ 40 ಹಾಸಿಗೆಗಳಿಗೆ ವಿಸ್ತರಣೆಗೊಂಡಿದ್ದು, ಮೊದಲ ವರ್ಷದಲ್ಲಿ 694 ರೋಗಿಗಳಿಗೆ ಆರೈಕೆ ನೀಡಿದೆ ಹಾಗೂ 1,300ಕ್ಕೂ ಹೆಚ್ಚು ಕುಟುಂಬದ ಆರೈಕೆದಾರರಿಗೆ ಬೆಂಬಲ ಒದಗಿಸಿದೆ. ಈ ಎಲ್ಲ ಸೇವೆಗಳನ್ನು ಕೇಂದ್ರ ಸಂಪೂರ್ಣ ಉಚಿತವಾಗಿ ನೀಡಿದೆ ಎಂದು ಡಾ.ಬಲ್ಲಾಳ್ ವಿವರಿಸಿದರು.
ಮಾಹೆಯ ಕುಲಪತಿ ಡಾ.ಶರತ್ ಕೆ.ರಾವ್ ಮಾತನಾಡಿ, 2026ರಲ್ಲಿ ಕೇಂದ್ರದಲ್ಲಿ ನರ-ಉಪಶಾಮಕ ಆರೈಕೆಗೆ (ನ್ಯೂರೋಪ್ಯಾಲಿಯೇಟಿವ್ ಕೇರ್) ವಿಶೇಷ ಒತ್ತು ನೀಡಿ 65 ಹಾಸಿಗೆಗಳಿಗೆ ಹಾಗೂ 2027ರಲ್ಲಿ 100 ಹಾಸಿಗೆಗಳಿಗೆ ವಿಸ್ತರಿಸಲು ಎಂಎಚ್‌ಆರ್‌ಸಿ ಯೋಜನೆಯನ್ನು ಹಾಕಿಕೊಂಡಿದೆ. ಕೆಎಂಸಿ ಮಣಿಪಾಲದ ಪ್ಯಾಲಿಯೇಟಿವ್ ಮೆಡಿಸಿನ್ ಆ್ಯಂಡ್ ಸಪೋರ್ಟಿವ್ ಕೇರ್ ವಿಭಾಗದ ಹೊರರೋಗಿ ವಿಭಾಗದ (ಒಪಿಡಿ) ಮೂಲಕ ಸೋಮವಾರ ದಿಂದ ಶನಿವಾರ ದವರೆಗೆ ಎಂಎಚ್‌ಆರ್‌ಸಿಗೆ ದಾಖಲಾತಿ ಪಡೆಯಬಹುದು. ಹಾಸ್ಪೈಸ್ ಆರೈಕೆ ಕುರಿತಾದ ತಪ್ಪು ಕಲ್ಪನೆ ಗಳನ್ನು ಹೋಗಲಾಡಿಸಲು ಕೂಡ ಎಂಎಚ್‌ಆರ್‌ಸಿ ಶ್ರಮಿಸುತ್ತಿದೆ ಎಂದು ಅವರು ಹೇಳಿದರು.
ಇದು ವೃದ್ಧಾಶ್ರಮವಲ್ಲ; ವೃತ್ತಿಪರ ವೈದ್ಯಕೀಯ, ಶುಶ್ರೂಷಾ, ಉಪಶಾಮಕ, ಪುನಶ್ಚೇತನ ಹಾಗೂ ಪೂರಕ ಆರೈಕೆ ಯನ್ನು ಒದಗಿಸುವ ವಿಶೇಷ ಆರೋಗ್ಯ ಸೇವಾ ಕೇಂದ್ರವಾಗಿದೆ ಎಂದರು. ಭಾರತದಲ್ಲಿ ಇಂಥ ಕೇಂದ್ರ ಇರುವುದು ಭುವನೇಶ್ವರ ಹಾಗೂ ಬೆಂಗಳೂರಿನಲ್ಲಿ ಮಾತ್ರ. ಇವುಗಳಲ್ಲಿ ಮಣಿಪಾಲ ಕೇಂದ್ರವೇ ಅತ್ಯಂತ ದೊಡ್ಡದು ಎಂದು ಡಾ.ಶರತ್ ಕುಮಾರ್ ನುಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಹ ಕುಲಪತಿ ಮೇಜರ್ ಜನರಲ್ (ಡಾ.) ಮ್ಯಾಥ್ಯೂಸ್ ಜೇಕಬ್, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಎಂಎಚ್‌ಆರ್‌ಸಿಯ ನಿರ್ದೇಶಕರಾದ ಉಪಶಾಮಕ ವೈದ್ಯಶಾಸ್ತ್ರ ಸಲಹಾ ತಜ್ಞೆ ಡಾ. ಸೀಮಾ ಆರ್. ರಾವ್ ಹಾಗೂ ಸಂಶೋಧನಾ ನಿರ್ದೇಶಕ ಮತ್ತು ಉಪಶಾಮಕ ವೈದ್ಯಶಾಸ್ತ್ರ ಮತ್ತು ಪೂರಕ ಆರೈಕೆ ವಿಭಾಗದ ಪ್ರಾಧ್ಯಾಪಕ ಡಾ. ನವೀನ್ ಸಾಲಿನ್ಸ್ ಉಪಸ್ಥಿತರಿದ್ದರು.
ಅ.10ರಂದು ರನ್ ಫಾರ್ ಡಿಗ್ನಿಟಿ
ವಿಶ್ವ ಹಾಸ್ಪೈಸ್ ಮತ್ತು ಉಪಶಾಮಕ ಆರೈಕೆ ದಿನಾಚರಣೆಯ ಅಂಗವಾಗಿ ಅ.10ರಂದು ಮಣಿಪಾಲದ ಹಾಸ್ಪೈಸ್ ಆ್ಯಂಡ್ ರೆಸ್ಪೈಟ್ ಸೆಂಟರ್ (ಎಂಎಚ್‌ಆರ್‌ಸಿ) ‘ರನ್ ಆ್ಯಂಡ್ ರೈಡ್ ಫಾರ್ ಡಿಗ್ನಿಟಿ’ ಕಾರ್ಯಕ್ರಮವನ್ನು ಆಯೋಜಿ ಸಿದೆ. ಹಾಸ್ಪೈಸ್ ಮತ್ತು ಉಪಶಾಮಕ ಆರೈಕೆ ಕುರಿತು ಜಾಗೃತಿ ಮೂಡಿಸಲು ಕರಾವಳಿ ಕರ್ನಾಟಕದ ವಿವಿಧ ಕ್ಲಬ್‌ಗಳ ಓಟಗಾರರು ಹಾಗೂ ಸೈಕ್ಲಿಸ್ಟ್‌ಗಳು ಬೆಳಗ್ಗೆ 5:15ಕ್ಕೆ ಮಂಗಳೂರಿನ ಲಾಲ್‌ಬಾಗ್ ಬಳಿ ಕಾರ್ಪೋರೇಷನ್ ವೃತ್ತದಿಂದ ಮಣಿಪಾಲದ ಎಂಎಚ್‌ಆರ್‌ಸಿವರೆಗೆ ಸುಮಾರು 68ಕಿ.ಮೀ. ದೂರವನ್ನು ಕ್ರಮಿಸಲಿದ್ದಾರೆ ಎಂದು ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ತಿಳಿಸಿದರು.
ತನ್ನ ಆರೋಗ್ಯ ಸೇವಾ ವ್ಯವಸ್ಥೆಯೊಳಗೆ ಸುಸಜ್ಜಿತ ಹಾಸ್ಪೈಸ್ ಸೆಂಟರ್ ಸ್ಥಾಪಿಸಿದ ಭಾರತದ ಏಕೈಕ ವಿವಿ ಮಾಹೆ ಆಗಿದೆ. ಮಾಹೆಯು ಇಲ್ಲಿನ ಸೇವೆಗಳನ್ನು ಉಚಿತವಾಗಿ ನೀಡಲು ನಿರ್ಧರಿಸಿದೆ ಎಂದೂ ಅವರು ಹೇಳಿದರು.