ಸಾಂದರ್ಭಿಕ ಚಿತ್ರ Photo: AI

ಉಡುಪಿ, ಅ.6: ಮರಣೋತ್ತರ ಪರೀಕ್ಷಾ ಕೇಂದ್ರ ಹಾಗೂ ವಿಧಿವಿಜ್ಞಾನ ಕೇಂದ್ರಗಳಲ್ಲಿ ಪರೀಕ್ಷೆಗೆ ಒಳಪಡಿಸಿ, ಪರೀಕ್ಷಾ ವರದಿಯಲ್ಲಿ ಸಹಜ ಸಾವು ಎಂದು ದೃಢಪಟ್ಟಿದ್ದ ಅಪರಿಚಿತ ಮೃತದೇಹಗಳ ಅಂಗಾಂಗಗಳನ್ನು ಕಾನೂನು ಪ್ರಕ್ರಿಯೆಯಂತೆ ವಿಲೇವಾರಿ ಮಾಡಲಾಯಿತು.

ಕಳೆದ ಎರಡು ವರ್ಷಗಳಲ್ಲಿ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಪತ್ತೆಯಾದ ಅಪರಿಚಿತ ಮೃತದೇಹಗಳ ಮರಣೋತ್ತರ ಪರೀಕ್ಷೆಗಾಗಿ ಅಂಗಾಂಗಗಳನ್ನು ಪರೀಕ್ಷಾ ಕೇಂದ್ರಗಳಿಗೆ ರವಾನಿಸಲಾಗಿತ್ತು. ಪರೀಕ್ಷೆ ಪೂರ್ಣಗೊಂಡ ಬಳಿಕ ರಾಸಾಯನಿಕ ದ್ರಾವಣದಲ್ಲಿ ಸುರಕ್ಷಿತವಾಗಿ ಹಲವು ಡಬ್ಬಿಗಳಲ್ಲಿದ್ದ ಮೃತದೇಹಗಳ ಅಂಗಾಂಗಗಳು ಮಲ್ಪೆ ಪೊಲೀಸ್ ಠಾಣೆಗೆ ವಾಪಸ್ಸಾಗಿದ್ದವು.

ಈ ಅಂಗಾಂಗಗಳನ್ನು ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಬೀಡಿನಗುಡ್ಡೆ ದಫನಭೂಮಿಯಲ್ಲಿ ಜೆಸಿಬಿ ಯಂತ್ರದ ನೆರವಿನಿಂದ ದಫನ ಮಾಡಲಾಯಿತು. ಸಂಬಂಧಪಟ್ಟ ಮೃತದೇಹಗಳ ದಫನ ಕಾರ್ಯವು ಈ ಹಿಂದೆಯೇ ನಡೆಸಲಾಗಿತ್ತು.

ಮಲ್ಪೆ ಪೊಲೀಸ್ ಠಾಣೆಯ ಎಸ್ಐ ಅನಿಲ್, ಎಎಸ್ಐ ಹರೀಶ್ ಹಾಗೂ ಮುಖ್ಯ ಆರಕ್ಷಕಿ ಸಿಂಚನ ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ನಡೆಸಿದರು. ಸಮಾಜಸೇವಕ ನಿತ್ಯಾನಂದ ಒಳಕಾಡು ದಫನ ಕಾರ್ಯಕ್ಕೆ ನೆರವು ನೀಡಿದರು. ಶಬ್ಬೀರ್ ಮುಸ್ತಾಕ್ ಸಹಕಾರ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor