ಉಡುಪಿ, ಅ.6: ಉಡುಪಿ ಜಿಲ್ಲಾ ಅಂಬೇಡ್ಕರ್ ಯುವ ಸೇನೆ, ವಿವಿಧ ಸಹಭಾಗಿ ಸಂಘಟನೆಗಳ ಸಹಯೋಗದಲ್ಲಿ ನಾಲ್ಕನೇ ವರ್ಷದ ಮಹಿಷ ಮಹೋತ್ಸವ ಮೂಲನಿವಾಸಿಗಳ ಸಾಂಸ್ಕೃತಿಕ ಹಬ್ಬವನ್ನು ಅ.11ರಂದು ಉಡುಪಿಯಲ್ಲಿ ಆಚರಿಸಲಿದೆ ಎಂದು ಅಂಬೇಡ್ಕರ್ ಸೇನೆಯ ಜಿಲ್ಲಾದ್ಯಕ್ಷ ಗಣೇಶ್ ನೆರ್ಗಿ ತಿಳಿಸಿದ್ದಾರೆ.

ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಗಣೇಶ್ ನೆರ್ಗಿ, ಯಾವುದೇ ಧರ್ಮ ಅಥವಾ ಸರಕಾರದ ವಿರುದ್ದ ಈ ಮಹಿಷ ಮಹೋತ್ಸವವನ್ನು ನಡೆಸುತ್ತಿಲ್ಲ. ಇದು ಪುರಾಣ, ಮೌಢ್ಯ ಹಾಗೂ ಅವೈಜ್ಞಾನಿಕ ಸಂಪ್ರದಾಯಗಳ ವಿರುದ್ಧ ನಾಡಿನ ಮೂಲನಿವಾಸಿಗಳು ಆಚರಿಸುತ್ತಿರುವ ಹಬ್ಬ. ಭಾರತದ ಸಂವಿಧಾನ ನೀಡಿರುವ ಧಾರ್ಮಿಕ ಸ್ವಾತಂತ್ರ್ಯಕ್ಕೆ ಅನುಗುಣವಾಗಿ ಉಡುಪಿಯಲ್ಲಿ ಮಹಿಷ ಮಹೋತ್ಸವನ್ನು ಆಚರಿಸಲಾಗುತ್ತಿದೆ ಎಂದವರು ಸಮರ್ಥಿಸಿಕೊಂಡರು.

ಮಹಿಷನ ಕುರಿತು ಸ್ಥಾಪಿತ ಹಿತಾಸಕ್ತಿಗಳು ಹಲವಾರು ಮಿಥ್ಯೆಗಳನ್ನು ಸೃಷ್ಟಿಸಿ ಮೂಲನಿವಾಸಿಗಳನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ. ಇತಿಹಾಸ ಪುರುಷ ಮಹಿಷ ಸತ್ಯ. ಪುರಾಣ ವ್ಯಕ್ತಿ ಚಾಮುಂಡಿ ಮಿಥ್ಯೆಯೆಂಬುದನ್ನು ಪ್ರಚುರ ಪಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದವರು ಹೇಳಿದರು.

ಉಡುಪಿ ಬನ್ನಂಜೆಯ ನಾರಾಯಣಗುರು ಸಭಾಭವನದಲ್ಲಿ ಅ.11ರ ರವಿವಾರ ಬೆಳಗ್ಗೆ 10:30ಕ್ಕೆ ಈ ಕಾರ್ಯಕ್ರಮ ನಡೆಯಲಿದೆ.ಮೈಸೂರಿನ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಲಿ ದ್ದಾರೆ. ಗಣೇಶ್ ನೆರ್ಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಮಲೆನಾಡು ಕರಾವಳಿ ಜನಪರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುಧೀರ್‌ಕುಮಾರ್ ಮುರೋಳಿ, ಬೆಂಗಳೂರಿನ ರೈತ ಕೂಲಿ ಸಂಗ್ರಾಮ ಸಮಿತಿಯ (ಆರ್‌ಸಿಎಸ್‌ಎಸ್) ರಾಜ್ಯಾಧ್ಯಕ್ಷ ಎಂ.ಶಿವಣ್ಣ ಕಂದೆಗಾಲ, ಬಹುಜನ ಚಿಂತಕ ಉಡುಪಿಯ ನಾರಾಯಣ ಮಣೂರು ಭಾಗವಹಿಸಲಿದ್ದಾರೆ.

ದಸಂಸ ರಾಜ್ಯ ಸಂಚಾಲಕರಾದ ಡಾ.ಉದಯಕುಮಾರ್ ತಲ್ಲೂಉ, ರಾಜ್ಯ ಸಂಘಟನಾ ಸಂಚಾಲಕ ಶೇಖರ ಹಾವಂಜೆ, ಅಂಬೇಡ್ಕರ್ ಸೇನೆ ಜಿಲ್ಲಾಧ್ಯಕ್ಷ ಸತೀಶ್ ಕಂಚುಗೋಡು, ದಸಂಸ ಜಿಲ್ಲಾ ಸಂಚಾಲಕ ವಾಸುದೇವ ಮದ್ದೂರು, ಉಡುಪಿ ಜಿಲ್ಲಾ ಬೋವಿ ವಡ್ಡರ್ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಶಿವಕುಮಾರ್ ಪರ್ಕಳ ಉಪಸ್ಥಿತರಿರುವರು.

ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ದಲಿತ ದೌರ್ಜನ್ಯ ಜಾಗೃತಿ ಸಮಿತಿಯ ನಿರ್ದೇಶಕ ಯು.ಪರಮೇಶ್ವರ ಹಾಗೂ ಜಿಲ್ಲಾ ಕಾಂಗ್ರೆಸ್‌ನ ನೂತನ ಜಿಲ್ಲಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು ಇವರನ್ನು ಸನ್ಮಾನಿಸಲಾಗುವುದು ಎಂದು ಗಣೇಶ ನೆರ್ಗಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎಸ್‌ಸಿ ಎಸ್‌ಟಿ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಯು.ಪರಮೇಶ್ವರ, ದಲಿತ ಚಿಂತಕ ಜಯನ್ ಮಲ್ಪೆ, ಬೋವಿ ವಡ್ಡರ್ ಸಂಘದ ಶಿವಕುಮಾರ್ ಪರ್ಕಳ, ಅಂಬೇಡ್ಕರ್ ಯುವಸೇನೆಯ ವಸಂತ ಪಾದೆಬೆಟ್ಟು, ರವಿರಾಜ್ ಲಕ್ಷ್ಮೀನಗರ, ಹರೀಶ್ ಸಾಲ್ಯಾನ್, ಸತೀಶ್ ಮಂಚಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor