×
Ad

ಉಡುಪಿ ಜಿಲ್ಲೆಯ ಬ್ಯಾಂಕ್‌ಗಳ ವ್ಯವಹಾರದಲ್ಲಿ ಶೇ.10.55ರಷ್ಟು ಪ್ರಗತಿ: ಲೀಡ್ ಬ್ಯಾಂಕ್ ಸಭೆಗೆ ಡಿಜಿಎಂ ಪ್ರಸಾದ್‌ರಾಯ್ ಮಾಹಿತಿ

Update: 2025-09-10 20:23 IST

ಉಡುಪಿ, ಸೆ.10: ಕಳೆದೊಂದು ಆರ್ಥಿಕ ವರ್ಷದಲ್ಲಿ ಉಡುಪಿ ಜಿಲ್ಲೆಯ ಬ್ಯಾಂಕುಗಳ ಒಟ್ಟಾರೆ ವ್ಯವಹಾರದಲ್ಲಿ ಶೇ.10.55ರಷ್ಟು ಪ್ರಗತಿ ಕಂಡುಬಂದಿದೆ. ಕಳೆದ ವರ್ಷ 58,351 ಕೋಟಿ ರೂ.ಇದ್ದ ಬ್ಯಾಂಕ್‌ಗಳ ಒಟ್ಟು ವ್ಯವಹಾರ ಈಗ 64,505 ಕೋಟಿ ರೂ.ಗಳಿಗೆ ವೃದ್ಧಿಯಾಗಿದೆ ಎಂದು ಜಿಲ್ಲೆಯ ಲೀಡ್ ಬ್ಯಾಂಕ್ ಆದ ಕೆನರಾ ಬ್ಯಾಂಕಿನ ಡಿಜಿಎಂ ಹಾಗೂ ಪ್ರಾದೇಶಿಕ ಮ್ಯಾನೇಜರ್ ಮಹಾಮಾಯ ಪ್ರಸಾದ್ ರಾಯ್ ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯ ಅಗ್ರಣಿ ಬ್ಯಾಂಕ್ ಆದ ಕೆನರಾ ಬ್ಯಾಂಕಿನ ನೇತೃತ್ವದಲ್ಲಿ ಇಂದು ಮಣಿಪಾಲದ ಜಿಲ್ಲಾ ಪಂಚಾ ಯತ್‌ನ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಬ್ಯಾಂಕ್ ಶಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಳೆದ ತ್ರೈಮಾಸಿಕದ ಹಾಗೂ ಒಟ್ಟಾರೆಯಾಗಿ ವರ್ಷದ ಸಾಧನೆಗಳ ವರದಿ ಮಂಡಿಸಿ ಅವರು ಮಾತನಾಡುತಿದ್ದರು.

ಈ ಅವಧಿಯಲ್ಲಿ ಬ್ಯಾಂಕುಗಳ ಠೇವಣಿ ಸಂಗ್ರಹದಲಲ್ಲೂ ಶೇ.9.83ರಷ್ಟು (3,905 ಕೋಟಿ ರೂ.) ಹೆಚ್ಚಳವಾಗಿದ್ದು, ಅದೀಗ 43,620.43 ಕೋಟಿ ರೂ.ಗೆ ತಲುಪಿದೆ. ಅದೇ ರೀತಿ ಸಾಲ ನೀಡಿಕೆಯಲ್ಲೂ ಬ್ಯಾಂಕುಗಳು ಕಳೆದೊಂದು ವರ್ಷದಲ್ಲಿ ಶೇ.12.06ರಷ್ಟು (2,249 ಕೋಟಿ ರೂ.) ಪ್ರಗತಿ ತೋರಿಸಿದೆ. ಜಿಲ್ಲೆಯ 436 ಬ್ಯಾಂಕ್ ಶಾಖೆಗಳು ನೀಡಿರುವ ಒಟ್ಟು ಸಾಲದ ಮೊತ್ತ ಈಗ 20,884.63 ಕೋಟಿ ರೂ.ತಲುಪಿದೆ.

ಆದರೆ ಸಾಲ-ಠೇವಣಿ ಅನುಪಾತ (ಸಿ.ಡಿ. ಅನುಪಾತ)ದಲ್ಲಿ ಉಡುಪಿ ಜಿಲ್ಲೆಯ ಕಳಪೆ ಸಾಧನೆ ಮುಂದುವರಿದಿದೆ ಎಂದು ಪ್ರಸಾದ್ ರಾಯ್ ಹೇಳಿದರು. ಉಡುಪಿಯ ಸಿಡಿ ಅನುಪಾತ ಶೇ.47.88 ಆಗಿದ್ದು, ರಾಜ್ಯದಲ್ಲೇ ಕೊನೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಕೇವಲ ಉತ್ತರ ಕನ್ನಡ ಜಿಲ್ಲೆ ಮಾತ್ರ ಉಡುಪಿಗಿಂತ ಕೆಳಗಿದೆ ಎಂದು ಅವರು ವಿವರಿಸಿದರು.

ಕಳೆದ ವರ್ಷ ಉಡುಪಿಯ ಸಿಡಿ ಅನುಪಾತ 47.68 ಆಗಿದ್ದರೆ, ಈ ವರ್ಷ ಕೇವಲ ಶೇ.0.20ರಷ್ಟು ಉತ್ತಮ ಗೊಂಡಿದೆ. ರಾಜ್ಯದ ಸಿಡಿ ಅನುಪಾತ ಶೇ.77.27 ಆಗಿದೆ. ಜಿಲ್ಲೆ ಸಿಡಿ ಅನುಪಾತದಲ್ಲಿ ಇನ್ನಷ್ಟು ಸುಧಾರಣೆ ಕಾಣಲೇ ಬೇಕಿದೆ. ಆರ್‌ಬಿಐ ನಿಯಮಾವಳಿಯಂತೆ ಇದು ಕನಿಷ್ಠ ಶೇ.50ಕ್ಕಿಂತ ಮೇಲಿರಬೇಕಿದೆ ಎಂದು ಅವರು ಹೇಳಿದರು.

ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್ ಜಿ. ಅವರು ಮಾತನಾಡಿ, ಕಳೆದ ಐದು ವರ್ಷಗಳಲ್ಲಿ ಕೇವಲ 2018-19ನೇ ಸಾಲಿನಲ್ಲಿ ಮಾತ್ರ ಜಿಲ್ಲೆಯ ಸಿ.ಡಿ. ಅನುಪಾತ ಶೇ. 50.32ರಷ್ಟಿತ್ತು. ನಂತರದ ವರ್ಷಗಳಲ್ಲಿ ಇದು ಸತತವಾಗಿ ಶೇ.50ಕ್ಕಿಂತ ಕಡಿಮೆಯೇ ಇದೆ. ಎಲ್ಲಾ ಬ್ಯಾಂಕರ್ಸ್‌ಗಳು ಸಿ.ಡಿ ಅನುಪಾತವನ್ನು ಹೆಚ್ಚಿಸಲು ಕಾರ್ಯಪ್ರವೃತ್ತ ರಾಗಬೇಕಾಗಿದೆ. ಇದಕ್ಕಾಗಿ ಸಾಲ ನೀಡಿಕೆಯನ್ನು ಹೆಚ್ಚಿಸಬೇಕಾಗಿದೆ ಎಂದರು.

ಪ್ರಸಕ್ತ ಸಾಲಿನಲ್ಲಿ ಜಿಲ್ಲೆಗೆ ಆದ್ಯತಾ ವಲಯ ಮತ್ತು ಆದ್ಯತೇತರ ವಲಯಗಳೆರಡಕ್ಕೂ ಒಟ್ಟಾರೆಯಾಗಿ 15,514.08 ಕೋಟಿ ರೂ.ಗಳ ವಾರ್ಷಿಕ ಕ್ರಿಯಾಯೋಜನೆಯ ಗುರಿಯನ್ನು ನಿಗದಿಪಡಿಸಲಾಗಿದೆ. ಇದು ಕಳೆದ ಸಾಲಿಗಿಂತ ಶೇ.30ರಷ್ಟು ಅಧಿಕವಾಗಿದೆ. ಇದರಲ್ಲಿ ಕೃಷಿ, ಎಂಎಸ್‌ಎಂಇ ಸೇರಿದಂತೆ ಆದ್ಯತಾ ವಲಯಕ್ಕೆ 9040 ಕೋಟಿ ರೂ.ಗಳನ್ನು ನಿಗದಿ ಪಡಿಸಲಾಗಿದೆ ಎಂದು ಹರೀಶ್ ವಿವರಿಸಿದರು.

ಕೇಂದ್ರ ಮತ್ತು ರಾಜ್ಯ ಸರಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಬ್ಯಾಂಕುಗಳು ನೀಡುವ ಸಾಲದ ಕುರಿತು ವಿವರಿಸಿದ ಹರೀಶ್, ಪಿ.ಎಂ. ವಿಶ್ವಕರ್ಮ ಯೋಜನೆಯಡಿ ಆರ್ಥಿಕ ನೆರವು ನೀಡುವಲ್ಲಿ ವಿವಿಧ ಬ್ಯಾಂಕುಗಳು ಇನ್ನಷ್ಟು ಮುತುವರ್ಜಿ ತೋರಿಸಬೇಕಿದೆ ಎಂದು ಹೇಳಿದರು.

ಸೆ.4ರವರೆಗಿನ ಮಾಹಿತಿಯಂತೆ ಪಿಎಂ ವಿಶ್ವಕರ್ಮ ಯೋಜನೆಯಲ್ಲಿ ಒಟ್ಟು 5597 ಅರ್ಜಿಗಳು ಸಲ್ಲಿಕೆಯಾಗಿದ್ದು, ಇವುಗಳಲ್ಲಿ 3821 ಅರ್ಜಿಗಳಿಗೆ ಒಟ್ಟು 37.66 ಕೋಟಿ ರೂ. ಮಂಜೂರಾಗಿದೆ. ಇದರಲ್ಲಿ ಈವರೆಗೆ 3532 ಫಲಾ ನುಭವಿಗಳಿಗೆ 34.61 ಕೋಟಿ ರೂ. ಸಾಲ ವಿತರಿಸಲಾಗಿದೆ. 1256 ಅರ್ಜಿಗಳನ್ನು ವಿವಿಧ ಕಾರಣಗಳಿಂದ ತಿರಸ್ಕರಿಸಲಾಗಿದೆ. 3.05 ಕೋಟಿ ರೂ. ಮೊತ್ತದ 520 ಅರ್ಜಿಗಳು ಮಂಜೂರಾತಿಗೆ ಇನ್ನೂ ಕಾದಿವೆ. ಬ್ಯಾಂಕುಗಳು ತಿರಸ್ಕರಿಸುವ ಅರ್ಜಿಗಳ ಸಂಖ್ಯೆ ಕಡಿಮೆಯಾಗಬೇಕಿದ್ದು, ಬಾಕಿ ಇರುವ ಅರ್ಜಿಗಳ ವಿಲೇವಾರಿಗೆ ಶೀಘ್ರವೇ ಕ್ರಮಕೈಗೊಳ್ಳಬೇಕು ಎಂದು ವಿವಿಧ ಬ್ಯಾಂಕ್ ಶಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು.

ರಾಜ್ಯ ಹಾಗೂ ಕೇಂದ್ರ ಪ್ರಾಯೋಜಿತ ಯೋಜನೆಗಳಡಿ ಆಯ್ಕೆಯಾಗಿ ಆರ್ಥಿಕ ನೆರವಿಗೆ ವಿವಿಧ ಇಲಾಖೆಗಳಿಂದ ಶಿಫಾರಸ್ಸುಗೊಂಡಿರುವ ಅರ್ಜಿಗಳನ್ನು ಆದ್ಯತೆಯ ಮೇಲೆ ಜನರಿಗೆ ಅನುಕೂಲವಾಗುವಂತೆ ಸರಳ ರೀತಿಯಲ್ಲಿ ವಿಲೇವಾರಿ ಮಾಡುವಂತೆ ಅವರು ತಿಳಿಸಿದರು.

ಜಿಲ್ಲೆಯಲ್ಲಿ 2025-26ನೇ ಸಾಲಿನ ಆರ್ಥಿಕ ವರ್ಷದಲ್ಲಿ ಕೃಷಿ ವಲಯಕ್ಕೆ ನಿಗದಿತ ಗುರಿ 4230 ಕೋಟಿ ರೂ. ಆಗಿದ್ದು, ಜೂನ್ 30ರವರೆಗೆ 1145 ಕೋಟಿ ರೂ.ಸಾಲ ನೀಡಿ ಶೇ.27.06ರಷ್ಟು ಗುರಿ ಸಾಧಿಸಲಾಗಿದೆ. ಅದೇ ರೀತಿ ಎಂಎಸ್‌ಎಂಇ ವಲಯಕ್ಕೆ 3713 ಕೋಟಿ ರೂ. ಗುರಿ ಇದ್ದು, ಜೂನ್‌ವರೆಗೆ 1569 ಕೋಟಿ ರೂ. ವಿತರಿಸಿ ಶೇ. 42.26ರಷ್ಟು ಗುರಿ ಸಾಧಿಸಲಾಗಿದೆ. ಇನ್ನು ಶಿಕ್ಷಣ ವಲಯಕ್ಕೆ 187 ಕೋಟಿ ರೂ. ನಿಗದಿತ ಗುರಿಯಲ್ಲಿ 33 ಕೋಟಿ ರೂ. ನೀಡಿ ಶೇ. 17.42ರಷ್ಟು, ಹಾಗೂ ವಸತಿ ಸಾಲಕ್ಕೆ 510 ಕೋಟಿ ರೂ. ಗುರಿಯಲ್ಲಿ 52 ಕೋಟಿ ರೂ.ಸಾಧಿಸಿ ಶೇ. 10.23ರಷ್ಟು ಸಾಧನೆ ಮಾಡಲಾಗಿದೆ ಎಂದರು.

ಸಭೆಯಲ್ಲಿ ರಿಸರ್ವ್ ಬ್ಯಾಂಕ್ ಬೆಂಗಳೂರು ವಲಯ ಎಲ್‌ಡಿಓ ಅಲೋಕ್ ಸಿನ್ಹಾ, ನಬಾರ್ಡ್‌ನ ಡಿಡಿಎಂ ಸಂಗೀತಾ ಕರ್ಥಾ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ಬ್ಯಾಂಕುಗಳ ಮುಖ್ಯಸ್ಥರುಗಳು ಉಪಸ್ಥಿತರಿದ್ದರು.




 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News