ಫೆ.18ರಂದು ಕಾಶ್ಮೀರ ಕುರಿತ ಪುಸ್ತಕ ಲೋಕಾರ್ಪಣೆ
ಉಡುಪಿ: ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದನಾ ಘಟನೆಗಳ ಕುರಿತು ಪ್ರತ್ಯಕ್ಷದರ್ಶಿ ಅನುಭವಗಳ ಮೂಲಕ ರೂಪಿತವಾದ ಕಾಶ್ಮೀರಿ ಪಂಡಿತ ಕುಟುಂಬದಿಂದ ಬಂದ, ಸದ್ಯ ಮಣಿಪಾಲ ಕೆಎಂಸಿಯಲ್ಲಿ ಪ್ರಾಧ್ಯಾಪಕರಾಗಿರುವ ಡಾ.ರಾಹುಲ್ ಮ್ಯಾಗಝೀನ್ ಅವರು ಬರೆದ ಆಂಗ್ಲ ಕೃತಿಯ ಕನ್ನಡ ಅನುವಾದ ‘ಕಣ್ಣೀರ ಕಣಿವೆ-ಕಾಶ್ಮೀರದ ನೆಲದಿಂದ ನೆಲೆ ಕಳೆದುಕೊಂಡವರ ಕಥೆ’ ಕೃತಿ ಇದೇ ಫೆ.18ರಂದು ಉಡುಪಿಯಲ್ಲಿ ಲೋಕಾರ್ಪಣೆಗೊಳ್ಳಲಿದೆ.
ಆಂಗ್ಲ ಕೃತಿಯ ಕನ್ನಡ ಅನುವಾದಕ, ನಿವೃತ್ತ ಆಂಗ್ಲ ಉಪನ್ಯಾಸಕ, ಸಾಹಿತಿ ಉದಯಕುಮಾರ ಹಬ್ಬು ಅವರು ಉಡುಪಿಯಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಫೆ.18ರ ಸಂಜೆ 4:30ಕ್ಕೆ ಕೃತಿ ಲೋಕಾರ್ಪಣೆಗೊಳ್ಳಲಿದೆ ಎಂದು ಅವರು ತಿಳಿಸಿದರು.
ಮಣಿಪಾಲ ಕೆಎಂಸಿಯಲ್ಲಿ ರೆಸ್ಪಿರೇಟರಿ ಮೆಡಿಸಿನ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಡಾ.ರಾಹುಲ್ ಮ್ಯಾಗಝೀನ್, 1990ರಿಂದ ಕಾಶ್ಮೀರ ಕಣಿವೆಯಲ್ಲಿ ನಡೆದ ಭಯೋತ್ಪಾದಕ ಚಟುವಟಿಕೆಗಳಿಂದ ಕಾಶ್ಮೀರದಲ್ಲಿದ್ದ ಕಾಶ್ಮೀರಿ ಪಂಡಿತರು ಜಮ್ಮುವಿಗೆ ಪಲಾಯನ ಮಾಡಬೇಕಾಗಿ ಬಂದ ಪರಿಸ್ಥಿತಿಯನ್ನು ತನ್ನ ‘ಆ್ಯಂಡ್ ದ ವ್ಯಾಲಿ ರಿಮೈಂಡ್ ಸೈಲೆಂಟ್’ ಕೃತಿಯಲ್ಲಿ ಬಣ್ಣಿಸಿದ್ದಾರೆ ಎಂದು ಹಬ್ಬು ವಿವರಿಸಿದರು.
ಕೃತಿಯನ್ನು ಅಯೋಧ್ಯ ಪ್ರಕಾಶನದ ರೋಹಿತ್ ಚಕ್ರತೀರ್ಥ ಬಿಡುಗಡೆಗೊಳಿಸಲಿದ್ದು, ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರು ಅಧ್ಯಕ್ಷತೆ ವಹಿಸಲಿದ್ದಾರೆ. ಡಾ.ರಾಹುಲ್ ಅವರ ತಂದೆ ಶ್ರೀನಗರ ಆರ್‌ಇಸಿಯ ನಿವೃತ್ತ ಪ್ರಾಧ್ಯಾಪಕ ಡಾ.ಮನಮೋಹನಲಾಲ್ ಕಿಶನ್ ಹಾಗೂ ಮೂಲಲೇಖಕ ಡಾ.ರಾಹುಲ್ ಮ್ಯಾಗಝೀನ್ ಉಪಸ್ಥಿತರಿರುವರು