ಫೆ.2: ಬ್ರಾಹ್ಮಣ ಅಭಿವೃದ್ಧಿ ನಿಗಮದಿಂದ ಮಾಹಿತಿ ಕಾರ್ಯಕ್ರಮ
ಉಡುಪಿ: ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ ಆಶ್ರಯ ದಲ್ಲಿ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ನಿಗಮದಿಂದ ಬ್ರಾಹ್ಮಣ ಸಮುದಾಯಕ್ಕೆ ಸಿಗುವ ನಾನಾ ಸೌಲಭ್ಯಗಳ ಬಗ್ಗೆ ಮಾಹಿತಿ ಕಾರ್ಯಕ್ರಮ ಫೆ.2ರಂದು ಸಂಜೆ 4 ಗಂಟೆಗೆ ನಗರದ ಗೋವಿಂದ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಶ್ರೀಕಾಂತ ಉಪಾಧ್ಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ನಿಗಮದ ನಿರ್ದೇಶಕ ಪಿ.ಎಂ. ಮಾಲ್ತೇಶ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಜ್ಯೋತಿ ಕೃಷ್ಣ ಹೆಬ್ಬಾರ್, ಉಡುಪಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಉಪಸ್ಥಿತರಿರುವರು ಎಂದರು.
ನಿಗಮಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಂದ ಬ್ರಾಹ್ಮಣ ಸಮುದಾಯಕ್ಕೆ ವಿವಿಧ ನಿಗಮಗಳಿಂದ ದೊರೆಯುವ ನಾನಾ ಸವಲತ್ತುಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಅವರು ತಿಳಿಸಿದರು.
ಸೌಲಭ್ಯ ಪಡೆಯಲು ರಾಜ್ಯ ನಿವಾಸಿಗಳಾದ ಬ್ರಾಹ್ಮಣ ಸಮುದಾಯದ 18ರಿಂದ 60 ವರ್ಷದೊಳಗಿನವರಾಗಿರ ಬೇಕು. ಆದಾಯ ತೆರಿಗೆ ಪಾವತಿದಾರ ರಾಗಿರಬಾರದು. ಇಎಸ್‌ಐ ಹಾಗೂ ಇಪಿಎಫ್ ಸೌಲಭ್ಯ ಪಡೆಯುತ್ತಿರ ಬಾರದು. ನೊಂದಣಿಗೆ ಅರ್ಜಿ ಸಲ್ಲಿಸುವಾಗ ಆಧಾರ್ ಕಾರ್ಡ್, ರೇಷನ್ ಕಾರ್ಡ ಹಾಗೂ ಬ್ಯಾಂಕ್ ಪಾಸ್‌ಪುಸ್ತಕ ತರಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಮಹಾಸಭಾದ ಪದಾಧಿಕಾರಿಗಳಾದ ದುರ್ಗಾಪ್ರಸಾದ್ ಭಾರ್ಗವ, ಹಯವದನ ಭಟ್ಟ, ಶ್ರೀನಿವಾಸ ಬಲ್ಲಾಳ್ ಮಲ್ಲಂಪಳ್ಳಿ, ಹವ್ಯಕ ಮಹಾಸಭಾದ ಪ್ರೊ.ಶಂಕರ್, ರಾಜೇಂದ್ರ ಭಟ್ ಮತ್ತಿತರರು ಉಪಸ್ಥಿತರಿದ್ದರು.