1455 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ
ಉಡುಪಿ, ಜ.31: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ವತಿಯಿಂದ ಮಲ್ಪೆ ಏಳೂರು ಮೊಗವೀರ ಭವನದಲ್ಲಿ ಶನಿವಾರ ಆಯೋಜಿಸಲಾದ ಉಡುಪಿ ಜಿಲ್ಲೆಯ 1455 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಸಮಾರಂಭ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉಡುಪಿಯ ಮನೋ ವೈದ್ಯ ಡಾ. ಪಿ.ವಿ.ಭಂಡಾರಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಜೀವನ ದಲ್ಲಿ ಯಶಸ್ವಿಯಾಗಲು ಶೈಕ್ಷಣಿಕ ಸಾಧನೆಯ ಜೊತೆ ಜೊತೆಗೆ ಸವಾಲುಗಳನ್ನು ಎದುರಿಸಲು ಧನಾತ್ಮಕ ಚಿಂತನೆಯೊಂದಿಗೆ ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸಿಕೊಳ್ಳುವುದು ಅಗತ್ಯವಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲ ಅಶೋಕ್ ಕಾಮತ್ ಮಾತನಾಡಿದರು. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ, ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ವಹಿಸಿದ್ದರು. ಈ ಸಂದರ್ಭದಲ್ಲಿ ಸಾಧಕರಾದ ರಾಮಚಂದ್ರ ಕುಂದರ್, ನಾಗರಾಜ ಸುವರ್ಣ ಹಾಗೂ ರಿಮ ರಾವ್ ಯು.ಬಿ. ಅವರನ್ನು ಸನ್ಮಾನಿಸಲಾಯಿತು.
ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಮಲ್ಪೆ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪಾಲ ಸಿ.ಬಂಗೇರ, ನಗರಸಭೆ ಸದಸ್ಯ ಯೋಗೀಶ್ ಸಾಲ್ಯಾನ್, ಉದ್ಯಮಿ ಆನಂದ ಪಿ. ಸುವರ್ಣ, ಮಲ್ಪೆ ಏಳೂರು ಮೊಗವೀರ ಮಹಾಜನ ಸಂಘದ ಅಧ್ಯಕ್ಷ ರತ್ನಾಕರ ಸಾಲ್ಯಾನ್, ಆಳ ಸಮುದ್ರ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಸುಭಾಷ್ ಮೆಂಡನ್, ಮಲ್ಪೆ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಅಧ್ಯಕ್ಷ ಸತೀಶ್ ಕುಂರ್ದ, ಕೋಟ ಪರ್ಸೀನ್ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ರಾಜೇಂದ್ರ ಸುವರ್ಣ, ಮಲ್ಪೆ ಮಹಿಳಾ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಗೀತಾ ಕರ್ಕೇರ, ನಗರಸಭೆಯ ಸದಸ್ಯರಾದ ಸುಂದರ ಕಲ್ಮಾಡಿ, ಎಡ್ಲಿನ್ ಕರ್ಕಡ, ಫೆಡರೇಶನ್ ಉಪಾಧ್ಯಕ್ಷ ದೇವಪ್ಪ ಕಾಂಚನ್, ವ್ಯವಸ್ಥಾಪಕ ನಿರ್ದೇಶಕಿ ದರ್ಶನ್ ಟಿ.ಕೆ. ಉಪಸ್ಥಿತರಿದ್ದರು. ವಿಜೇತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.