×
Ad

ನ.29ರಿಂದ ಎಪಿಎಂಸಿ ಅಧಿಕಾರಿಗಳ ಭ್ರಷ್ಟಾಚಾರ ಖಂಡಿಸಿ ಅಹೋರಾತ್ರಿ ಧರಣಿ

Update: 2023-11-27 18:51 IST

ಉಡುಪಿ, ನ.27: ಉಡುಪಿ ಎಪಿಎಂಸಿಯ ಅಧಿಕಾರಿಗಳ ಅವ್ಯವಹಾರ ಮತ್ತು ಭ್ರಷ್ಟಾಚಾರ ಖಂಡಿಸಿ ಉಡುಪಿ ಎಪಿಎಂಸಿ ರಕ್ಷಣಾ ಸಮಿತಿಯ ನೇತೃತ್ವ ದಲ್ಲಿ ನ.29ರಿಂದ ಅಹೋರಾತ್ರಿ ಧರಣಿಯನ್ನು ಎಪಿಎಂಸಿ ಪ್ರಾಂಣಗದ ಎದುರು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಅಧ್ಯಕ್ಷ ವಿಜಯ ಕೊಡವೂರು ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ಹಲವು ಸಮಯಗಳಿಂದ ಹೋರಾಟಗಳನ್ನು ನಡೆಸುತ್ತಿದ್ದು, ಸರಕಾರ ಯಾವುದೇ ರೀತಿಯ ಕ್ರಮ ತೆಗೆದುಕೊಂಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನದಂತೆ ಜಿಪಂ ಸಿಇಓ ನೇತೃತ್ವದಲ್ಲಿ ತನಿಖೆ ನಡೆಸಲಾಗಿದೆ. ಆದರೆ ಅದರ ವರದಿಯನ್ನು ಇನ್ನೂ ನೀಡಿಲ್ಲ ಎಂದರು.

ಬೇಡಿಕೆಗಳು: ಒಂದು ನಿವೇಶನಕ್ಕೆ 8ಲಕ್ಷ ಲಂಚ ಪಡೆದ ಅಂತಹ 11 ನಿವೇಶನಕ್ಕೆ 88ಲಕ್ಷ ಲಂಚ ಪಡೆದ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಕ್ಯಾನ್ಸರ್ ಪೀಡಿತ ವರ್ತಕನಿಂದ 250ರೂ. ಪರವಾನಿಗಾಗಿ 40ಸಾವಿರ ರೂ. ಲಂಚ ಪಡೆದ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಮರಣ ಹೊಂದಿ ಮೂರು ವರ್ಷಗಳಾದರೂ ಇಂದಿಗೂ ಆ ವ್ಯಕ್ತಿಯ ಹೆಸರಿ ನಲ್ಲಿಯೇ ಗೋಡೌನ್‌ನ ಬಾಡಿಗೆ ಪಡೆಯುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದು ಕೊಳ್ಳಬೇಕು.

ಉಡುಪಿ ಎಪಿಎಂಸಿಯಲ್ಲಿ ಮೂಲಭೂತ ಸೌಕರ್ಯವಾದ ರಸ್ತೆ, ವಿದ್ಯುತ್, ಶೌಚಾಲಯ, ನೀರು ಮತ್ತು ಸ್ವಚ್ಛತೆಯನ್ನು ಮಾಡಿ ಕೊಟ್ಟಿಲ್ಲ. ಅಂಗಡಿ, ಗೋಡೌನ್, ಏಲಂ ಕಟ್ಟೆಯಿಂದ ಎಪಿಎಂಸಿ ಅಧಿಕಾರಿಗಳಿಗೆ ಬರುವ ಒಂದು ತಿಂಗಳ ಆದಾಯ 12.50ಲಕ್ಷವಾದರೂ ಸರಕಾರಕ್ಕೆ ಕೇವಲ 4.5ಲಕ್ಷ ರೂ.ವನ್ನು ತೋರಿಸುತ್ತಿದ್ದಾರೆ. ಇಂತಹ ಭ್ರಷ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರಗಿಸಬೇಕು ಎಂದು ಅವರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಕೃಷಿ ಉತ್ಪನ್ನ ಮಾರಾಟಗಾರರ ಒಕ್ಕೂಟದ ಅಧ್ಯಕ್ಷ ಸುಭಾಷಿತ್ ಕುಮಾರ್, ಎಪಿಎಂಸಿ ಮಾಜಿ ಸದಸ್ಯ ರಮಾಕಾಂತ್ ಕಾಮತ್, ರೈತ ಮೋರ್ಚಾ ರಾಜ್ಯ ಸಮಿತಿ ಸದಸ್ಯ ರಾಘವೇಂದ್ರ ಉಪ್ಪೂರು, ಫಯಾಜ್ ಅಹ್ಮದ್, ಸಮಿತಿ ಉಪಾಧ್ಯಕ್ಷ ಪ್ರಭುಗೌಡ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News