ಡಿ.31ರವರೆಗೆ ಹೆಚ್‌ಪಿವಿ ಲಸಿಕಾ ಅಭಿಯಾನ ವಿಸ್ತರಣೆ
ಉಡುಪಿ, ಸೆ.5: ಹೆಚ್‌ಪಿವಿ ಲಸಿಕಾ ಅಭಿಯಾನವನ್ನು ಕಳೆದ ಫೆಬ್ರವರಿ 28ರಂದು ಪ್ರಾರಂಭಿಸಲಾಗಿದ್ದು, ಸುಮಾರು 1.2 ಕೋಟಿ 14 ವಷರ್ ವಯಸ್ಸಿನ ಬಾಲಕಿಯರಿಗೆ (14ನೇ ಹುಟ್ಟುಹಬ್ಬ ಆಚರಿಸಿ 15ನೇ ಹುಟ್ಟುಹಬ್ಬ ಆಚರಿಸದ ಬಾಲಕಿಯರು) ಲಸಿಕೆ ನೀಡುವುದು ಇದರ ಉದ್ದೇಶವಾಗಿದೆ. ಈಗಾಗಲೇ ಸುಮಾರು 159 ದೇಶಗಳಲ್ಲಿ ಈ ಲಸಿಕೆಯನ್ನು ನೀಡಲಾಗುತ್ತಿದೆ. ಇದೀಗ ಕೇಂದ್ರ ಸರಕಾರವು ಈ ಲಸಿಕಾ ಅಭಿಯಾನವನ್ನು ಮುಂದಿನ ಡಿ.31ರವರೆಗೂ ವಿಸ್ತರಿಸಿ ಆದೇಶ ಹೊರಡಿಸಿದೆ.
ಗರ್ಭಕಂಠದ ಕ್ಯಾನ್ಸರ್ ಎಂದರೆ ಗರ್ಭಾಶಯದ ಕೆಳಭಾಗದಲ್ಲಿರುವ ಗರ್ಭಕಂಠದಲ್ಲಿ ಉಂಟಾಗುವ ಕ್ಯಾನ್ಸರ್. ಗರ್ಭಕಂಠದ ಕ್ಯಾನ್ಸರ್‌ನ ಸುಮಾರು ಶೇ.99.7ರಷ್ಟು ಪ್ರಕರಣಗಳು ಹ್ಯೂಮನ್ ಪ್ಯಾಪಿಲೋಮಾ ವೈರಸ್ ಸೋಂಕಿಗೆ ಸಂಬಂಧಿಸಿವೆ.
ಭಾರತದಲ್ಲಿ ಮಹಿಳೆಯರಲ್ಲಿ ಕಂಡುಬರುವ ಸಾಮಾನ್ಯ ಕ್ಯಾನ್ಸರ್‌ಗಳಲ್ಲಿ ಸ್ತನ ಕ್ಯಾನ್ಸರ್ ಪ್ರಥಮ ಸ್ಥಾನದಲ್ಲಿದ್ದು, ಗರ್ಭಕಂಠದ ಕ್ಯಾನ್ಸರ್ ದ್ವಿತೀಯ ಸ್ಥಾನದಲ್ಲಿದೆ. ಹೆಚ್‌ಪಿವಿ ಲೈಂಗಿಕವಾಗಿ ಹರಡುವ ಸೋಂಕಿಗೆ ಕಾರಣವಾಗುವ ಸಾಮಾನ್ಯವಾಗಿ ಕಂಡುಬರುವ ವೈರಸ್ ಆಗಿದ್ದು, ನಿಕಟ ದೈಹಿಕ ಸಂಪರ್ಕದ ಮೂಲಕ ಹರಡುತ್ತದೆ.
ಲಸಿಕಾ ಅಭಿಯಾನದ ಪ್ರಮುಖ ಉದ್ದೇಶ ಗರ್ಭಕಂಠದ ಕ್ಯಾನ್ಸರ್‌ನ್ನು ತಡೆಗಟ್ಟುವುದಾಗಿದೆ. ಸಮಯೋಚಿತವಾಗಿ ಲಸಿಕೆ ಪಡೆಯುವುದರ ಜೊತೆಗೆ ನಿಯಮಿತವಾಗಿ ಗರ್ಭಕಂಠದ ಕ್ಯಾನ್ಸರ್ ತಪಾಸಣೆ ಮಾಡಿಸಿಕೊಳ್ಳುವುದರಿಂದ ಗರ್ಭಕಂಠದ ಕ್ಯಾನ್ಸರ್‌ನ ಅಪಾಯವನ್ನು ಕಡಿಮೆ ಮಾಡಬಹುದು. ಹೆಚ್‌ಪಿವಿ ಲಸಿಕೆಯನ್ನು ಲೈಂಗಿಕವಾಗಿ ಸಕ್ರಿಯರಾಗುವ ಮೊದಲು ನೀಡಿದಾಗ ಉತ್ತಮ ರಕ್ಷಣೆಯನ್ನು ಒದಗಿಸುತ್ತದೆ.
ಈ ಲಸಿಕೆಯನ್ನು ಭಾರತ ಸರಕಾರದ ಪ್ರಸ್ತುತ ಮಾರ್ಗಸೂಚಿಗಳ ಪ್ರಕಾರ, 14 ವಷರ್ ವಯಸ್ಸಿನ ಅಂದರೆ 14ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಇನ್ನೂ 15ನೇ ಹುಟ್ಟುಹಬ್ಬವನ್ನು ಆಚರಿಸದಿರುವ ಬಾಲಕಿಯರಿಗೆ ನೀಡಲು ಕ್ರಮವಹಿಸಲಾಗಿದೆ. ಜಾಗತಿಕ ಮಟ್ಟದಲ್ಲಿ ಲಸಿಕೆಯ ಪೂರೈಕೆ ಸೀಮಿತವಾಗಿ ರುವುದರಿಂದ, ಭಾರತವು ಪ್ರಾರಂಭಿಕ ಹಂತದಲ್ಲಿ 14 ವರ್ಷದ ಬಾಲಕಿಯರ ಮೇಲೆ ಗಮನ ಕೇಂದ್ರೀಕರಿಸಿದೆ. 15 ವರ್ಷ ವಯಸ್ಸಿನ ಗರಿಷ್ಠ ಅರ್ಹತಾ ಮಿತಿಯನ್ನು ತಲುಪುವ ಮೊದಲು ಅವರಿಗೆ ಲಸಿಕೆ ಪಡೆಯುವ ಅವಕಾಶ ಕಲ್ಪಿಸುವುದು ಇದರ ಉದ್ದೇಶವಾಗಿದೆ.
ಇದು ಏಕ ಡೋಸ್ ಲಸಿಕೆಯಾಗಿದ್ದು, ಎಡ ಮೇಲ್ಭುಜಕ್ಕೆ ಇಂಟ್ರಾಮಸ್ಕ್ಯುಲರ್ ರೀತಿಯಲ್ಲಿ ನೀಡಲಾಗುತ್ತದೆ. ಅಧ್ಯಯನಗಳ ಪ್ರಕಾರ ಈ ಲಸಿಕೆ ಸುರಕ್ಷಿತವಾಗಿದ್ದು, ಆರೋಗ್ಯಕ್ಕೆ ಯಾವುದೇ ಹಾನಿಕಾರಕ ಪರಿಣಾಮಗಳನ್ನು ಉಂಟುಮಾಡುವುದಿಲ್ಲ.
ಉಡುಪಿ ಜಿಲ್ಲೆಯಲ್ಲಿ 8,325 ಮಕ್ಕಳಿಗೆ ಈಗಾಗಲೇ ಲಸಿಕೆಯನ್ನು ನೀಡಲಾಗಿದ್ದು ಇದುವರೆಗೂ ಲಸಿಕೆ ಪಡೆದ ಯಾವುದೇ ಮಕ್ಕಳಲ್ಲಿ ಅಡ್ದ ಪರಿಣಾಮಗಳು ಉಂಟಾಗಿರುವ ಮಾಹಿತಿ ಬಂದಿಲ್ಲ. ಜಿಲ್ಲೆಯಲ್ಲಿ ಸಾಕಷ್ಟು ಲಸಿಕೆ ಲಭ್ಯತೆ ಇದ್ದು, ಸರಕಾರಿ ಆರೋಗ್ಯ ಸಂಸ್ಥೆಯಲ್ಲಿ (ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ) ಲಸಿಕೆಯನ್ನು ನೀಡಲಾಗುತ್ತಿದೆ.
ಮೇ 31ರವರೆಗೆ ನಡೆಯಲಿದ್ದ ಅಭಿಯಾನವನ್ನು ಲಸಿಕೆ ಪಡೆಯದೇ ಉಳಿದ ಅರ್ಹ ಫಲಾನುಭವಿಗಳಿಗೆ ನೀಡಲು ಹೆಚ್ಚುವರಿಯಾಗಿ ಆಗಸ್ಟ್ 31 ರವರೆಗೆ ವಿಸ್ತರಿಸಲಾಗಿತ್ತು. ಪ್ರಸುತ್ತ ಭಾರತ ಸರ್ಕಾರವು ಅಭಿಯಾನವನ್ನು ಡಿಸೆಂಬರ್ 31ರವರೆಗೆ ವಿಸ್ತರಿಸಿದೆ.
ಆದ್ದರಿಂದ 14ನೇ ಹುಟ್ಟುಹಬ್ಬ ಆಚರಿಸಿರುವ 15 ವರ್ಷ ತುಂಬದ (05-09-2011ರಿಂದ 31-12-2012) ಬಾಲಕಿಯರು ತಮ್ಮ ಪೋಷಕ ರೊಂದಿಗೆ ಹತ್ತಿರದ ಸರಕಾರಿ ಆರೋಗ್ಯ ಸಂಸ್ಥೆಯಲ್ಲಿ (ಸಿಸಿಪಿ) ಹೆಚ್‌ಪಿವಿ ಲಸಿಕೆಯನ್ನು ಪಡೆಯುವ ಮೂಲಕ ಅಭಿಯಾನದ ಸದುಪಯೋಗ ಪಡೆದು ಕೊಳ್ಳುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.