ಹರಿರಾಂ ಶಂಕರ್

ಉಡುಪಿ, ಆ.26: ಉಡುಪಿ ಜಿಲ್ಲೆಯಾದ್ಯಂತ ಕಳೆದ 25 ದಿನಗಳಿಂದ ಬರೀ ನೆತ್ತರ ಕೋಡಿ ಹರಿದ ಸುದ್ದಿಯೇ ಕೇಳಿಬರುತ್ತಿವೆ. ಈ ಅಲ್ಪಾವಧಿಯಲ್ಲಿ ಜಿಲ್ಲೆಯ ವಿವಿಧೆಡೆ ಒಟ್ಟು ನಾಲ್ಕು ಪ್ರಕರಣಗಳಲ್ಲಿ ಒಟ್ಟು ಐದು ಮಂದಿ ಕೊಲೆಯಾಗಿದ್ದಾರೆ. ಅದರಲ್ಲೂ ಎರಡು ಪ್ರಕರಣಗಳು ಶೂಟೌಟ್ ಮರ್ಡರ್ ಆಗಿರುವುದು ಆತಂಕಕಾರಿಯಾಗಿದೆ.

ಈ ಬೆಳವಣಿಗೆ ಜಿಲ್ಲೆಯ ಜನತೆಯನ್ನು ಬೆಚ್ಚಿ ಬೀಳಿಸಿದೆ.

ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕುಂದಾಪುರ ನಗರ ಚರ್ಚ್ ರಸ್ತೆಯಲ್ಲಿ ಜು.31ರಂದು ನಸುಕಿನ ವೇಳೆ ಡೆರಿಕ್ ಕ್ರಾಸ್ತಾ ಎಂಬಾತ ಐವನ್ ರಿಚರ್ಡ್ ಮಸ್ಕರೇನಸ್ ಯಾನೆ ಮುನ್ನಾ ಎಂಬವರನ್ನು ಗನ್‌ನಿಂದ ಗುಂಡಿಕ್ಕಿ ಕೊಲೆ ಮಾಡಿದ್ದನು. ಇದು ನಡೆದ ಕೇವಲ ಏಳು ದಿನಗಳ ಅಂತರದಲ್ಲಿ ಅಂದರೆ ಆ.7ರಂದು ಮಧ್ಯಾಹ್ನ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಮುದರಂಗಡಿ ಎಂಬಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ, ಗುತ್ತಿಗೆದಾರ ಡೇವಿಡ್ ಡಿಸೋಜ ಎಂಬವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದರು.

ನಂತರ ಆ.23ರಂದು ರಾತ್ರಿ ವೇಳೆ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಗಾಂಧಿನಗರ ಬೈಕಾಡಿ ಎಂಬಲ್ಲಿ ಶಾಹಿದ್ ಅಲಿ ಎಂಬಾತ ತನ್ನ ತಂದೆ ಮೆಹಬೂಬ್ ಅಲಿ ಹಾಗೂ ತಾಯಿ ಸಂಶಾದ್ ಬೇಗಂ ಅವರನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದನು.

ಈ ಘಟನೆ ನಡೆದ ಒಂದು ದಿನದ ಬಳಿಕ ಮಲ್ಪೆಯಲ್ಲಿ ಮತ್ತೊಂದು ಕೊಲೆ ನಡೆದಿತ್ತು. ಆ.25ರಂದು ಬೆಳಗಿನ ಜಾವ ಮಲ್ಪೆ ಬಂದರಿನಲ್ಲಿ ಲಂಗಾರು ಹಾಕಿದ್ದ ಬೋಟಿನಲ್ಲಿ ಮೀನುಗಾರ ಕಾರ್ಮಿಕ ಅಭಿಷೇಕ್ ಎಂಬವರನ್ನು ಗೋವಿಂದರಾಜು ಎಂಬಾತ ಚೂರಿಯಿಂದ ಇರಿದು ಕೊಲೆ ಮಾಡಿರುವ ಬಗ್ಗೆ ವರದಿಯಾಗಿದೆ. ಹೀಗೆ ಜು.31ರಿಂದ ಆ.25ರವರೆಗಿನ ಕೇವಲ 25 ದಿನಗಳಲ್ಲಿ ನಡೆದ ನಾಲ್ಕು ಕೊಲೆ ಪ್ರಕರಣಗಳಲ್ಲಿ ಒಟ್ಟು ಐದು ಮಂದಿ ಹತ್ಯೆಗೀಡಾಗಿದ್ದಾರೆ. ಈ ಕೊಲೆಗಳು ಹಣಕಾಸಿನ ವಿಚಾರ, ಕೌಟುಂಬಿಕ ಕಾರಣ ಹಾಗೂ ಕುಡಿತದಿಂದಾಗಿ ನಡೆದಿರುವುದಾಗಿದೆ.

8 ತಿಂಗಳಲ್ಲಿ 8 ಕೊಲೆ: ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯಲ್ಲಿ ಕಳೆದ ಐದು ವರ್ಷಗಳಲ್ಲಿ ಒಟ್ಟು ಒಟ್ಟು 53 ಕೊಲೆ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಅತ್ಯಂತ ಹೆಚ್ಚು ಪ್ರಕರಣಗಳು ನಡೆದಿರುವುದು 2022ರಲ್ಲಿ. ಆ ಒಂದೇ ವರ್ಷ ಜಿಲ್ಲೆಯಲ್ಲಿ 16 ಕೊಲೆ ಪ್ರಕರಣಗಳು ದಾಖಲಾಗಿವೆ.

ಅದೇ ರೀತಿ 2023ರಲ್ಲಿ 12, 2024ರಲ್ಲಿ 6, 2025ರಲ್ಲಿ 11 ಹಾಗೂ 2026ರ ಆಗಸ್ಟ್‌ವರೆಗೆ 8 ಕೊಲೆ ಪ್ರಕರಣ ಗಳು ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ಪೊಲೀಸ್ ಇಲಾಖೆಯ ಅಂಕಿ ಅಂಶಗಳು ತಿಳಿಸುತ್ತವೆ.

ಈ ವರ್ಷ ಆಗಸ್ಟ್ ತಿಂಗಳ ಕೊಲೆ ಪ್ರಕರಣಗಳಲ್ಲದೆ ಮೇ 2ರಂದು ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಾರ್ಕಳ ಮಿತ್ತಬೆಟ್ಟು ಹಿರಿಯಂಗಡಿ ಎಂಬಲ್ಲಿ ರಿಚಾರ್ಡ್ ಡಿಸೋಜ ಎಂಬವರನ್ನು ಅವರ ತಮ್ಮ ಹೆರಾಲ್ಡ್ ಡಿಸೋಜ ಎಂಬಾತ ಆಸ್ತಿ ವಿಚಾರದಲ್ಲಿ ಮರದ ರೀಪಿನಿಂದ ಹೊಡೆದು ಕೊಲೆ ಮಾಡಿದ್ದನು. ಅದೇ ರೀತಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ನೂರಾಳ್‌ಬೆಟ್ಟು ಗ್ರಾಮದ ಗುಮ್ಮೆತ್ತು ಎಂಬಲ್ಲಿ ಸುನೀಲ್ ಕುಮಾರ್ ಎಂಬವರು ತನ್ನ ಪತ್ನಿ ಗೀತಾ ಎಂಬವರನ್ನು ಫೆ.27ರಂದು ಆಯುಧದಿಂದ ಹೊಡೆದು ಕೊಲೆ ಮಾಡಿದ್ದರು.

ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಮಣಿಪುರ ಗ್ರಾಮದ ಅರಬಿ ಕೆನರಾಡಿ ಎಂಬಲ್ಲಿ ಮಾ.9ರಂದು ವನಜಾ ಪೂಜಾರ್ತಿ ಎಂಬವರನ್ನು ವಲೇರಿಯನ್ ಮೆಂಡೊನ್ಸಾ ಮತ್ತು ಪ್ರವೀಣ್ ಮೆಂಡೊನ್ಸಾ ಎಂಬವರು ಆಯುಧದಿಂದ ಇರಿದು ಕೊಲೆ ಮಾಡಿದ್ದರು.

ಆರೋಪಿಗಳ ಕ್ಷಿಪ್ರ ಬಂಧನ: ಜಿಲ್ಲೆಯಲ್ಲಿ ಈ ವರ್ಷ ಎಂಟು ಕೊಲೆ ಪ್ರಕರಣಗಳು ನಡೆದರೂ ಅದರಲ್ಲೂ ಕೇವಲ 25 ದಿನಗಳ ಅವಧಿಯಲ್ಲಿ ನಾಲ್ಕು ಪ್ರಕರಣಗಳು ಸಂಭವಿಸಿದರೂ ಈ ಎಲ್ಲ ಪ್ರಕರಣಗಳಲ್ಲಿನ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಎರಡು ಶೂಟೌಟ್ ಪ್ರಕರಣಗಳಲ್ಲಿ ಆರೋಪಿಗಳನ್ನು ಪೊಲೀಸರು ಕ್ಷಿಪ್ರ ಕಾರ್ಯಾಚರಣೆಗಳ ಮೂಲಕ ಬಂಧಿಸಿ, ಇಡೀ ಪ್ರಕರಣವನ್ನು ಬೇಧಿಸಿದರು. ಅಲ್ಲದೆ ಮಲ್ಪೆ ಮೀನುಗಾರ ಕಾರ್ಮಿಕರ ಹತ್ಯೆ ಆರೋಪಿಯನ್ನು ಕೂಡ ಪೊಲೀಸರು ರೈಲಿನಲ್ಲಿ ಪರಾರಿಯಾಗುವ ಸಂದರ್ಭ ಸೆರೆ ಹಿಡಿದಿದ್ದಾರೆ. ಅದೇ ರೀತಿ ಉಳಿದ ಐದು ಪ್ರಕರಣಗಳ ಆರೋಪಿಗಳನ್ನು ಕೂಡ ತಕ್ಷಣ ದಲ್ಲಿಯೇ ಬಂಧಿಸಿರುವ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.

ಈ ಮಧ್ಯೆ ಸಾರ್ವಜನಿಕರು ಈ ರೀತಿ ನಡೆಯುತ್ತಿರುವ ಅಪರಾಧ ಕೃತ್ಯ ಗಳನ್ನು ನಿಯಂತ್ರಿಸಲು ಪೊಲೀಸರು ಕಠಿಣ ಕಾನೂನು ಕ್ರಮಗಳನ್ನು ಜರಗಿಸ ಬೇಕು ಎಂದು ಆಗ್ರಹಿಸಿದ್ದಾರೆ. ಈ ಬೆಳವಣಿಗೆಗಳು ಜಿಲ್ಲೆಯ ಜನತೆಯ ಆತಂಕಕ್ಕೆ ಕಾರಣವಾಗಿದ್ದು, ಮುಂದೆ ಇಂತಹ ಪ್ರಕರಣಗಳು ಮರುಕಳಿಸ ದಂತೆ ಎಚ್ಚರ ವಹಿಸಬೇಕೆಂದು ಸಾರ್ವಜನಿಕರು ಪೊಲೀಸ್ ಇಲಾಖೆಯಲ್ಲಿ ಮನವಿ ಮಾಡಿದ್ದಾರೆ.

"ಕಳೆದ 10 ವರ್ಷಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ ಪ್ರತಿವರ್ಷ 10-12 ಕೊಲೆ ಪ್ರಕರಣಗಳು ದಾಖಲಾಗುತ್ತಿವೆ. ಈ ವರ್ಷ ಜುಲೈ 30ರವೆರೆಗೆ ಮೂರು ಕೊಲೆಗಳು ಮಾತ್ರ ಆಗಿದ್ದು, ಕೇವಲ 25 ದಿನದಲ್ಲಿಯೇ ನಾಲ್ಕು ಪ್ರಕರಣ ಗಳು ದಾಖಲಾಗಿವೆ. ಪ್ರತಿ ಜಿಲ್ಲೆಯಲ್ಲೂ ಅದರದ್ದೇ ಆದ ಅಪರಾಧ ಅಂಕಿಅಂಶಗಳು ಎಂಬುದು ಇರುತ್ತವೆ. ಅದರಂತೆ ಉಡುಪಿ ಜಿಲ್ಲೆಯಲ್ಲಿ ಪ್ರತಿವರ್ಷ ಸರಾಸರಿ 3000-4000 ಎಫ್‌ಐಆರ್‌ಗಳು ದಾಖಲಾಗುತ್ತವೆ. ಅಲ್ಲದೆ 10-12 ಕೊಲೆ ಪ್ರಕರಣಗಳು ದಾಖಲಾಗುತ್ತವೆ. ಈ ವರ್ಷ ಕೂಡ ಆ ಅಂಶಗಳು ಮೀರಿಲ್ಲ. ಅದೇ ರೀತಿ ಎಲ್ಲ ಪ್ರಕರಣ ಗಳಲ್ಲೂ ನಾವು ಬೇಧಿಸುವಲ್ಲಿ ಯಶಸ್ವಿಯಾಗಿದ್ದೇವೆ"

-ಹರಿರಾಂ ಶಂಕರ್, ಎಸ್ಪಿ ಉಡುಪಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor