ಉಡುಪಿ, ಆ.26: ಉಡುಪಿ ಜಿಲ್ಲೆಯ ಕರಾವಳಿಯ ಸುಮಾರು ಶೇ.34.7 ಭಾಗ ಕರಾವಳಿ ಸವೆತಕ್ಕೆ ಒಳಗಾಗಿದೆ. 2026ರ ಅಧ್ಯಯನವೊಂದರಲ್ಲಿ ಉಡುಪಿಯಲ್ಲಿ ಸಾಮಾನ್ಯವಾಗಿ ಸೇವಿಸುವ ಕೆಲವು ತಾಜಾ ನೀರಿನ ಮೀನುಗಳಲ್ಲಿ ಮೈಕ್ರೋಪ್ಲಾಸ್ಟಿಕ್ ಗಳು ಪತ್ತೆಯಾಗಿರುವುದು ವರದಿಯಾಗಿದೆ. ಇದರ ಜೊತೆಗೆ ಜಿಲ್ಲೆಯಲ್ಲಿ ಪ್ರತಿದಿನ ದೊಡ್ಡ ಪ್ರಮಾಣದಲ್ಲಿ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ’ ಎಂದು ಎ.ಜೆ. ಅಕಾಡಮಿ ಫಾರ್ ರಿಸರ್ಚ್ ಆಂಡ್ ಡೆವಲಪ್ ಮೆಂಟ್ ನ ಮುಖ್ಯಸ್ಥ ಮುಹಮ್ಮದ್ ಅಬ್ದುಲ್ಲಾ ಜಾವೇದ್ ಹೇಳಿದ್ದಾರೆ.

ಉಡುಪಿಯ ಡಾನ್ ಬಾಸ್ಕೋ ಹಾಲ್ ನಲ್ಲಿ ಇತ್ತೀಚೆಗೆ ನಡೆದ 2ನೇ ಉಡುಪಿ ಜಿಲ್ಲಾ ಅಂತರ ಶಾಲಾ ವಿಜ್ಞಾನ ಮೇಳ-2026ರ ಶಿಕ್ಷಕರ ತರಬೇತಿ ಕಾರ್ಯಗಾರದಲ್ಲಿ ಅವರು ಮಾತನಾಡುತ್ತಿದ್ದರು.

ಇವು ಕೇವಲ ಸುದ್ದಿಗಳಲ್ಲ; ನಮ್ಮ ವಿದ್ಯಾರ್ಥಿಗಳ ಸಂಶೋಧನೆಗೆ ಉತ್ತಮ ವಿಷಯಗಳು. ನಮ್ಮ ಜಿಲ್ಲೆಯ ಸಮಸ್ಯೆಗಳನ್ನು ನಮ್ಮ ವಿದ್ಯಾರ್ಥಿಗಳೇ ಅಧ್ಯಯನ ಮಾಡಿ, ಅದರ ಹಿಂದಿರುವ ಕಾರಣಗಳನ್ನು ತಿಳಿದುಕೊಂಡು, ಸಾಧ್ಯವಾದ ಪರಿಹಾರಗಳನ್ನು ಹುಡುಕಬೇಕು. ಈ ಮೂಲಕ ಅವರ ಸಂಶೋಧನೆಯ ಪ್ರಯೋಜನ ಸಮಾಜಕ್ಕೂ ತಲುಪಬೇಕು ಎಂದು ಅವರು ಹೇಳಿದರು.

ಈ ಉದ್ದೇಶದಿಂದ 4ನೇ ತರಗತಿಯಿಂದ 10ನೇ ತರಗತಿಯ ವಿದ್ಯಾರ್ಥಿ ಗಳಿಗೆ ಸಂಶೋಧನಾ ಆಧಾರಿತ ಯೋಜನೆಗಳನ್ನು ಮಂಡಿಸಲು ಅವಕಾಶ ನೀಡಲಾಗಿದೆ. ಯೋಜನೆಗಳನ್ನು ಜೀವ ವಿಜ್ಞಾನ, ಭೌತಿಕ ವಿಜ್ಞಾನ, ಪರಿಸರ ವಿಜ್ಞಾನ ವಿಭಾಗಗಳಲ್ಲಿ ಸಲ್ಲಿಸಬಹುದು. ಯೋಜನೆ ಸಲ್ಲಿಕೆಗೆ ಸೆಪ್ಟಂಬರ್ 7 ಕೊನೆಯ ದಿನವಾಗಿದ್ದು, 2ನೇ ಉಡುಪಿ ಜಿಲ್ಲಾ ಅಂತರ ಶಾಲಾ ವಿಜ್ಞಾನ ಮೇಳವು ಡಿಸೆಂಬರ್ ತಿಂಗಳಿನಲ್ಲಿ ಉಡುಪಿಯಲ್ಲಿ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ನಮ್ಮ ಸುತ್ತಲಿನ ಸಮಸ್ಯೆಗಳನ್ನು ವಿದ್ಯಾರ್ಥಿಗಳು ಗಮನಿಸಬೇಕು. ಅದರ ಬಗ್ಗೆ ಪ್ರಶ್ನೆಗಳನ್ನು ಕೇಳಬೇಕು ಮತ್ತು ವೈಜ್ಞಾನಿಕ ವಿಧಾನದಲ್ಲಿ ಉತ್ತರ ಹುಡುಕಬೇಕು. ಆಗ ಮಾತ್ರ ವಿಜ್ಞಾನ ಮೇಳವು ನಿಜವಾದ ಅರ್ಥದಲ್ಲಿ ಸಂಶೋಧನೆಯ ವೇದಿಕೆಯಾಗುತ್ತದೆ. ವಿಜ್ಞಾನ ಮೇಳವನ್ನು ಕೇವಲ ಸಿದ್ಧಪಡಿಸಿದ ಮಾದರಿಗಳನ್ನು ಪ್ರದರ್ಶಿಸುವ ಸ್ಪರ್ಧೆಯಾಗಿ ನೋಡದೆ, ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವ ಮತ್ತು ವೈಜ್ಞಾನಿಕ ಚಿಂತನೆ ಬೆಳೆಸುವ ಪ್ರಯತ್ನವಾಗಿ ರೂಪಿಸಬೇಕು ಎಂದು ಅವರು ತಿಳಿಸಿದರು.

ಕಾರ್ಯಾಗಾರದಲ್ಲಿ ಶಿಕ್ಷಕರಿಗೆ ವೈಜ್ಞಾನಿಕ ವಿಧಾನ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಯಿತು. ಸಂಶೋಧನೆಗೆ ಸೂಕ್ತವಾದ ಪ್ರಶ್ನೆಯನ್ನು ರೂಪಿಸುವುದು, ಸಂಶೋಧನಾ ಪರಿಕಲ್ಪನೆ ಮಂಡಿಸುವುದು, ಪ್ರಯೋಗ ನಡೆಸುವುದು, ಮಾಹಿತಿಯನ್ನು ದಾಖಲಿಸುವುದು ಹಾಗೂ ಅಂತಿಮ ಫಲಿತಾಂಶವನ್ನು ಮಂಡಿಸುವುದನ್ನು ಚಟುವಟಿಕೆಗಳ ಮೂಲಕ ವಿವರಿಸಲಾಯಿತು.

ಕಾರ್ಯಕ್ರಮವನ್ನು ಸಾಲಿಹಾತ್ ಶಾಲೆಯ ಅಕಾಡಮಿಕ್ ಮುಖ್ಯಸ್ಥ ಅಬ್ದುಲ್ ಹಸೀಬ್ ತರಫದಾರ್ ಉದ್ಘಾಟಿಸಿದರು. ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಅಸ್ಲಮ್ ಹೈಕಾಡಿ ಸಮಾರೋಪ ಭಾಷಣ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor