ಜ.9: ಶೀರೂರುಶ್ರೀಗಳ ಪುರಪ್ರವೇಶ: ವಾಹನಗಳ ಸಂಚಾರಕ್ಕೆ ಬದಲಿ ವ್ಯವಸ್ಥೆ
ಉಡುಪಿ, ಜ.8: ಜ.17 ಮತ್ತು 18ರಂದು ನಡೆಯುವ ಪರ್ಯಾಯ ಮಹೋತ್ಸವದಲ್ಲಿ ಮೊದಲ ಬಾರಿ ಸರ್ವಜ್ಞ ಪೀಠಾರೋಹಣ ಮಾಡುವ ಶೀರೂರು ಮಠದ ಶ್ರೀವೇದವರ್ಧನ ತೀರ್ಥ ಸ್ವಾಮೀಜಿಯವರು ಪುರಪ್ರವೇಶ ನಿಮಿತ್ತ ಶೋಭಾಯಾತ್ರೆ ಮೆರವಣಿಗೆ ಕಾರ್ಯಕ್ರಮ ಜ.9ರಂದು ಕುಂಜಿಬೆಟ್ಟು ಕಡಿಯಾಳಿ ಬಳಿ ಅಪರಾಹ್ನ 3 ಗಂಟೆಗೆ ನಡೆಯಲಿರು ವುದರಿಂದ ನಗರದ ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆಯನ್ನು ಮಾಡಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಆದೇಶ ಹೊರಡಿಸಿದ್ದಾರೆ.
ಪುರ ಮೆರವಣಿಗೆಯು ಶಾರದಾ ಕಲ್ಯಾಣ ಮಂಟಪದಿಂದ ರಾ.ಹೆ. 169(ಎ) ಮಾರ್ಗವಾಗಿ ಶಿರಿಬೀಡು ಜಂಕ್ಷನ್ ತಲುಪಿ ಅಲ್ಲಿಂದ ಸರ್ವಿಸ್ ಬಸ್ ನಿಲ್ದಾಣ, ತ್ರಿವೇಣಿ ಜಂಕ್ಷನ್, ಕನಕದಾಸ ರಸ್ತೆ ಮಾರ್ಗವಾಗಿ ರಥಬೀದಿ ತಲುಪಲಿದೆ.
ಆದ್ದರಿಂದ ಈ ಮಾರ್ಗದಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅಪರಾಹ್ನ 1:00ರಿಂದ ಸಂಜೆ 7:00ಗಂಟೆಯವರೆಗೆ ಬದಲಿ ವ್ಯವಸ್ಥೆ ಮಾಡಿ ಆದೇಶ ಹೊರಡಿಸಲಾಗಿದೆ. ಮೆರವಣಿಗೆ ಮಾರ್ಗದಲ್ಲಿ ಅಪರಾಹ್ನ 1ರಿಂದ ಸಂಜೆ 7ರವರೆಗೆ ವಾಹನಗಳ ಸಂಚಾರವನ್ನು ನಿಷೇಧಿಸಿದ್ದು, ಸೂಚಿಸಿರುವ ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.
*ಮಣಿಪಾಲದಿಂದ ಉಡುಪಿ ನಗರಕ್ಕೆ ಹೋಗುವ ವಾಹನಗಳು ಎಂಜಿಎಂ ಎದುರಿನ ಸುನಾಗ್ ಆಸ್ಪತ್ರೆ ಬಳಿ ಎಡ ತಿರುವು ಪಡೆದು ಸುದೀಂದ್ರ ಕಲ್ಯಾಣ ಮಂಟಪ ಮಾಗವಾಗಿ ಎಸ್.ಕೆ.ಎಂ. ಬಳಿ ಎಡ ತಿರುವು ಪಡೆದು ಬೀಡಿನಗುಡ್ಡೆ- ಚಿಟ್ಪಾಡಿ- ಅಮ್ಮಣ್ಣಿ ರಾಮಣ್ಣ ಹಾಲ್ ಮುಂದಿನ ರಸ್ತೆಯಿಂದ ಮಿಷನ್ ಕಾಂಪೌಂಡ್- ಜೋಡುಕಟ್ಟೆ ತಲುಪಿ ಉಡುಪಿ ನಗರಕ್ಕೆ ಆಗಮಿಸಬೇಕು.
*ಶಿರಿಬೀಡು ಜಂಕ್ಷನ್‌ನಿಂದ ಕಿದಿಯೂರು ಹೊಟೇಲ್ ಮೂಲಕ ಸರ್ವಿಸ್ ಬಸ್ ನಿಲ್ದಾಣದವರೆಗೆ ಏಕಮುಖ ಸಂಚಾರ ವ್ಯವಸ್ಥೆಯ ರಸ್ತೆಯಲ್ಲಿ ಮೆರವಣಿಗೆ ಪ್ರವೇಶಿಸುವ ಸಮಯದಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.
*ಮಂಗಳೂರು ಕಡೆಯಿಂದ ಉಡುಪಿ ನಗರಕ್ಕೆ ಪ್ರವೇಶಿಸುವ ಎಲ್ಲಾ ವಾಹನಗಳು ಓಲ್ಡ್ ಡಯಾನ ಸರ್ಕಲ್‌ನಿಂದ ಮಿತ್ರ ಪ್ರಿಯಾ ಜಂಕ್ಷನ್ ಮೂಲಕ ಚಿತ್ತರಂಜನ್ ಸರ್ಕಲ್, ಸಂಸ್ಕೃತ ಕಾಲೇಜು ಜಂಕ್ಷನ್, ಜಾಮೀಯಾ ಮಸೀದಿ ಜಂಕ್ಷನ್‌ನಿಂದ ತಿರುವು ಪಡೆದು ಸರ್ವಿಸ್ ಬಸ್ ನಿಲ್ದಾಣ ತಲುಪಬೇಕು.
ಈ ನಿಷೇಧವು ವಿವಿಐಪಿ ವಾಹನ, ಸರಕಾರಿ ವಾಹನ ಮತ್ತು ಎಲ್ಲಾ ರೀತಿಯ ತುರ್ತು ಸೇವೆಯ ವಾಹನಗಳಿಗೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾದಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.