ನೀಲಾವರ: ರಸ್ತೆ ಬದಿ ಪ್ರದೇಶ ಬೆಂಕಿಗಾಹುತಿ
Update: 2026-01-08 21:07 IST
ಬ್ರಹ್ಮಾವರ, ಜ.8: ಮಟಪಾಡಿ ಗ್ರಾಮದಿಂದ ನೀಲಾವರ ಕಡೆ ಹೋಗುವ ರಸ್ತೆ ಬದಿಯ ಹುಲ್ಲು ಪ್ರದೇಶದಲ್ಲಿ ಅಕಸ್ಮಿಕವಾಗಿ ಬೆಂಕಿ ಕಾಣಸಿಕೊಂಡಿದ್ದು, ಹಲವು ಪ್ರದೇಶ ಬೆಂಕಿಗೆ ಆಹುತಿಯಾಗಿದೆ.
ನೀಲಾವರದ ಜೆನಿತ್ ಡೈ ಮೇಕರ್ ಇಂಡಸ್ಟ್ರಿ ಸಮೀಪದ ರಸ್ತೆಯ ಅಕ್ಕಪಕ್ಕಗಳಲ್ಲಿ ಬೆಂಕಿ ಕಾಣಿಸಿಕೊಂಡು, ನಂತರ ಬೆಂಕಿ ಕೆನ್ನಾಲಿಗೆ ಇಡೀ ಪರಿಸರಕ್ಕೆ ಹಬ್ಬಿತು. ಇದರಿಂದ ಪರಿಸರದಲ್ಲಿದ್ದ ಪೈನಾಪಲ್ ತೋಟ ಹಾಗೂ ಒಣ ಹುಲ್ಲು, ಗಿಡ ಗಂಟಿಗಳು ಸುಟ್ಟು ಕರಕಲಾಗಿವೆ. ಅದೇ ರೀತಿ ಅಡಿಕೆ ತೋಟ, ತೆಂಗು, ಹಲಸು ಗಿಡಗಳು ಕೂಡ ಸುಟ್ಟು ಹೋಗಿವೆ.
ಕೂಡಲೇ ಸ್ಥಳಕ್ಕೆ ಆಗಮಿಸಿದ ಉಡುಪಿ ಅಗ್ನಿಶಾಮಕ ದಳದ ವಾಹನ, ಕಾರ್ಯಾಚರಣೆ ನಡೆಸಿ ಬೆಂಕಿ ಹತೋಟಿಗೆ ತರುವಲ್ಲಿ ಯಶಸ್ವಿಯಾಯಿತು. ಪರಿಸರದಲ್ಲಿ ಸಣ್ಣಪುಟ್ಟ ಕೈಗಾರಿಕೆಗಳಿದ್ದು ಸಕಾಲದಲ್ಲಿ ಕಾರ್ಯಾಚರಣೆ ನಡೆಸಿದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ. ಸ್ಥಳೀಯರು ಮತ್ತು ಅಗ್ನಿಶಾಮಕದಳದ ಕಾರ್ಯಾಚರಣೆಯಿಂದ ಅನಾಹುತ ತಪ್ಪಿದೆ.