×
Ad

ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ನಿರ್ಲಕ್ಷ್ಯ ಬೇಡ: ಮನು ಪಟೇಲ್

ರಾ. ರಸ್ತೆ ಸುರಕ್ಷತಾ ಮಾಸಾಚರಣೆ ಉದ್ಘಾಟನೆ

Update: 2026-01-08 20:43 IST

ಉಡುಪಿ, ಜ.8: ಪ್ರತಿಯೊಬ್ಬ ನಾಗರಿಕರೂ ರಸ್ತೆಗಳಲ್ಲಿ ವಾಹನ ಚಾಲನೆ ಮಾಡುವಾಗ ರಸ್ತೆ ಸುರಕ್ಷತಾ ನಿಯಮಗಳ ಕುರಿತಂತೆ ನಿರ್ಲಕ್ಷ್ಯ ತೋರದೇ ಅವುಗಳನ್ನು ಸರಿಯಾಗಿ ಪಾಲಿಸಿದಾಗ ಮಾತ್ರ ಅಪಘಾತಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಮನು ಪಟೇಲ್ ಬಿ.ವೈ ಹೇಳಿದ್ದಾರೆ.

ಮಣಿಪಾಲದಲ್ಲಿರುವ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿ ಸಭಾಂಗಣ ದಲ್ಲಿ ಗುರುವಾರ, ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆಗಳ ಸಹಯೋಗ ದಲ್ಲಿ ನಡೆದ 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಚರಣೆ -2026 ಅನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಇಂದಿನ ದಿನಗಳಲ್ಲಿ ತಂತ್ರಜ್ಞಾನ ತುಂಬಾ ಮುಂದುವರಿದಿದೆ. ಅದೇ ರೀತಿ ವಾಹನ ಚಲಾಯಿಸುವ ಪ್ರತಿಯೊಬ್ಬ ರಿಗೂ ರಸ್ತೆ ಸುರಕ್ಷತಾ ನಿಯಮಗಳ ಕುರಿತು ಮಾಹಿತಿ ತಿಳಿದಿರುತ್ತದೆ. ಆದರೆ ಅವುಗಳ ಪಾಲನೆ ಕೊರತೆ ನಮ್ಮಲ್ಲಿದೆ. ರಸ್ತೆ ನಿಯಮಗಳನ್ನು ಪಾಲನೇ ಮಾಡದೇ ಇದ್ದಾಗ ರಸ್ತೆ ಅಪಘಾತಗಳು ಉಂಟಾಗಿ ಸಾವು-ನೋವುಗಳು ಸಂಭವಿಸುತ್ತವೆ. ಆದ್ದರಿಂದ ನಾವು ಸಂಚಾರಿ ನಿಯಮಗಳನ್ನು ಸರಿಯಾಗಿ ಪಾಲಿಸಬೇಕು ಎಂದರು.

ಸಾರ್ವಜನಿಕ ರಸ್ತೆಯಲ್ಲಿ ವಾಹನವನ್ನು ಚಲಾಯಿಸುವಾಗ ತಾಳ್ಮೆ ಅಗತ್ಯ. ಅವಸರವಾಗಿ ಅತಿಯಾದ ಆತ್ಮವಿಶ್ವಾಸ ದೊಂದಿಗೆ ಅಜಾಗರೂಕತೆಯಿಂದ ವಾಹನಗಳನ್ನು ಚಾಲನೆ ಮಾಡಿದಾಗ ಅಪಘಾತಗಳು ಉಂಟಾಗುತ್ತವೆ ಎಂದ ಮನು ಪಟೇಲ್, ಆದ್ದರಿಂದ ಸರಕಾರ ಸಾರ್ವಜನಿಕ ವಾಹನಗಳ ಸುಗಮ ಸಂಚಾರಕ್ಕಾಗಿ ಕೆಲವೊಂದು ನಿಯಮಾ ವಳಿಗಳನ್ನು ಸುರಕ್ಷತಾ ದೃಷ್ಟಿಯಿಂದ ಜಾರಿಗೊಳಿಸಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯ್ಕ್ ಮಾತನಾಡಿ, ದೇಶದಲ್ಲಿ ದಿನೇ ದಿನೇ ವಾಹನಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಅದಕ್ಕೆ ಅನುರೂಪವಾಗಿ ಅಪಘಾತಗಳ ಸಂಖ್ಯೆಯೂ ಹೆಚ್ಚು ತ್ತಿದೆ. ಕಾರ್ಯ ನಿಮಿತ್ತ ಮನೆಯಿಂದ ಹೊರಟವರು ಸುರಕ್ಷಿತವಾಗಿ ಮನೆಗೆ ಮರಳಿ ಬರುತ್ತಾರೆ ಎನ್ನುವ ಭರವಸೆ ಇಲ್ಲವಾಗಿದೆ. ಪ್ರಜ್ಞಾವಂತ ನಾಗರಿಕರು ರಸ್ತೆ ಸುರಕ್ಷತಾ ನಿಯಮಗಳನ್ನು ಸರಿಯಾಗಿ ಪಾಲಿಸಿದಾಗ ಅಪಘಾತ ಗಳನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎಂದರು.

ಕಾರ್ಯಕ್ರಮದಲ್ಲಿ ಮಣಿಪಾಲ ಎಂಐಟಿ ಉಪನ್ಯಾಸಕ ಬಾಲಕೃಷ್ಣ ಮುದ್ದೋಡಿ ವಿಶೇಷ ಉಪನ್ಯಾಸ ನೀಡಿ, ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ನಮಗೆ ತಿಳಿದಿದ್ದರೂ ನಾವೇ ಅವನ್ನು ಪಾಲಿಸದೆ ಉಲ್ಲಂಘಿಸುತ್ತೇವೆ. ಸಂಚಾರಿ ನಿಯಮಗಳನ್ನು ಪಾಲಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಕಾನೂನು ಮತ್ತು ಇಲಾಖೆಗಳೊಂದಿಗೆ ಸಾರ್ವಜನಿಕರು ಕೂಡ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಲಕ್ಷ್ಮೀನಾರಾಯಣ ನಾಯಕ್ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದಲ್ಲಿ ಪ್ರತಿ ಎರಡು ನಿಮಿಷಕ್ಕೊಂದು ಅಪಘಾತ ಸಂಭವಿಸುತ್ತಿದೆ. ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅಪಘಾತಗಳನ್ನು ತಡೆಯಲು ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸವನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ. ಜನರಲ್ಲಿ ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸಲು ತಿಂಗಳವರೆಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ವಾರ್ತಾಧಿಕಾರಿ ಮಂಜುನಾಥ್ ಬಿ ಉಪಸ್ಥಿತರಿದ್ದರು. ಇಲಾಖೆ ಅಧೀಕ್ಷಕ ರಾಮಚಂದ್ರಪ್ಪ ಹೆಚ್.ಸಿ ಸ್ವಾಗತಿಸಿ, ಮೋಟಾರು ವಾಹನ ನಿರೀಕ್ಷಕ ಶ್ರೇಯಸ್‌ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಗಣೇಶ್ ರಾವ್ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News