×
Ad

ಅಕ್ರಮ ಮರಳು ಸಾಗಾಟದ ವಿರುದ್ಧ ಕ್ರಮ: ಮೂವರ ಬಂಧನ

Update: 2025-08-12 20:36 IST

ಉಡುಪಿ, ಆ.12: ಕಳೆದ ಒಂದು ವಾರ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಟದ ವಿರುದ್ಧ ಪೊಲೀಸರು ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದು, ಈ ಸಂಬಂಧ ಒಟ್ಟು ನಾಲ್ಕು ಪ್ರಕರಣಗಳಲ್ಲಿ ಮೂವರನ್ನು ಬಂಧಿಸಿ, ಹಲವು ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆ.11ರಂದು ಯಡ್ತಾಡಿ ಕಡೆಯಿಂದ ಹೇರಾಡಿ ಕಡೆಗೆ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರ್ ಟೆಂಪೋವನ್ನು ಪೊಲೀಸರು ತಡೆದು, 8000ರೂ. ಮೌಲ್ಯದ ಸುಮಾರು ಒಂದೂವರೆ ಯೂನಿಟ್ ಮರಳನ್ನು ವಶಪಡಿಸಿಕೊಂಡಿದ್ದಾರೆ. ಆ.7ರಂದು ಕುಕ್ಕುಡೆ ಐಎಸ್‌ಎಫ್ ಫ್ಯಾಕ್ಟರಿ ಬಳಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರ್ ಟೆಂಪೊವನ್ನು ತಡೆದ ಪೊಲೀಸರು ಟೆಂಪೋ ಸಹಿತ ಮರಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕುಂದಾಪುರ ಚರ್ಚ್ ರಸ್ತೆಯ ಸಮೀಪ ಪಂಚ ಗಂಗಾವಳಿ ಹೊಳೆಯ ಬಳಿ ಆ.5ರಂದು ಅಕ್ರಮ ಮರಳು ಸಾಗಾಟಕ್ಕೆ ಸಂಬಂಧಿಸಿ ಖಾರ್ವಿಕೇರಿ ಮೇಲ್ಕೇರಿಯ ಸುಜನ್ ಸಾರಂಗ್ (35), ಕುಂದಾಪುರ ಮದ್ದುಗುಡ್ಡೆಯ ನಿಖಿಲ್(30) ಎಂಬವರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ 2.5ಲಕ್ಷ ರೂ. ಮೌಲ್ಯದ ಎರಡು ಟೆಂಪೋ ಹಾಗೂ 4,000ರೂ. ಮೌಲ್ಯದ ಮರಳನ್ನು ವಶಪಡಿಸಿಕೊಳ್ಳಲಾಗಿದೆ.

ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಕುಳುಂಜೆ ಗ್ರಾಮದ ಬಾಕುಡೆ ಎಂಬಲ್ಲಿ ಶೇಡಿಮನೆ ಹೊಳೆಯಿಂದ ಅಕ್ರಮ ಮರಳು ಸಾಗಾಟಕ್ಕೆ ಸಂಬಂಧಿಸಿ ಚರಣ್ ಹೆಗ್ಡೆ ಎಂಬಾತನನ್ನು ಆ.11ರಂದು ಪೊಲೀಸರು ಬಂಧಿಸಿ, 18ಲಕ್ಷ ರೂ. ಮೌಲ್ಯದ 3 ಟಿಪ್ಪರ್ ಲಾರಿಗಳನ್ನು ಹಾಗೂ 45,000ರೂ. ಮೌಲ್ಯದ ಸುಮಾರು 9 ಯುನಿಟ್ ಮರಳನ್ನು ವಶಪಡಿಸಿ ಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News