×
Ad

ಪ್ರತಿ 3 ತಿಂಗಳಿಗೊಮ್ಮೆ ಜಿಲ್ಲೆಯ ರೈತರ ಸಮಸ್ಯೆ ಆಲಿಸಲು ಸಭೆ ನಡೆಸಿ: ಇಲಾಖೆ ಅಧಿಕಾರಿಗಳಿಗೆ ಸಂಸದ ಕೋಟ ಸಲಹೆ

ಬ್ರಹ್ಮಾವರದಲ್ಲಿ ಕೃಷಿ ಮೇಳ-2025 ಉದ್ಘಾಟನೆ

Update: 2025-10-11 20:37 IST

ಬ್ರಹ್ಮಾವರ: ಕೃಷಿಯನ್ನು ಲಾಭದಾಯಕವಾಗಿಸಲು ಹಾಗೂ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಅರಿತು ಅವುಗಳಿಗೆ ಪರಿಹಾರ ಒದಗಿಸಲು ಪ್ರತಿ 3 ಅಥವಾ ಆರು ತಿಂಗಳಿಗೊಮ್ಮೆ ಜಿಲ್ಲೆಯ ರೈತರು, ರೈತ ಸಂಘಟನೆಗಳ ಸಭೆ ಕರೆದು ಚರ್ಚಿಸುವ ಪದ್ಧತಿಯನ್ನು ಪುನರಾರಂಭಿಸುವಂತೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸಲಹೆಯನ್ನು ನೀಡಿದ್ದಾರೆ.

ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯದ ಆಡಳಿತಕ್ಕೊಳಪಟ್ಟ ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ ಮತ್ತು ಡಿಪ್ಲೊಮಾ ಕೃಷಿ ಮಹಾವಿದ್ಯಾಲಯ ಬ್ರಹ್ಮಾವರ, ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಉಳ್ಳಾಲ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಮೀನುಗಾರಿಕೆ ಮತ್ತು ಅರಣ್ಯ ಇಲಾಖೆಗಳು, ಜಿಲ್ಲಾ ಕೃಷಿಕ ಸಮಾಜ ಉಡುಪಿ ಮತ್ತು ದ.ಕ, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ-ಸಂಜೀವಿನಿ, ಗೇರು ಮತ್ತು ಕೋಕೋ ಅಭಿವೃದ್ದಿ ನಿರ್ದೇಶನಾಲಯ ಕೊಚ್ಚಿ ಅಲ್ಲದೇ ವಿವಿಧ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಆವರಣದಲ್ಲಿ ಆಯೋಜಿಸಲಾದ ಎರಡು ದಿನಗಳ ಕೃಷಿ ಮೇಳವನ್ನು ಹಾಗೂ ವಸ್ತುಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಇಂದು ಕೃಷಿ ಮತ್ತು ಕೃಷಿಕರ ಬದುಕನ್ನು ಪರಿಚಯಿಸುವ ಕೃಷಿ ಮೇಳಗಳು ಬಹಳ ಅರ್ಥಪೂರ್ಣವಾಗಿವೆ. ಕರಾವಳಿ ಮಾತ್ರವಲ್ಲದೇ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಕೃಷಿ ಮೇಳಗಳಿಗೆ ಬರುವ ಕೃಷಿಕರ ಹಾಗೂ ಕೃಷಿಯಾಸಕ್ತರ ಸಂಖ್ಯೆ ಲಕ್ಷವನ್ನು ದಾಟುತ್ತಿರುವುದು ಸಂತೋಷದ ಬೆಳವಣಿಗೆ. ದೇಶದ ಬೆನ್ನೆಲುಬೆನಿಸಿದ ರೈತರಿಗಾಗಿಯೇ ಆಯೋಜಿಸಲಾಗುವ ಇಂತಹ ಕೃಷಿಮೇಳ ಗಳು ಜಿಲ್ಲೆಯ ಆರ್ಥಿಕತೆಗೆ ಚೈತನ್ಯ ತುಂಬುತ್ತವೆ. ಇವು ಕೃಷಿಯ ಆಶಾದಾಯಕ ಭವಿಷ್ಯಕ್ಕೆ ಪೂರ್ವಸೂಚನೆಯಾಗಿದೆ ಎಂದು ಸಂಸದ ಕೋಟ ಹೇಳಿದರು.

ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ 2,100ಕ್ಕೂ ಹೆಚ್ಚು ಯೋಜನೆಗಳನ್ನು ಜಾರಿ ಮಾಡಿದ್ದು, 42,000 ಕೋಟಿ ರೂ.ಗಳಷ್ಟು ಹಣವನ್ನು ಬಿಡುಗಡೆ ಮಾಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯದಿಂದ ಕೆಲಸ ಮಾಡಿದಾಗ ಕೃಷಿ ಕ್ಷೇತ್ರವು ಬೆಳವಣಿಗೆಯನ್ನು ದಾಖಲಿಸುತ್ತದೆ. ಭತ್ತದ ಬೆಂಬಲ ಬೆಲೆಯನ್ನು ಈಗಾಗಲೇ ಹೆಚ್ಚಿಸಲಾಗಿದೆ. ಕಾಳುಮೆಣಸಿನ ಬೆಳೆ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಜಂಟಿಯಾಗಿ ಕಾರ್ಯಯೋಜನೆ ರೂಪಿಸಿ ರೈತರಿಗೆ ನೆರವಾಗಬೇಕು ಎಂದು ಅವರು ತಿಳಿಸಿದರು.

ಕೃಷಿ ವಲಯ ಎದುರಿಸುವ ಸಮಸ್ಯೆಗಳು, ರೈತರ ಸಂಘಟನಾತ್ಮಕ ನಿಲುವುಗಳು, ಕೃಷಿಕರ ಅಭಿವೃದ್ದಿ ಬಗ್ಗೆ ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ಚರ್ಚೆ ನಡೆದು ರೈತರಿಗೆ ಯೋಜನೆಗಳ ಪ್ರಯೋಜನ ದೊರೆಯಬೇಕು ಎಂದ ಕೋಟ, ಬ್ರಹ್ಮಾವರದಲ್ಲಿ ಪುನರಾರಂಭಗೊಂಡಿರುವ ಕೃಷಿ ಡಿಪ್ಲೋಮಾ ಕಾಲೇಜನ್ನು ಕೃಷಿ ಪದವಿ ಕಾಲೇಜಾಗಿ ಮೇಲ್ದರ್ಜೆಗೇರಿಸುವ ಬಹುಕಾಲದ ಬೇಡಿಕೆಯನ್ನು ಈಡೇರಿಸಲು ಸರಕಾರದ ಮಟ್ಟದಲ್ಲಿ ನಾವೆಲ್ಲರೂ ಸೇರಿ ಪ್ರಯತ್ನಿಸೋಣ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಬ್ರಹ್ಮಾವರಕ್ಕೆ ಕೃಷಿ ಕಾಲೇಜಿನೊಂದಿಗೆ ‘ಕೃಷಿಗೆ ಸಂಬಂಧಿಸಿದ ವಿಶೇಷ ಆರ್ಥಿಕ ವಲಯ’ ಹಾಗೂ ಸಮುದ್ರ ಉತ್ಪನ್ನಗಳಿಗೆ ಸಂಬಂಧಿಸಿದ ವಿಶೇಷ ಆರ್ಥಿಕ ವಲಯ’ಗಳ ಸ್ಥಾಪನೆಯಾದರೆ, ಜಿಲ್ಲೆಯ ಪ್ರಗತಿ ಹಾಗೂ ಕೃಷಿಕರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಕರಾವಳಿಯ ಪ್ರಗತಿಪರ ಕೃಷಿಕರಾದ ವಂಡ್ಸೆಯ ಉದಯಕುಮಾರ್ ಶೆಟ್ಟಿ, ಪೆರ್ಡೂರಿನ ಜಯಲಕ್ಷ್ಮೀ ಹೆಗ್ಡೆ, ಸುರತ್ಕಲ್‌ನ ಚಂದ್ರಶೇಖರ ಹೆಗ್ಡೆ, ಸದಾಶಿವ ಐತಾಳ್ ಹಾಗೂ ಉಡುಪಿಯ ಚಂದ್ರಶೇಖರ ನಾಯ್ಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಜಿಲ್ಲಾಧಿಕಾರಿ ಸ್ವರೂಪ್ ಟಿ.ಕೆ, ಕೃಷಿಕ ಸಮಾಜದ ಅಧ್ಯಕ್ಷರಾದ ಉಡುಪಿಯ ಅಶೋಕ್ ಕುಮಾರ್ ಕೊಡ್ಗಿ, ದ.ಕ.ದ ವಿಜಯ ಕುಮಾರ್ ರೈ, ಬ್ರಹ್ಮಾವರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷೆ ಡಾ.ಸುನೀತಾ ಶೆಟ್ಟಿ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಪೂರ್ಣಿಮಾ ಜೆ.ಸಿ., ಮೀನುಗಾರಿಕಾ ಇಲಾಖೆ ಜಂಟಿ ನಿರ್ದೇಶಕ ವಿವೇಕ್ ಆರ್, ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ರಾಜು ಎಂ.ಎಸ್, ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಎಂ.ಸಿ.ರೆಡ್ಡಪ್ಪ, ಉಪ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಕುಮಾರ್ ಡಿ.ಎನ್, ಕೃಷಿ ಇಲಾಖೆ ಉಪನಿರ್ದೇಶಕ ಚಂದ್ರಶೇಖರ್ ನಾಯ್ಕ್, ವಿವಿಯ ಡಾ. ಬಿ.ಎಂ. ದುಷ್ಯಂತ್ ಕುಮಾರ್ ಉಪಸ್ಥಿತರಿದ್ದರು.

ಬ್ರಹ್ಮಾವರ ವಲಯ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಹಾಗೂ ಹಿರಿಯ ವಿಜ್ಞಾನಿ ಡಾ.ಧನಂಜಯ ಬಿ. ಸ್ವಾಗತಿಸಿದರೆ, ಹಿರಿಯ ಕ್ಷೇತ್ರ ಅಧೀಕ್ಷಕ ಡಾ.ಶಂಕರ್ ಎಂ. ವಂದಿಸಿದರು. ಸಂತೋಷ ಶೆಟ್ಟಿ ನೀಲಾವರ ವಂದಿಸಿದರು.

ಕಾಡುಪ್ರಾಣಿ ಹಾವಳಿ ತಡೆಗೆ ಎಐ ಬಳಕೆ

ಪ್ರಾಸ್ತಾವಿಕವಾಗಿ ಮಾತನಾಡಿದ ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ ಕುಲಪತಿ ಡಾ.ಆರ್.ಸಿ. ಜಗದೀಶ್, ಕರಾವಳಿ ಜಿಲ್ಲೆಗಳ ರೈತರಿಗೆ ದೊಡ್ಡ ತಲೆನೋವಾಗಿರುವ ಕಾಡುಪ್ರಾಣಿಗಳ ಹಾವಳಿ ತಡೆಗೆ ಕೃತಕ ಬುದ್ಧಿಮತ್ತೆ (ಎಐ) ಬಳಸಿ ಯಂತ್ರವೊಂದನ್ನು ಕಂಡು ಹಿಡಿದಿದ್ದು, ಅದು ದಾಳಿ ಮಾಡುವ ಪ್ರಾಣಿ ಇಲ್ಲವೇ ಪಕ್ಷಿ ಹೆದರುವ ಪ್ರಾಣಿ ಗಳ ಧ್ವನಿ ಹೊರಡಿಸಿ ಅವುಗಳನ್ನು ಯಶಸ್ವಿಯಾಗಿ ಓಡಿಸುತ್ತವೆ ಎಂದರು.

ಜಿಲ್ಲೆಯಲ್ಲೀಗ ಗೇರು ಲಾಭದಾಯಕ ಕೃಷಿಯಾಗಿದೆ. ಗೋಡಂಬಿ ಈಗ ಭಾರೀ ಜನಪ್ರಿಯತೆ ಪಡೆಯುತ್ತಿದೆ. ನಮ್ಮ ಬೇಡಿಕೆ 20 ದಶಲಕ್ಷ ಟನ್ ಆದರೆ, ನಾವು ಉತ್ಪಾದಿಸುತ್ತಿರುವುದು ಕೇವಲ 10 ದಶಲಕ್ಷ ಟನ್. ಉಳಿದುದನ್ನು ವಿದೇಶಗಳಿಂದ ಕಚ್ಛಾ ಬೀಜ ತರಿಸಿ ಸಂಸ್ಕರಿಸಿ ರಫ್ತು ಮಾಡುತಿದ್ದೇವೆ. ಕೇಂದ್ರದಲ್ಲಿ ಗೇರುವಿನ 7 ತಳಿಗಳನ್ನು ಅಭಿವೃದ್ಧಿ ಪಡಿಸಿದ್ದೇವೆ ಎಂದು ಡಾ.ಜಗದೀಶ್ ತಿಳಿಸಿದರು.

ಕರಾವಳಿಯಲ್ಲಿ ಭತ್ತ ಬೆಳೆಯುವ ಕ್ಷೇತ್ರ ಪ್ರತಿವರ್ಷ ಇಳಿಮುಖವಾದರೂ, ನಮ್ಮ ಸಂಶೋಧನಾ ಕೇಂದ್ರ ಇಲ್ಲಿನ ಪರಿಸರಕ್ಕೆ ಪೂರಕವಾಗುವ ಹೊಸ ಹೊಸ ತಳಿಗಳನ್ನು ಬಿಡುಗಡೆ ಮಾಡುತಿದೆ. 2000 ಎಕರೆ ಹಡಿಲು ಭೂಮಿಯಲ್ಲಿ ಯಾಂತ್ರೀಕೃತ ಕೃಷಿ ಪ್ರಾತ್ಯಕ್ಷಿಕೆ ಮಾಡಿದ್ದೇವೆ ಎಂದರು.


 








 


 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News