×
Ad

ಅಕ್ಷತಾ ಪೂಜಾರಿ ಹಲ್ಲೆ ಪ್ರಕರಣ | ಬ್ರಹ್ಮಾವರ ಠಾಣೆಯಿಂದ ತನಿಖೆ ವರ್ಗಾವಣೆ: ಎಸ್ಪಿ ಹರಿರಾಂ ಶಂಕರ್

ಲೋಪ ಕಂಡುಬಂದಲ್ಲಿ ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮದ ಭರವಸೆ

Update: 2025-12-16 23:01 IST

ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ 

ಉಡುಪಿ: ಬ್ರಹ್ಮಾವರ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಉಪ್ಪೂರಿನಲ್ಲಿ ಅಕ್ಷತಾ ಪೂಜಾರಿ ಎಂಬ ವಿದ್ಯಾರ್ಥಿನಿಯೊಬ್ಬಳ ಮೇಲೆ ಪೊಲೀಸರಿಂದ ಹಲ್ಲೆಯ ಆರೋಪ ಹಾಗೂ ಪ್ರತ್ಯಾರೋಪಕ್ಕೆ ಸಂಬಂಧಿಸಿದಂತೆ ಇಡೀ ಪ್ರಕರಣದ ತನಿಖೆಯನ್ನು ಬ್ರಹ್ಮಾವರ ಪೊಲೀಸ್ ಠಾಣೆಯಿಂದ ವರ್ಗಾಯಿಸಿ ಸೂಕ್ತವಾದ ತನಿಖಾಧಿಕಾರಿಗೆ ಹಸ್ತಾಂತರಿಸಲು ನಿರ್ಧರಿಸುವುದಾಗಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದ್ದಾರೆ.

ಈ ಕುರಿತಂತೆ ಪತ್ರಿಕಾ ಪ್ರಕಟಣೆಯೊಂದನ್ನು ನೀಡಿರುವ ಹರಿರಾಂ ಶಂಕರ್, ಈ ಘಟನೆಗೆ ಸಂಬಂಧಿಸಿದಂತೆ ಕಳೆದ ಎರಡು ದಿನಗಳಿಂದ ಬಿಲ್ಲವ ಸಮಾಜದ ಸಂಘಟನೆಗಳು, ಚುನಾಯಿತ ಪ್ರತಿನಿಧಿಗಳು, ಮಹಿಳಾ ಸಂಘಟನೆಗಳ ಮುಖಂಡರು ಹಾಗೂ ರಾಜಕೀಯ ಪಕ್ಷದ ಮುಖಂಡರುಗಳು ಆ ದಿನದ ಘಟನೆಯ ಬಗ್ಗೆ ಬೇರೆ ಬೇರೆ ರೀತಿಯಲ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ. ಆದುದರಿಂದ ಸದ್ಯಕ್ಕೆ ಈ ಪ್ರಕರಣದ ತನಿಖೆಯನ್ನು ಸ್ಥಗಿತಗೊಳಿಸಿ, ತನಿಖೆಯನ್ನು ಬ್ರಹ್ಮಾವರ ಪೊಲೀಸ್ ಠಾಣೆಯಿಂದ ವರ್ಗಾಯಿಸಲು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ.

ಅಲ್ಲದೇ ಸಂತ್ರಸ್ಥ ಮಹಿಳೆಯರು ಇಲಾಖಾ ಸಿಬ್ಬಂದಿಗಳ ಮೇಲೆ ಮಾಡಿರುವ ಆರೋಪಗಳನ್ನು ಇಲಾಖೆಯ ಹಿರಿಯ ಅಧಿಕಾರಿಗಳಿಂದ ವಿಚಾರಣೆ ಪಡಿಸಿ, ಲೋಪಗಳು ಕಂಡುಬಂದಲ್ಲಿ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ನಿರ್ದರಿಸಿದ್ದೇನೆ. ಈ ಘಟನೆಗೆ ಸಂಬಂಧಪಟ್ಟಂತೆ ನ್ಯಾಯ ಒದಗಿಸಬೇಕಾದ ಹಿತದೃಷ್ಠಿಯಿಂದ ಈ ನಿರ್ಧಾರವನ್ನು ಕೈಗೊಂಡಿರುವುದಾಗಿ ಹೇಳಿರುವ ಅವರು, ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಯಾವುದೇ ರೀತಿಯಲ್ಲಿ ಗೊಂದಲ ಹಾಗೂ ಅನುಮಾನ ಪಡುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಘಟನೆ ಹಿನ್ನೆಲೆ:

ಆರೋಪಿ ಆಶಿಕ್ ಪೂಜಾರಿ ಎನ್ನುವವರ ವಿರುದ್ಧ ಕೋರ್ಟ್‌ನಿಂದ 2014ರಲ್ಲಿ ನಡೆದ ಒಂದು ಅಪಘಾತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಿಕ್ಷೆ ಆಗಿ, ಇದರ ಬಗ್ಗೆ 20 ಲಕ್ಷ ರೂ. ಹಾಗೂ ಅದರ ಬಡ್ಡಿಯನ್ನು ನ್ಯಾಯಾಲಯಕ್ಕೆ ಜಮಾ ಮಾಡುವ ಕುರಿತು ನ್ಯಾಯಾಲಯದ ತೀರ್ಪು ಬಂದಿತ್ತು. ಆರೋಪಿ ಆಶಿಕ್ ನ್ಯಾಯಾಲಯಕ್ಕೆ ಹಾಜರಾಗದೇ ಹಾಗೂ ಹಣವನ್ನು ಕಟ್ಟದೇ ಇರುವುದರಿಂದ, ನ್ಯಾಯಾಲಯವು ಆರೋಪಿಯನ್ನು ದಸ್ತಗಿರಿ ಮಾಡಿ ಉಡುಪಿ ನ್ಯಾಯಾಲಯದ ಮುಂದೆ ಡಿ.17ರ ಒಳಗೆ ಹಾಜರುಪಡಿಸುವಂತೆ ಮಲ್ಪೆ ಪೊಲೀಸ್ ಠಾಣೆಗೆ ಸೂಚನಾ ಪತ್ರ ಹೊರಡಿಸಿ ಆದೇಶ ಮಾಡಿತ್ತು.

ಈ ಬಗ್ಗೆ ನ್ಯಾಯಾಲಯದ ಸೂಚನಾ ಪತ್ರದಂತೆ ವಾರಂಟ್ ಜಾರಿ ಮಾಡುವ ಕುರಿತು, ಮಲ್ಪೆ ಪೊಲೀಸ್ ಠಾಣಾ ಸಿಬ್ಬಂದಿ, ಬ್ರಹ್ಮಾವರ ಠಾಣಾ ವ್ಯಾಪ್ತಿಯ ಉಪ್ಪೂರಿನಲ್ಲಿರುವ ಆರೋಪಿಯ ಸಂಬಂಧಿಯ ಮನೆಯಲ್ಲಿ ಅದನ್ನು ಜಾರಿ ಮಾಡಲು ತೆರಳಿದ್ದರು. ಈ ಸಂದರ್ಭದಲ್ಲಿ ಆ ಮನೆಯಲ್ಲಿದ್ದ ಇಬ್ಬರು ಮಹಿಳೆಯರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು ಎಂದು ಅವರು ಘಟನೆಯ ಹಿನ್ನೆಲೆಯನ್ನು ತಿಳಿಸಿದ್ದರು.

ಬ್ರಹ್ಮಾವರ ಠಾಣೆ ಎದುರು ನಾಳೆ ಪ್ರತಿಭಟನೆ:

ಈ ನಡುವೆ ಬ್ರಹ್ಮಾವರ ಪೊಲೀಸರ ಕ್ರಮವನ್ನು ಖಂಡಿಸಿ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಡಿ.17ರಂದು ಅಪರಾಹ್ನ 3:00ಗಂಟೆಗೆ ಬ್ರಹ್ಮಾವರ ಪೊಲೀಸ್ ಠಾಣೆಯ ಎದುರು ನ್ಯಾಯಕ್ಕಾಗಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದೆ.

ವಿದ್ಯಾರ್ಥಿನಿ ಅಕ್ಷತಾ ಪೂಜಾರಿ ಅವರ ಉಪ್ಪೂರು ಮನೆಗೆ ಡಿ.10ರಂದು ಮುಂಜಾನೆ 4:00 ಗಂಟೆ ಸುಮಾರಿಗೆ ಪೊಲೀಸರು ಕೋರ್ಟ್ ಅಮೀನ್ ಇಲ್ಲದೆ ಮನೆಗೆ ಅಕ್ರಮ ಪ್ರವೇಶ ಮಾಡಿ ತಮ್ಮ ಅಧಿಕಾರದ ದರ್ಪ ಪ್ರದರ್ಶಿಸಿ ವಿದ್ಯಾರ್ಥಿನಿಯ ಮೇಲೆ ದೌರ್ಜನ್ಯ ಎಸಗಿರುವುದು ತೀವ್ರ ಖಂಡನೀಯ ಎಂದು ವೇದಿಕೆ ಪ್ರಕಟಣೆಯಲ್ಲಿ ತಿಳಿಸಿದೆ.

ತಮ್ಮ ತಪ್ಪನ್ನು ಮುಚ್ಚಿಹಾಕುವ ಉದ್ದೇಶದಿಂದ ದೌರ್ಜನ್ಯಕ್ಕೆ ಒಳಗಾದ ಆ ಬಡ ವಿದ್ಯಾರ್ಥಿನಿಯ ಮತ್ತು ತಾಯಿಯ ಮೇಲೆ, ಕರ್ತವ್ಯ ಅಡ್ಡಿ ಪಡಿಸಿದ ಸುಳ್ಳು ಆರೋಪವನ್ನು ದಾಖಲಿಸಿದ್ದು, ಇದು ನ್ಯಾಯ ವ್ಯವಸ್ಥೆಗೆ ಬಳಿದ ಮಸಿಯಾಗಿದೆ. ಈ ಬಗ್ಗೆ ಸಭೆ ನಡೆಸಿದ ಬಿಲ್ಲವ ಸಂಘಟನೆಗಳು, ಸಮಾಜದ ಮುಖಂಡರು, ಮಹಿಳಾ ಆಯೋಗದ ಪ್ರತಿನಿಧಿಗಳು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿಯಾಗಿ ನ್ಯಾಯಕ್ಕಾಗಿ ಮನವಿ ಮಾಡಿದ್ದು ಈವರೆಗೆ ಯಾವುದೇ ಸ್ಪಷ್ಟ ಕ್ರಮ ಅಥವಾ ಪ್ರತಿಕ್ರಿಯೆ ಲಭಿಸಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನಾಳಿನ ಪ್ರತಿಭಟನೆ ಜಾತಿ-ಮತ-ಪಕ್ಷ ಭೇದವಿಲ್ಲದೆ, ಪೊಲೀಸ್ ದೌರ್ಜನ್ಯ ಎಸಗಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿ, ಅನ್ಯಾಯಕ್ಕೊಳಗಾದ ಅಕ್ಷತಾ ಪೂಜಾರಿ ಮತ್ತು ಅವರ ತಾಯಿಗೆ ನ್ಯಾಯ ದೊರಕಿಸುವ ಹೋರಾಟವಾಗಿರುತ್ತದೆ ಎಂದು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಹೇಳಿಕೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News