×
Ad

ಸೆ.15ರ ‘ಸಂವಿಧಾನ ಓದು’ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ; ಉಡುಪಿ ಡಿಸಿ ವಿದ್ಯಾಕುಮಾರಿ ಸೂಚನೆ

Update: 2023-09-12 21:01 IST

ಉಡುಪಿ: ಭಾರತದ ಸಂವಿಧಾನದ ತತ್ವಗಳನ್ನು ತಮ್ಮ ಜೀವನ ಮತ್ತು ಕರ್ತವ್ಯಗಳಲ್ಲಿ ಅಳವಡಿಸಿಕೊಂಡು ಪೀಠಿಕೆಗೆ ಬದ್ಧರಾಗುವ ಉದ್ದೇಶದಿಂದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಸೆ.15ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲೆಯಾದ್ಯಂತ ಸಂವಿಧಾನ ಪೀಠಿಕೆಯನ್ನು ಒಟ್ಟಾಗಿ ಓದುವ ಬೃಹತ್ ಕಾರ್ಯಕ್ರಮವನ್ನು ಹ್ಮುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ.

ಸೋಮವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಭಾರತ ಸಂವಿಧಾನದ ಪೀಠಿಕೆಯನ್ನು ಓದುವ ಜಿಲ್ಲಾ ಮಟ್ಟದ ಕಾರ್ಯಕ್ರಮ ಉಡುಪಿಯ ಅಜ್ಜರಕಾಡಿನ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದರು.

ಜಿಲ್ಲಾ ಮಟ್ಟದ ಅಧಿಕಾರಿಗಳು ಸಂವಿಧಾನ ಓದು ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಬೇಕು. ಜಿಲ್ಲಾ, ತಾಲೂಕು ಹಾಗೂ ಗ್ರಾಮ ಮಟ್ಟದ ಲ್ಲಿರುವ ಕಚೇರಿಗಳು ಹಾಗೂ ವಿದ್ಯಾಸಂಸ್ಥೆಗಳು ತಮ್ಮ ಕಚೇರಿ, ವಿದ್ಯಾಸಂಸ್ಥೆ ಗಳಲ್ಲಿ ಸಾಮೂಹಿಕವಾಗಿ ಸಂವಿಧಾನ ಪೀಠಿಕೆ ಓದಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ವಿದ್ಯಾಸಂಸ್ಥೆಗಳು ಹಾಗೂ ಇಲಾಖೆಗಳು ಆನ್‌ಲೈನ್ ಮೂಲಕ ಪಾಲ್ಗೊಳ್ಳಲಿದ್ದು, ಅಂದು ಎಲ್ಲಾ ಸರಕಾರಿ ಕಛೇರಿ, ಶಾಲಾ-ಕಾಲೇಜು, ವಿದ್ಯಾರ್ಥಿ ನಿಲಯಗಳಲ್ಲಿ ಸಂವಿಧಾನ ಪೀಠಿಕೆ ಓದಬೇಕು. ಈ ಮೂಲಕ ಸಂವಿಧಾನ ಪೀಠಿಕೆಯ ಮಹತ್ವ ಹಾಗೂ ಸಂವಿಧಾನದ ಮೌಲ್ಯ ಮತ್ತು ತತ್ವಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.

ತಾಲೂಕು ಮಟ್ಟದಲ್ಲಿ ತಹಶೀಲ್ದಾರ್ ಹಾಗೂ ತಾಲೂಕು ಪಂಚಾಯತ್ ಅಧಿಕಾರಿಗಳು ಸೇರಿ ತಾಲೂಕು ಕಚೇರಿಯ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಿ ಯಶಸ್ವಿಗೊಳಿಸಬೇಕು ಎಂದರು.

ಶಾಲಾ ಶಿಕ್ಷಣ ಇಲಾಖೆ, ಕಾಲೇಜು ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕೃಷಿ ಇಲಾಖೆ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳಿಗೆ ಸಂವಿಧಾನ ಪೀಠಿಕೆ ಓದಲು ನೋಂದಣಿ ಮಾಡಿಸುವ ಗುರಿ ನಿಗದಿ ಪಡಿಸಿದ್ದು, ಸಕಾಲದಲ್ಲಿ ನೋಂದಣಿ ಕಾರ್ಯ ಸಂಪೂರ್ಣಗೊಳಿಸಿ ಎಂದು ಡಿಸಿ ನಿರ್ದೇಶನ ನೀಡಿದರು.

ಸಮಾಜ ಕಲ್ಯಾಣ ಇಲಾಖೆಯ - http://thepreamble-swdkar.in- ವೆಬ್‌ಸೈಟ್ ಮೂಲಕ ನೊಂದಾಯಿಸಿಕೊಂಡು ಪ್ರಜಾಪ್ರಭುತ್ವದ ಅಧಿಕೃತ ಆಚರಣೆಯಲ್ಲಿ ಎಲ್ಲರೂ ಭಾಗವಹಿಸುವಂತೆ ಸಾರ್ವಜನಿಕರನ್ನು ಪ್ರೇರೇಪಿಸುವ ಕಾರ್ಯವಾಗಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್., ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಅನಿತಾ ಮಡ್ಲೂರು, ದಲಿತ ಸಂಘಟನೆಯ ಮುಖಂಡರುಗಳು, ಸಂಘ ಸಂಸ್ಥೆಗಳ ಪದಾಧಿಕಾರಿ ಗಳು, ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು

ದಿನಾಂಕ ವಿಸ್ತರಣೆ

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಭಾರತದ ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮದಲ್ಲಿ ಎಲ್ಲಾ ಶೈಕ್ಷಣಿಕ ಸಂಸ್ಥೆಗಳು, ಸರಕಾರಿ/ಅರೆ ಸರಕಾರಿ ಇಲಾಖೆಗಳು, ಸಂಘಸಂಸ್ಥೆಗಳು ಹಾಗೂ ಪ್ರತಿಯೊಬ್ಬರೂ - www.thepreamble-swdkar.in- ವೆಬ್‌ಸೈಟ್‌ನಲ್ಲಿ ನೊಂದಣಿ ಮಾಡಲು ನಿಗದಿ ಪಡಿಸಲಾಗಿರುವ ಅವಧಿಯನ್ನು ಸೆಪ್ಟಂಬರ್ 14ರ ಸಂಜೆ 6 ಗಂಟೆಯವರೆಗೆ ವಿಸ್ತರಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News