×
Ad

ಉಡುಪಿ ಜಿಲ್ಲೆಯಲ್ಲಿ ಅ.29ರ ಎಸ್‌ಡಿಎ ಪರೀಕ್ಷೆಗೆ ಸರ್ವ ಸಿದ್ಧತೆ: ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ

Update: 2023-10-26 19:12 IST

ಉಡುಪಿ, ಅ.26: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅ.29ರ ರವಿವಾರ ಉಡುಪಿ ಜಿಲ್ಲೆಯ 10 ಪರೀಕ್ಷಾ ಕೇಂದ್ರ ಗಳಲ್ಲಿ ವಿವಿಧ ನಿಗಮ, ಮಂಡಳಿಗಳ ದ್ವಿತೀಯ ದರ್ಜೆ ಸಹಾಯಕರು/ ಕಿರಿಯ ಸಹಾಯಕರು ಮುಂತಾದ ಸಮನಾದ ಹುದ್ದೆಗಳಿಗೆ ನೇಮಕಾತಿಗೆ ನಡೆಯಲಿರುವ ಪರೀಕ್ಷೆಗೆ ಎಲ್ಲಾ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.

ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಪರೀಕ್ಷೆಗೆ ಸಂಬಂಧಿಸಿದಂತೆ ಎಲ್ಲಾ ಮಾಹಿತಿಗಳನ್ನು ಹಾಗೂ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲು ಅನುಸರಿಸಬೇಕಾದ ವಸ್ತ್ರ ಸಂಹಿತೆ ಹಾಗೂ ನೀತಿ ಸಂಹಿತೆಗಳನ್ನು ವಿವರಿಸಿದರು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅ.28 ಮತ್ತು 29ರಂದು ಪರೀಕ್ಷೆ ನಡೆಯಲಿದ್ದು, ಉಡುಪಿ ಜಿಲ್ಲೆಯಲ್ಲಿ ಈ ಪರೀಕ್ಷೆ ಅ.29ಕ್ಕೆ ನಿಗದಿಯಾಗಿದೆ. ಇದಕ್ಕಾಗಿ ಉಡುಪಿಯಲ್ಲಿ 5, ಕುಂದಾಪುರದಲ್ಲಿ 3 ಹಾಗೂ ಕಾರ್ಕಳದಲ್ಲಿ ಎರಡು ಕೇಂದ್ರಗಳನ್ನು ಸಜ್ಜುಗೊಳಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 4240 ಮಂದಿ ಅಭ್ಯರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದಾರೆ. ಪರೀಕ್ಷೆ ಬೆಳಗ್ಗೆ 10:30ರಿಂದ 12:30 ಹಾಗೂ ಅಪರಾಹ್ನ 2:30ರಿಂದ ಸಂಜೆ 4:30ರವರೆಗೆ ನಡೆಯಲಿದೆ ಎಂದರು.

ಎಲ್ಲಾ 10 ಪರೀಕ್ಷಾ ಕೇಂದ್ರಗಳ ಸುತ್ತಲೂ 200ಮೀ. ವ್ಯಾಪ್ತಿಯಲ್ಲಿ ಪರೀಕ್ಷೆ ದಿನ 144ನೇ ಸೆಕ್ಷನ್ ಅಡಿ ನಿಷೇಧಾಜ್ಞೆ ಜಾರಿಗೊಳಿಸಲಾಗುವುದು. ಹೀಗಾಗಿ ಅಲ್ಲಿರುವ ಎಲ್ಲಾ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಬೇಕಾಗುತ್ತದೆ. ಪರೀಕ್ಷೆ ಬರೆಯಲು ಹೆಸರು ನೊಂದಾಯಿಸಿಕೊಂಡಿರುವ ಎಲ್ಲಾ ಅಭ್ಯರ್ಥಿಗಳು ಬೆಳಗ್ಗೆ 10:00ಗಂಟೆಯೊಳಗೆ ಕೇಂದ್ರಕ್ಕೆ ಬಂದು ವರದಿ ಮಾಡಿಕೊಂಡು ತಪಾಸಣೆಗೆ ಒಳಗಾಗಬೇಕಿದೆ ಎಂದರು.

ಪರೀಕ್ಷಾ ಕೇಂದ್ರದಲ್ಲಿ ಉಪ ಮುಖ್ಯ ಅಧೀಕ್ಷಕರನ್ನು ಹೊರತು ಪಡಿಸಿ ಉಳಿದ ಎಲ್ಲಾ ಪರೀಕ್ಷಾ ಸಿಬ್ಬಂದಿಗಳು ಹಾಗೂ ಅಭ್ಯರ್ಥಿಗಳಿಗೆ ಮೊಬೈಲ್ ತರುವುದು ಮತ್ತು ಉಪಯೋಗಿಸುವುದನ್ನು ನಿಷೇಧಿಸಲಾಗಿದೆ. ಉಪಮುಖ್ಯ ಅಧೀಕ್ಷಕರಿಗೂ ಕೆಮರಾ ಇಲ್ಲದ ಸಾಮಾನ್ಯ ಮೊಬೈಲ್ (ಬೇಸಿಕ್ ಸೆಟ್)ನ್ನು ಮಾತ್ರ ಹೊಂದಿರಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಅಭ್ಯರ್ಥಿಗಳು ಬೆಳಗ್ಗೆ ಹಾಗೂ ಅಪರಾಹ್ನ ಸಂಬಂಧಿತರಿಂದ ತಪಾಸಣೆ ಗೊಳಗಾದ ಬಳಿಕವೇ ಪರೀಕ್ಷಾ ಕೇಂದ್ರ ಪ್ರವೇಶಿಸ ಬೇಕು. ಒಮ್ಮೆ ಪ್ರವೇಶಿಸಿದ ಬಳಿಕ ಪರೀಕ್ಷಾವಧಿ ಪೂರ್ಣಗೊಂಡ ನಂತರವೇ ಎಲ್ಲರೂ ಕೇಂದ್ರದಿಂದ ಹೊರಬರಬೇಕು. ಬೇಗನೆ ಪರೀಕ್ಷೆ ಬರೆದವರಿಗೂ ಅವಧಿ ಮುಗಿಯುವವರೆಗೆ ಹೊರಬರಲು ಅವಕಾಶವಿರುವುದಿಲ್ಲ ಎಂದರು.

ಪರೀಕ್ಷಾ ಕೇಂದ್ರದೊಳಗೆ ಯಾವುದೇ ನಿಷೇಧಿತ ವಸ್ತುಗಳನ್ನು ಕೊಂಡೊಯ್ಯಲು ಅವಕಾಶವಿಲ್ಲ. ಯಾವುದೇ ಅಭ್ಯರ್ಥಿ ನಿಷೇಧಿತ ವಸ್ತು ಹೊಂದಿರುವುದು ಪತ್ತೆಯಾದರೆ ಆತನನ್ನು ಪರೀಕ್ಷೆಯಿಂದ ಅನರ್ಹಗೊಳಿಸ ಲಾಗುವುದು. ನಿಷೇಧಿತ ವಸ್ತು ಗಳಲ್ಲಿ ಎಲೆಕ್ಟ್ರಾನಿಕ್ಸ್ ವಸ್ತುಗಳು, ಮೊಬೈಲ್ ಪೋನ್, ಪೆನ್‌ಡ್ರೈವ್, ಇಯರ್ ಫೋನ್, ಮೈಕ್ರೋಫೋನ್, ಬ್ಲೂಟೂಥ್ ಸಾಧನ, ಕೈಗಡಿಯಾರ ಸೇರಿವೆ.

ಇದರೊಂದಿಗೆ ಪೆನ್ಸಿಲ್, ಪೇಪರ್, ಎರೇಸರ್, ಜಾಮಿಟ್ರಿ ಬಾಕ್ಸ್, ಲಾಗ್ ಟೇಬಲ್‌ಗಳಿಗೂ ಅವಕಾಶವಿಲ್ಲ. ಬ್ಲೂಟೂಥ್ ಸಾಧನಗಳ ಬಳಕೆ ತಡೆಯಲು ತಲೆಯ ಮೇಲೆ ಟೋಪಿ ಅಥವಾ ಯಾವುದೇ ವಸ್ತ್ರವನ್ನು ಧರಿಸುವುದನ್ನು, ಬಾಯಿ, ಕಿವಿ ಹಾಗೂ ತಲೆ ಮುಚ್ಚುವ ವಸ್ತು, ಸಾಧನ ಅಲ್ಲದೇ ಮಾಸ್ಕ್ ಧರಿಸುವುದನ್ನು ನಿಷೇಧಿಸಲಾಗಿದೆ.

ಪುರುಷ ಅಭ್ಯರ್ಥಿಗೆ ವಸ್ತ್ರಸಂಹಿತೆ: ಪರೀಕ್ಷೆ ದಿನ ತುಂಬುತೊಳಿನ ಅಂಗಿ ತೊಡಲು ಅನುಮತಿ ಇಲ್ಲ. ಅಭ್ಯರ್ಥಿಗಳು ಅರ್ಧ ತೋಳಿನ ಶರ್ಟ್ ಧರಿಸ ಬೇಕು. ಸರಳ ಪ್ಯಾಂಟ್‌ಗೆ ಅವಕಾಶವಿದ್ದು, ಕುರ್ತಾ ಪೈಜಾಮ, ಜೀನ್ಸ್ ಪ್ಯಾಂಟ್‌ಗೆ ಅನುಮತಿ ಇಲ್ಲ. ಜಿಪ್ ಪಾಕೆಟ್‌ಗಳು, ದೊಡ್ಡ ಬಟನ್, ಶೂ ಧರಿಸಲು ನಿಷೇಧವಿದೆ. ಕೇವಲ ಚಪ್ಪಲಿಗೆ ಅವಕಾಶ. ಯಾವುದೇ ಲೋಹದ ಆಭರಣ ಧರಿಸುವುದಕ್ಕೆ, ಕಿವಿಯೋಲೆ, ಉಂರ, ಕಡಗಗಳನ್ನು ಧರಿಸಲು ನಿಷೇಧವಿದೆ.

ಮಹಿಳಾ ಅಭ್ಯರ್ಥಿಗಳಿಗೆ ವಸ್ತ್ರ ಸಂಹಿತೆ: ಮಹಿಳಾ ಅಭ್ಯರ್ಥಿಗಳು ಕಸೂತಿ, ಹೂಗಳು, ಬ್ರೂಚ್, ಬಟನ್‌ಗಳಿರುವ ಬಟ್ಟೆ ಧರಿಸುವಂತಿಲ್ಲ. ಮುಜುಗುರ ವಾಗದಂತೆ ಅರ್ಧತೋಳಿನ ಬಟ್ಟೆ ಧರಿಸಬಹುದು. ತುಂಬು ತೋಳಿನ ಬಟ್ಟೆ, ಜೀನ್ಸ್ ಪ್ಯಾಂಟ್‌ಗೆ ಅವಕಾಶವಿಲ್ಲ. ಎತ್ತರವಾದ ಹಿಮ್ಮಡಿಯ ಶೂ, ಹೈಹೀಲ್ಡ್ ಚಪ್ಪಲಿ ಧರಿಸಬಾರದು. ತೆಳುವಾದ ಅಡಿಭಾಗ ಹೊಂದಿರುವ ಚಪ್ಪಲಿಗೆ ಮಾತ್ರ ಅವಕಾಶ. ಲೋಹದ ಆಭರಣಗಳಿಗೆ ಅವಕಾಶವಿಲ್ಲ. ಮೂಗುತಿ ಮತ್ತು ಮಂಗಳಸೂತ್ರಕ್ಕೆ ಅವಕಾಶವಿದೆ

ಹಿಜಾಬ್ ಧರಿಸಲು ಅವಕಾಶ: ಮಹಿಳಾ ಅಭ್ಯರ್ಥಿಗಳಿಗೆ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶವಿದೆ. ಆದರೆ ಇಂಥ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಒಂದು ಗಂಟೆ ಮುಂಚಿತವಾಗಿ ಬಂದು ತಪಾಸಣೆಗೆ ಒಳಗಾಗಬೇಕಾ ಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಸ್ಪಷ್ಟಪಡಿಸಿದರು.

ಜಿಲ್ಲೆಯ 10 ಪರೀಕ್ಷಾ ಕೇಂದ್ರಗಳಿಗೆ ತ್ರಿಸದಸ್ಯ ಸಮಿತಿಯೊಂದಿಗೆ ಪ್ರಶ್ನೆ ಪತ್ರಿಕೆಗಳ ವಿತರಣೆಗೆ ಪೊಲೀಸ್ ಭದ್ರತೆ ಒದಗಿಸಲಾಗುತ್ತದೆ. ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಅ.29ರಂದು ಪೊಲೀಸ್ ಬಂದೋಬಸ್ತ್ ಒದಗಿಸಲಾಗುವುದು. ಪ್ರತಿ ಕೊಠಡಿಯಲ್ಲಿ 24 ಮಂದಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ. ಪರೀಕ್ಷಾ ಕೊಠಡಿಗೆ ಸಿಸಿಟಿವಿ ಅಳವಡಿಸಲಾಗುವುದು. ಅಂಬುಲೆನ್ಸ್ ಹಾಗೂ ಪೊಲೀಸ್ ಸಿಬ್ಬಂದಿಗಳು ಇರುತ್ತಾರೆ ಎಂದರು.

ಅಭ್ಯರ್ಥಿಗಳಿಗೆ ಸೂಚನೆ: ಪರೀಕ್ಷೆ ದಿನ ಎಲ್ಲಾ ಅಭ್ಯರ್ಥಿಗಳು ಪ್ರವೇಶ ಪತ್ರ ಕಡ್ಡಾಯವಾಗಿ ತರಬೇಕು. ಎರಡು ಇತ್ತೀಚಿನ ಪಾಸ್‌ಪೋರ್ಟ್ ಅಳತೆ ಪೋಟೊ, ಮಾನ್ಯತೆ ಪಡೆದ ಪೋಟೊ ಗುರುತಿನ ಚೀಟಿ ಕಡ್ಡಾಯ. ಅಭ್ಯರ್ಥಿ ಪಾರದರ್ಶಕವಾದ, ಲೇಬಲ್‌ರಹಿತ ಕುಡಿಯುವ ನೀರಿನ ಬಾಟಲ್ ತರಬಹುದು.

ಅಪರ ಜಿಲ್ಲಾಧಿಕಾರಿ ಮಮತಾದೇವಿ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಜಿಲ್ಲೆಯ ಪರೀಕ್ಷಾ ಕೇಂದ್ರ, ಪರೀಕ್ಷೆ ಬರೆಯುವ ಅಭ್ಯರ್ಥಿಗಳು

ಉಡುಪಿ: ವಿದ್ಯೋದಯ ಪ.ಪೂ.ಕಾಲೇಜು (384 ಅಭ್ಯರ್ಥಿಗಳು), ಸರಕಾರಿ ಪ.ಪೂ.ಕಾಲೇಜು (ಬೋರ್ಡ್ ಹೈಸ್ಕೂಲ್-384), ಸರಕಾರಿ ಬಾಲಕಿಯರ ಪ.ಪೂ.ಕಾಲೇಜು (360), ಪೂರ್ಣಪ್ರಜ್ಞ ಪ.ಪೂ.ಕಾಲೇಜು (432), ಎಂಜಿಎಂ ಪ.ಪೂ.ಕಾಲೇಜು (512). ಒಟ್ಟು 2072 ಮಂದಿ.

ಕುಂದಾಪುರ: ಭಂಡಾರ್‌ಕಾರ್ಸ್‌ ಪ.ಪೂ.ಕಾಲೇಜು (336), ಸರಕಾರಿ ಪ. ಪೂ.ಕಾಲೇಜು (528), ಆರ್.ಎನ್.ಶೆಟ್ಟಿ ಸಂಯುಕ್ತ ಪ.ಪೂ.ಕಾಲೇಜು (512). ಒಟ್ಟು 1376 ಮಂದಿ.

ಕಾರ್ಕಳ: ಶ್ರೀಭುವನೇಂದ್ರ ಪ.ಪೂ.ಕಾಲೇಜು (360), ಸರಕಾರಿ ಪ.ಪೂ. ಕಾಲೇಜು (432). ಒಟ್ಟು 792 ಮಂದಿ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News