ಲೈಂಗಿಕ ಕಿರುಕುಳದ ಆರೋಪ: ಉಡುಪಿ ಜಿಲ್ಲಾ ಸರ್ಜನ್ ವರ್ಗಾವಣೆಗೆ ದಸಂಸ ಆಗ್ರಹ
ಉಡುಪಿ, ಜು.24: ಲೈಂಗಿಕ ಕಿರುಕುಳದ ಪ್ರಕರಣದಲ್ಲಿ ಆರೋಪಿ ಯಾಗಿರುವ ಉಡುಪಿ ಜಿಲ್ಲಾ ಸರ್ಜನ್ ಡಾ.ಎಚ್. ಅಶೋಕ್‌ರನ್ನು ತಕ್ಷಣವೇ ವರ್ಗಾವಣೆಗೊಳಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ರಾಜ್ಯ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್ ಆಗ್ರಹಿಸಿದ್ದಾರೆ.
ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಡಾ.ಅಶೋಕ್ ತಪ್ಪಿತಸ್ಥರೆಂದು ಸರಕಾರ 2024ರ ಫೆ.3ರಂದು ಹೊರಡಿಸಿದ ಆದೇಶದಲ್ಲಿ ಹೇಳಿದ್ದು, ಅವರ ಐದು ಇನ್‌ಕ್ರಿಮೆಂಟ್‌ಗಳನ್ನು ಕಡಿತಗೊಳಿಸುವ ಶಿಕ್ಷೆಗೆ ಒಳಪಡಿಸಿತ್ತು. ಅಲ್ಲದೇ ಜಿಲ್ಲಾ ಶಸ್ತ್ರಚಿಕಿತ್ಸಕತರ ಹುದ್ದೆಯಿಂದ ಹಿಂದೆಗೆದುಕೊಂಡು ಬೆಂಗಳೂರಿನ ಕಮಿಷನರ್ ಕಚೇರಿಗೆ ವರ್ಗಾವಣೆ ಮಾಡಲಾಗಿತ್ತು ಎಂದು ಸುಂದರ್ ಮಾಸ್ತರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತನ್ನ ವರ್ಗಾವಣೆಯ ರದ್ಧತಿಗಾಗಿ ಜಿಲ್ಲಾ ಸರ್ಜನ್ ಡಾ.ಅಶೋಕ್ ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿಯ ಮೆಟ್ಟಲೇರಿದ್ದರೂ, ನ್ಯಾಯಮಂಡಳಿ ಇದೇ ತಿಂಗಳು ಅವರ ಅರ್ಜಿಯನ್ನು ತಿರಸ್ಕರಿಸಿದೆ. ಯಾವುದೇ ಪದೋನ್ನತಿಗೂ ಅರ್ಹರಲ್ಲದ ಡಾ.ಅಶೋಕ್ ವರ್ಗಾವಣೆ ಗೊಂಡಿದ್ದರೂ, ಈಗಲೂ ಅದೇ ಹುದ್ದೆಯಲ್ಲಿ ಮುಂದುವರಿಯುತ್ತಿರುವುದನ್ನು ದಸಂಸದ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್ ತೀವ್ರವಾಗಿ ಖಂಡಿಸಿದ್ದಾರೆ.
ಸರ್ಜನ್ ಡಾ.ಅಶೋಕ್, ಉಡುಪಿ ಆಸ್ಪತ್ರೆಯಲ್ಲೂ ಮಹಿಳಾ ಪೀಡಕ ರಾಗಿದ್ದು, ಈ ಬಗ್ಗೆ ಅವರ ಮೇಲೆ ಸಂಬಂಧಪಟ್ಟ ಇಲಾಖೆ, ಸಂಘಟನೆ ಗಳಿಗೂ ದೂರು ಸಲ್ಲಿಸಲಾಗಿದೆ ಎಂದವರು ಹೇಳಿದ್ದಾರೆ.
ಜಿಲ್ಲಾ ಸರ್ಜನ್ ಹುದ್ದೆಗೆ ಯಾವುದೇ ಅರ್ಹತೆ ಹೊಂದಿರದ, ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿ ತಪ್ಪಿತಸ್ಥರೆಂದು ಸಾಬೀತಾಗಿ ವರ್ಗಾವಣೆಗೊಂಡಿರುವ ಹಾಗೂ ಕೆಎಟಿಯಲ್ಲಿ ಅರ್ಜಿ ತಿಸ್ಕೃತಗೊಂಡಿ ರುವುದ ರಿಂದ ಡಾ.ಅಶೋಕ್‌ರನ್ನು ಜಿಲ್ಲಾ ಸರ್ಜನ್ ಹುದ್ದೆಯಿಂದ ತಕ್ಷಣ ವರ್ಗಾವಣೆ ಮಾಡಬೇಕು. ಈ ಕುರಿತಂತೆ ಸರಕಾರ ವಿಳಂಬ ಧೋರಣೆ ತೋರಿದರೆ ಜಿಲ್ಲಾಸ್ಪತ್ರೆ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಸುಂದರ್ ಮಾಸ್ತರ್ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.