ಕುಂದಾಪುರ: ಬ್ರಹ್ಮಾವರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ತಾನು ಮಾಡಿದ ಹಾಸ್ಯದ ತುಣುಕನ್ನು ತಪ್ಪಾಗಿ ಗ್ರಹಿಸಿಕೊಂಡು ವಿಶ್ವಕರ್ಮ ಸಮಾಜದ ಕೆಲವರು ತನ್ನ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ಸಭೆಗೆ ತೆರಳಿ ಸಮಾಧಾನದ ಮಾತು ಹೇಳುವಂತೆ ಸಂಘಟನೆಯ ಅಧ್ಯಕ್ಷ ಸುಬ್ರಾಯ ಆಚಾರ್ ದೂರವಾಣಿ ಮೂಲಕ ಮನವಿ ಮಾಡಿದ್ದರು. ಆದರೆ ಅಲ್ಲಿ ನಡೆದ ಬೆಳವಣಿಗೆಗಳು ತಾನು ನಿರೀಕ್ಷಿಸಿದ್ದಕ್ಕಿಂತ ಸಂಪೂರ್ಣ ಭಿನ್ನವಾಗಿದ್ದವು ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪಕಾಧ್ಯಕ್ಷ ಹಾಗೂ ರೋಟರಿ ಜಿಲ್ಲಾ ಶತಾಬ್ದಿ ಗವರ್ನರ್ ಎ.ಎಸ್.ಎನ್. ಹೆಬ್ಬಾರ್ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಪ್ರಕಟನೆಯಲ್ಲಿ ವಿವರಿಸಿರುವ ಅವರು, “ನನ್ನ ಭಾಷಣದಲ್ಲಿ ಹಳೆಯ ಹಾಸ್ಯದ ತುಣುಕೊಂದನ್ನು ಹೇಳಿದ್ದೆ. ಅದನ್ನು ವಿಶ್ವಕರ್ಮ ಸಮಾಜಕ್ಕೆ ಅನ್ವಯಿಸಿಕೊಂಡು ನನ್ನ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿತ್ತು. ನಾನು ಯಾವುದೇ ರೀತಿಯಲ್ಲೂ ಆ ಸಮುದಾಯವನ್ನು ನಿಂದಿಸಿಲ್ಲ” ಎಂದು ತಿಳಿಸಿದ್ದಾರೆ.

ಸಂಘಟನೆಯ ಅಧ್ಯಕ್ಷ ಸುಬ್ರಾಯ ಆಚಾರ್ ಅವರ ಮನವಿ ಮೇರೆಗೆ ಕೇವಲ ಎರಡು ನಿಮಿಷ ಸಭೆಗೆ ಬಂದು ಸಮಾಧಾನದ ಮಾತು ಹೇಳಿ ತೆರಳುವ ಉದ್ದೇಶದಿಂದ ತಾನು ಅ.6ರಂದು ಸಾಲಿಗ್ರಾಮಕ್ಕೆ ತೆರಳಿದ್ದಾಗಿ ಹೆಬ್ಬಾರ್ ಹೇಳಿದ್ದಾರೆ. ಹಿತಚಿಂತಕರೊಬ್ಬರು ಪೊಲೀಸ್ ರಕ್ಷಣೆ ಇಲ್ಲದೆ ಅಲ್ಲಿಗೆ ತೆರಳದಂತೆ ದೂರವಾಣಿ ಮೂಲಕ ಎಚ್ಚರಿಕೆ ನೀಡಿದ್ದರೂ, ಅಧ್ಯಕ್ಷರು ನೀಡಿದ್ದ ಭರವಸೆಯ ಹಿನ್ನೆಲೆಯಲ್ಲಿ ಸಭೆಗೆ ಹಾಜರಾಗಿದ್ದಾಗಿ ತಿಳಿಸಿದ್ದಾರೆ.

ಅಧ್ಯಕ್ಷರು ಕೂಡ ಎರಡು ನಿಮಿಷ ಮಾತನಾಡಿ ತೆರಳಬಹುದು ಎಂದು ಭರವಸೆ ನೀಡಿದ್ದರು. ಆದರೆ ನಂತರ ತನ್ನ ವಿರುದ್ಧ ಒಬ್ಬರ ನಂತರ ಒಬ್ಬರು ತೀವ್ರವಾಗಿ ಮಾತನಾಡಲು ಆರಂಭಿಸಿದರು. ವೇದಿಕೆಯ ಹಿಂಭಾಗದಲ್ಲಿ ತನ್ನ ಕ್ಷಮೆಯಾಚನೆಯನ್ನು ಸೂಚಿಸುವ ಬ್ಯಾನರ್ ಕೂಡ ಅಳವಡಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

“ಅಧ್ಯಕ್ಷರ ಬಳಿ ಆಕ್ಷೇಪ ವ್ಯಕ್ತಪಡಿಸಿದರೂ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಆಗ ಇದು ಪೂರ್ವನಿಯೋಜಿತವಾದ ಷಡ್ಯಂತ್ರವಿರಬಹುದೆಂಬ ಅನುಮಾನ ನನಗೆ ಮೂಡಿತು” ಎಂದು ಹೆಬ್ಬಾರ್ ಹೇಳಿದ್ದಾರೆ.

ಬಳಿಕ ತನ್ನನ್ನು ಮಾತನಾಡಲು ಕರೆದಾಗ “ಧಿಕ್ಕಾರ, ಧಿಕ್ಕಾರ” ಎಂಬ ಘೋಷಣೆಗಳು ಕೇಳಿಬಂದವು. ತಾನು ಮಾತನಾಡಲು ಆರಂಭಿಸಿ, “ನಿಮ್ಮ ಸಮಾಜದ ಬಗ್ಗೆ ಗೌರವ ಹೊಂದಿರುವ ನಾನು ಈ ವಯಸ್ಸಿನಲ್ಲಿ ನಿಮ್ಮ ಸಮುದಾಯವನ್ನು ನಿಂದಿಸುವ ಅಥವಾ ಅವಮಾನಿಸುವ ಕೆಲಸ ಮಾಡುತ್ತೇನೆಯೇ? ನಿಮ್ಮ ಸಮುದಾಯದ ಬಗ್ಗೆ ನಾನು ಏನೂ ಹೇಳಿಲ್ಲ” ಎಂದು ಹೇಳುತ್ತಿದ್ದ ವೇಳೆ, ವ್ಯಕ್ತಿಯೊಬ್ಬರು “ನಿಮ್ಮ ಭಾಷಣ ಬೇಡ, ಈ ಕೂಡಲೇ ಕ್ಷಮೆ ಕೇಳಿ” ಎಂದು ಕೂಗಾಡಿದರು. ಇದಕ್ಕೆ ಸಭಿಕರಿಂದ ಚಪ್ಪಾಳೆಯೂ ಕೇಳಿಬಂತು ಎಂದು ಅವರು ತಿಳಿಸಿದ್ದಾರೆ.

ವಾತಾವರಣ ಮತ್ತಷ್ಟು ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ, ತನ್ನ ಮೇಲೆ ಹಲ್ಲೆಯಾಗುವ ಸಾಧ್ಯತೆಯಿದೆ ಎಂಬ ಆತಂಕ ಉಂಟಾಯಿತು. ಯಾವುದೇ ಅಪಾಯವಾಗದಂತೆ ಅಲ್ಲಿಂದ ಹೊರಬರಲು ವಿಷಾದ ವ್ಯಕ್ತಪಡಿಸಿ ಸಭೆಯಿಂದ ನಿರ್ಗಮಿಸುವುದೊಂದೇ ಮಾರ್ಗವೆಂದು ಭಾವಿಸಿ ಅಲ್ಲಿಂದ ಹೊರಟಿದ್ದಾಗಿ ಹೆಬ್ಬಾರ್ ತಿಳಿಸಿದ್ದಾರೆ.

“ಪತ್ರಿಕೆಯಲ್ಲಿ ನಾನು ಕ್ಷಮೆಯಾಚಿಸಿದ್ದೇನೆ ಎಂದು ಸಂಘಟನೆಯವರು ಮಾಹಿತಿ ನೀಡಿ ಸುದ್ದಿ ಪ್ರಕಟಿಸಿರುವುದು ತಡವಾಗಿ ನನಗೆ ತಿಳಿಯಿತು. ಈ ಹಿನ್ನೆಲೆಯಲ್ಲಿ ಸತ್ಯಸಂಗತಿಯನ್ನು ಸಾರ್ವಜನಿಕರಿಗೆ ತಿಳಿಸುವುದು ಅಗತ್ಯವೆಂದು ಭಾವಿಸಿ ಈ ಸ್ಪಷ್ಟೀಕರಣ ನೀಡುತ್ತಿದ್ದೇನೆ” ಎಂದು ಹೆಬ್ಬಾರ್ ಹೇಳಿದ್ದಾರೆ.

“ನಾನು ಯಾವುದೇ ತಪ್ಪು ಮಾಡಿಲ್ಲ. ಆದ್ದರಿಂದ ನಾನು ಕ್ಷಮೆ ಯಾಚಿಸುವ ಪ್ರಶ್ನೆಯೇ ಇಲ್ಲ. ವಿಷಾದವೂ ಇಲ್ಲ, ಕ್ಷಮೆಯೂ ಇಲ್ಲ. ನನ್ನಿಂದ ಕ್ಷಮೆ ಯಾಚನೆ ಮಾಡಲಾಗಿದೆ ಎಂಬ ಮಾಹಿತಿ ಸಂಪೂರ್ಣವಾಗಿ ತಪ್ಪಾಗಿದೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor