×
Ad

ಜ.18ರಂದು ಪುತ್ತಿಗೆಯಿಂದ ಶೀರೂರಿಗೆ ‘ಪರ್ಯಾಯ’ ಹಸ್ತಾಂತರ

Update: 2026-01-17 19:59 IST

ಉಡುಪಿ, ಜ.17: ಪ್ರತಿ ಎರಡು ವರ್ಷಗಳಿಗೊಮ್ಮೆ ಉಡುಪಿಯ ಜನತೆ ಸಂಪ್ರದಾಯದಂತೆ ಆಚರಿಸಿಕೊಂಡು ಬರುತ್ತಿರುವ ‘ಪರ್ಯಾಯ ಮಹೋತ್ಸವ’ ಮತ್ತೆ ಬಂದಿದೆ. ರವಿವಾರ ಮುಂಜಾನೆ ಈ ಬಾರಿಯ ಪರ್ಯಾಯ ಅಷ್ಟ ಮಠಗಳಲ್ಲಿ ಒಂದಾದ ಪುತ್ತಿಗೆ ಮಠದಿಂದ ಶೀರೂರು ಮಠಕ್ಕೆ ಹಸ್ತಾಂತರಗೊಳ್ಳಲಿದೆ.

ಅದ್ದೂರಿಯ, ವರ್ಣರಂಜಿತ ಮೆರವಣಿಗೆಯಲ್ಲಿ ಸಾಗಿಬರುವ ಶೀರೂರು ಮಠದ ಶ್ರೀವೇದವರ್ಧನ ತೀರ್ಥರು, ಮುಂಜಾನೆ 5:45ಕ್ಕೆ ಸರಿಯಾಗಿ ತಮ್ಮ 21ರ ಕಿರುಪ್ರಾಯದಲ್ಲೇ ಮೊದಲ ಬಾರಿ ಸರ್ವಜ್ಞ ಪೀಠಾರೋಹಣ ಮಾಡಿ ಮುಂದಿನ ವರ್ಷಗಳ ಕಾಲ ಉಡುಪಿಯ ಪರ್ಯಾಯ ಪೀಠಾಧಿಪತಿ ಎನಿಸಿಕೊಳ್ಳಲಿದ್ದಾರೆ. ಕಳೆದೆರಡು ವರ್ಷಗಳಿಂದ ಪರ್ಯಾಯವನ್ನು ನಡೆಸಿಕೊಟ್ಟ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಮಠದ ಅಧಿಕಾರ ಹಸ್ತಾಂ ತರದ ಸಂಕೇತವಾದ ಅಕ್ಷಯಪಾತ್ರೆ, ಸಟುಗ ಹಾಗೂ ಕೀಲಿಕೈಯನ್ನು ನೀಡುವ ಮೂಲಕ ಕೃಷ್ಣ ಪೂಜೆಯ ಅಧಿಕಾರವನ್ನೂ ಕಿರಿಯ ಸ್ವಾಮೀಜಿಗೆ ಒಪ್ಪಿಸುತ್ತಾರೆ.

ಕರಾವಳಿ ಜಿಲ್ಲೆಗಳ ನಾಡಹಬ್ಬವೆಂದೇ ಖ್ಯಾತಿ ಪಡೆದಿರುವ ಈ ಭಾಗದ ಬಹುದೊಡ್ಡ ಸಾಂಸ್ಕೃತಿಕ ಉತ್ಸವ ‘ಶ್ರೀಕೃಷ್ಣ ಮಠದ ಪರ್ಯಾಯ’ಕ್ಕೆ ಉಡುಪಿ ಮತ್ತೊಮ್ಮೆ ಸಜ್ಜಾಗಿ ನಿಂತಿದೆ. ಈ ಮೂಲಕ ಸುಮಾರು ಎಂಟು ನೂರು ವರ್ಷಗಳ ಹಿಂದೆ ಉಡುಪಿಯಲ್ಲಿ ಶ್ರೀಕೃಷ್ಣ ಮೂರ್ತಿಯನ್ನು ಪ್ರತಿಷ್ಠಾಪಿಸಿ ಅದರ ಪೂಜೆಗೆ ತನ್ನ ಎಂಟು ಮಂದಿ ಶಿಷ್ಯರನ್ನು ನಿಯೋಜಿಸಿ ಅವರಿಗೆ ಸರತಿಯಂತೆ ತಲಾ ಎರಡು ತಿಂಗಳ ಕೃಷ್ಣ ಪೂಜೆಯ ಅಧಿಕಾರವನ್ನು ನೀಡಿದ ದ್ವೈತ ಮತದ ಸ್ಥಾಪಕ ಶ್ರೀಮಧ್ವಾಚಾರ್ಯರು ಪ್ರಾರಂಭಿಸಿದ ಪರಂಪರೆ ಈಗಲೂ ಮುಂದುವರಿಯಲಿದೆ.

ಶ್ರೀಮಧ್ವಾಚಾರ್ಯರು ಎರಡು ತಿಂಗಳ ಪರ್ಯಾಯ ವ್ಯವಸ್ಥೆ ಮಾಡಿದ್ದರೆ, ಈ ವ್ಯವಸ್ಥೆಯಲ್ಲಿ ಹಲವು ಸುಧಾರಣೆ ಗಳನ್ನು ಮಾಡಿದ ಸೋದೆ ಮಠದ ಶ್ರೀವಾದಿರಾಜ ತೀರ್ಥರು (1481-1601) ಅದನ್ನು ಎರಡು ವರ್ಷಗಳಿಗೆ ಏರಿಸಿದರು. ವಾದಿರಾಜರಿಂದ 1522ರಿಂದ ಪ್ರಾರಂಭಗೊಂಡ ಎರಡು ವರ್ಷಗಳ ಪರ್ಯಾಯ ಈಗಲೂ ನಿರ್ವಿಘ್ನ ವಾಗಿ ಮುಂದುವರಿದುಕೊಂಡು ಬಂದಿದೆ. ಅಷ್ಟಮಠಗಳೊಳಗೆ ಎಷ್ಟೇ ಭಿನ್ನಮತಗಳಿದ್ದು, ವಿವಾದದ ಮಟ್ಟಕ್ಕೇರಿ ನ್ಯಾಯಾಲಯದ ಮೆಟ್ಟಿಲು ಹತ್ತಿದರೂ ಈವರೆಗೆ ಪ್ರತಿ ಎರಡು ವರ್ಷಗಳಿ ಗೊಮ್ಮೆ ಒಂದು ಮಠದಿಂದ ಇನ್ನೊಂದು ಮಠಕ್ಕೆ ಅಧಿಕಾರದ ಹಸ್ತಾಂತರ ಮಾತ್ರ ಯಾವುದೇ ಅಡೆತಡೆಯಿಲ್ಲದೇ ನಡೆದುಕೊಂಡು ಬಂದಿದೆ. ದ್ವೈವಾರ್ಷಿಕ ಪರ್ಯಾಯದಲ್ಲಿ ಈಗ ನಡೆಯುತ್ತಿರುವುದು 253ನೇ ಪರ್ಯಾಯವಾಗಿದೆ.

ತಮ್ಮ ಎರಡು ವರ್ಷಗಳ ಪರ್ಯಾಯಾವಧಿಯನ್ನು ಶಿಷ್ಯರಾದ ಶ್ರೀಸುಶ್ರೀಂದ್ರತೀರ್ಥ ಶ್ರೀಪಾದರೊಂದಿಗೆ ಯಶಸ್ವಿ ಯಾಗಿ ಮುಗಿಸಿರುವ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರು ರವಿವಾರ ಮುಂಜಾನೆ 5:45ಕ್ಕೆ ಶ್ರೀಕೃಷ್ಣನ ಪೂಜೆಯ ಅಧಿಕಾರದ ಹಸ್ತಾಂತರದ ದ್ಯೋತಕವಾದ ಅಕ್ಷಯ ಪಾತ್ರೆ ಹಾಗೂ ಮಠದ ಕೀಲಿಕೈಯನ್ನು ಶೀರೂರು ಮಠದ ಶ್ರೀವೇದವರ್ಧನ ತೀರ್ಥ ಶ್ರೀಪಾದರಿಗೆ ನೀಡಲಿದ್ದಾರೆ. ಬಳಿಕ ಶೀರೂರು ಶ್ರೀಗಳು ಮಧ್ವ ಪೀಠಾರೋಹಣ ಮಾಡುವರು. ಇಲ್ಲಿಗೆ ಮುಂದಿನ ಎರಡು ವರ್ಷಗಳ ಅವಧಿಗೆ ಶೀರೂರು ಶ್ರೀಗಳೇ ಶ್ರೀಕೃಷ್ಣನ ಪೂಜೆಗೆ ಅಧಿಕೃತ ಅಧಿಕಾರ ಪಡೆದಂತಾಗುತ್ತದೆ.

ಕಳೆದೊಂದು ವಾರದಿಂದ ನಿರಂತರವಾಗಿ ನಡೆಯುತಿದ್ದ ಪುತ್ತಿಗೆ ಶ್ರೀಗಳ ಪರ್ಯಾಯ ಸಮಾರೋಪ ಸಮಾರಂಭ ಇಂದು ರಥಬೀದಿಯಲ್ಲಿ ಅವರಿಗೆ ಪೌರ ಸನ್ಮಾನ ನೀಡುವ ಮೂಲಕ ಮುಕ್ತಾಯಗೊಂಡಿದೆ. ಪುತ್ತಿಗೆ ಶ್ರೀಸುಗುಣೇಂದ್ರತೀರ್ಥರ ಕಳೆದೆರಡು ವರ್ಷಗಳ ತಮ್ಮ ನಾಲ್ಕನೇ ಪರ್ಯಾಯಾವಧಿಯನ್ನು ವಿಶ್ವ ಗೀತಾ ಪರ್ಯಾಯ ಎಂದು ಕರೆದು ಕೊಂಡಿದ್ದಾರೆ. ಸ್ವಾಮೀಜಿ ಅವರ ಕೋಟಿ ಗೀತಾ ಲೇಖನ ಯಜ್ಞದ ಸಂಕಲ್ಪಕ್ಕೂ ನಾಡಿನ ಜನತೆಯಿಂದ ನಿರೀಕ್ಷೆಗೆ ಮೀರಿದ ಬೆಂಬಲ ವ್ಯಕ್ತವಾಗಿದೆ. ಈ ಕೋಟಿ ಗೀತಾ ಲೇಖನ ಯಜ್ಞ ಇನ್ನೂ ಎರಡು ವರ್ಷಗಳ ಕಾಲ ಮುಂದುವರಿಯ ಲಿದೆ ಎಂದು ಅವರು ಈಗಾಗಲೇ ಪ್ರಕಟಿಸಿದ್ದಾರೆ.

ಪುತ್ತಿಗೆ ಶ್ರೀಗಳ ಭಗವದ್ಗೀತಾ ಅಭಿಯಾನದ ವಿವಿಧ ಹಂತಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ರಾಷ್ಟ್ರಮಟ್ಟದ ಹಲವು ಗಣ್ಯರು ಉಡುಪಿಗೆ ಹಾಗೂ ಮಠಕ್ಕೆ ಬಂದು ಹೋಗಿದ್ದಾರೆ. ಇದಲ್ಲದೇ ಕೃಷ್ಣನಿಗೆ ಸುವರ್ಣ ಪಾರ್ಥಸಾರಥಿ ರಥ, ಕನಕನ ಕಿಂಡಿಗೆ ಸುವಣ‰ ಕವಚ, ಕನಕಮಯ ಸುವರ್ಣ ಮಂಟಪ, ಸುವರ್ಣ ಭಗವದ್ಗೀತೆ ಇತ್ಯಾದಿ ಸಮರ್ಪಣೆಗೊಂಡಿವೆ.

ಆದರೆ ತಾವು ಬಯಸಿದಂತೆ ಕಲ್ಸಂಕದಲ್ಲಿ ಶ್ರೀಕೃಷ್ಣ ಮಠಕ್ಕೆ ಪ್ರವೇಶ ದ್ವಾರ ನಿರ್ಮಿಸುವ ಕನಸು ಕೈಗೂಡಿಲ್ಲ. ಅವರು ಮಾಡಿರುವ ಹಲವು ಅಭಿವೃದ್ಧಿ ಕಾರ್ಯಗಳಲ್ಲಿ ಪ್ರಮುಖವಾದುದು ಎಂಜಲು ಎಲೆ ತ್ಯಾಜ್ಯದ ನಿರ್ವಹಣೆಗೆ ಘಟಕವೊಂದನ್ನು ಮಠದ ಆವರಣದಲ್ಲಿ ನಿರ್ಮಿಸಿ ಕಾರ್ಯಾರಂಭ ಮಾಡಿ ರುವುದು. ಹಿಂದಿನ ಮೂರನೇ ಪರ್ಯಾಯದಂತೆ ಪುತ್ತಿಗೆ ಶ್ರೀಗಳ ನಾಲ್ಕನೇ ಪರ್ಯಾಯವೂ ಯಾವುದೇ ವಿವಾದಗಳಿಲ್ಲದೇ ಮುಗಿದಿರುವುದು ಅವರ ‘ವಿದೇಶ ಸಂಚಾರ’ ವಿವಾದ ಸದ್ದಿಲ್ಲದೇ ಬಗೆಹರಿದಿರುವುದಕ್ಕೆ ಸಾಕ್ಷಿಯಾಗಿದೆ.

ಪರ್ಯಾಯ ಪೀಠವೇರುವ 21ರ ಹರೆಯದ ಶ್ರೀವೇದವರ್ಧನ ತೀರ್ಥರಿಗೆ ಇದು ಚೊಚ್ಚಲ ಪರ್ಯಾಯ. 2018ರಲ್ಲಿ ಅಕಸ್ಮಿಕವಾಗಿ ತೀರಿಕೊಂಡ ಶ್ರೀಲಕ್ಷ್ಮೀವರ ತೀರ್ಥ ಶ್ರೀಪಾದರು ತೆರವು ಮಾಡಿದ ಪೀಠದಲ್ಲಿ ಕುಳಿತಿರುವ ಶ್ರೀವೇದವರ್ಧನ ತೀರ್ಥರಿಗೆ ‘ಹಿರಿಯ ಸ್ವಾಮೀಜಿ’ ಹಾಕಿಕೊಟ್ಟು ಹೋದ ‘ಶೀರೂರು ಪರಂಪರೆ’ಯ ಭಾರವಿದೆ. 2021ರ ಮೇ 14ರಂದು ದ್ವಂದ್ವ ಮಠವಾದ ಸೋದೆ ಮಠದ ಶ್ರೀಗಳಿಂದ ಸನ್ಯಾಸ ದೀಕ್ಷೆ ಸ್ವೀಕರಿಸಿದ ಶ್ರೀವೇದವರ್ಧನ ತೀರ್ಥರು ನಾಲ್ಕೇ ವರ್ಷಕ್ಕೆ ಸರ್ವಜ್ಞ ಪೀಠವೇರುವ ಅದೃಷ್ಟ ಪಡೆದಿದ್ದಾರೆ.

ಜನಸಾಮಾನ್ಯರ ಸ್ವಾಮೀಜಿ ಎನಿಸಿದ್ದ ಶ್ರೀಲಕ್ಷ್ಮೀವರ ತೀರ್ಥರು ತೆರವು ಮಾಡಿದ ಪೀಠವನ್ನು ಶ್ರೀವೇದವರ್ಧನರು ಯಾವ ರೀತಿ ತುಂಬುತ್ತಾರೆ ಎಂಬುದನ್ನು ಅವರ ಲಕ್ಷಾಂತರ ಅಭಿಮಾನಿ ಕುತೂಹಲದಿಂದ ಎದುರು ನೋಡುತ್ತಿದೆ.

ಬಿಗುಭದ್ರತೆ: ಪರ್ಯಾಯಕ್ಕಾಗಿ ನಗರ ಸಂಪೂರ್ಣ ಸಜ್ಜಾಗಿ ನಿಂತಿದೆ. ನಗರದ ಪ್ರತಿಯೊಂದು ಕಟ್ಟಡಗಳು ರಂಗುರಂಗಿನ ಬಣ್ಣ ತಳೆದು, ಇಡೀನಗರವೇ ಮದುಮಗಳಂತೆ ಸಿಂಗರಿಸಿಕೊಂಡು ನಿಂತಿದೆ. ಪರ್ಯಾಯ ಶಾಂತಿಯುತವಾಗಿ ನಡೆಯುಂತೆ ಪೊಲೀಸರು ಸೂಕ್ತ ಬಂದೋಬಸ್ತ್ ಕೈಗೊಂಡಿದ್ದಾರೆ.

ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳು ನಗರದಲ್ಲಿ ಗಸ್ತು ತಿರುಗುತಿದ್ದಾರೆ. ಸುಮಾರು ಮೂರು ಲಕ್ಷ ಜನರು ಈ ಬಾರಿಯ ಪರ್ಯಾಯವನ್ನು ವೀಕ್ಷಿಸುವ ನಿರೀಕ್ಷೆ ಪರ್ಯಾಯ ಸ್ವಾಗತ ಸಮಿತಿಯದ್ದಾಗಿದೆ.

32ನೇ ಪರ್ಯಾಯ ಚಕ್ರದ ಐದನೇ ಪರ್ಯಾಯ

ಉಡುಪಿಯ ಶ್ರೀಕೃಷ್ಣನನ್ನು ಶ್ರೀಮಧ್ವಾಚಾರ್ಯರು 1278ರ ಮಕರ ಸಂಕ್ರಮಣದ ದಿನದಂದು ಉಡುಪಿಯಲ್ಲಿ ಪ್ರತಿಷ್ಠಾಪಿಸಿದರೆಂದು ಪ್ರತೀತಿ ಇದೆ. ಎರಡು ವರ್ಷಗಳಿಗೊಮ್ಮೆ ಪರ್ಯಾಯ ಬದಲಾಗುವ ಕ್ರಮ 1522ರಲ್ಲಿ ಪ್ರಾರಂಭಗೊಂಡಿತು. ಈ ವ್ಯವಸ್ಥೆ ಪಲಿಮಾರು ಮಠದಿಂದ ಆರಂಭಗೊಂಡು ಅದರ ಬಳಿಕ ಅನುಕ್ರಮವಾಗಿ ಅದಮಾರು, ಕೃಷ್ಣಾಪುರ, ಪುತ್ತಿಗೆ, ಶೀರೂರು, ಸೋದೆ, ಕಾಣಿಯೂರು ಕೊನೆಯಲ್ಲಿ ಪೇಜಾವರ ಮಠದೊಂದಿಗೆ ಪರ್ಯಾಯದ ಒಂದು ಚಕ್ರ 16 ವರ್ಷಗಳಲ್ಲಿ ಪೂರ್ಣಗೊಳ್ಳುತ್ತದೆ.

ಹೀಗೆ ಸಾಗಿ ಬಂದ ಪರ್ಯಾಯ 2002ರಲ್ಲಿ 30ನೇ ಚಕ್ರವನ್ನು ಪೂರ್ಣಗೊಳಿಸಿದೆ. 2018ರಲ್ಲಿ ಪೇಜಾವರ ಮಠದ ಪರ್ಯಾಯದವರೆಗೆ ಎಲ್ಲಾ ಮಠಗಳೂ ಸರದಿಯಂತೆ 31 ಪರ್ಯಾಯಗಳನ್ನು ನಡೆಸಿವೆ.

ಇದೀಗ ಪರ್ಯಾಯದ 32ನೇ ಚಕ್ರ ಚಾಲ್ತಿಯಲ್ಲಿದೆ. ಇದರಲ್ಲಿ ಈಗಾಗಲೇ ಪಲಿಮಾರು, ಅದಮಾರು, ಕೃಷ್ಣಾಪುರ ಹಾಗೂ ಇಂದಿಗೆ ಪುತ್ತಿಗೆ ಮಠಗಳು ತಮ್ಮ ಪರ್ಯಾಯವನ್ನು ಮುಗಿಸಿವೆ. ನಾಳೆ ಮುಂಜಾನೆ ಶೀರೂರು ಶ್ರೀಗಳ ಪರ್ಯಾಯ ಆರಂಭಗೊಳ್ಳಲಿದೆ. ಇದು ಶ್ರೀಕೃಷ್ಣ ಮಠದಲ್ಲಿ ನಡೆಯುತ್ತಿರುವ 253ನೇ ದ್ವೈವಾರ್ಷಿಕ ಪರ್ಯಾಯೋತ್ಸವ.

ಶೀರೂರು ಮಠದ ಯತಿ ಪರಂಪರೆ

ಆಚಾರ್ಯ ಮಧ್ವರ ನೇರ ಶಿಷ್ಯರಲ್ಲೊಬ್ಬರಾದ ಶ್ರೀವಾಮನ ತೀರ್ಥರು ಶೀರೂರು ಮಠದ ಆದ್ಯ ಯತಿಗಳು. ಇದುವರೆಗೆ ಶೀರೂರು ಮಠದ ಪರಂಪರೆಯಲ್ಲಿ ಶ್ರೀಲಕ್ಷ್ಮೀವರ ತೀರ್ಥ ಶ್ರೀಪಾದರವರೆಗೆ 30 ಮಂದಿ ಯತಿಗಳು ಸಂದು ಹೋಗಿದ್ದು, ಇದೀಗ ಸರ್ವಜ್ಞ ಪೀಠಾರೋಹಣ ಮಾಡುವ ಶ್ರೀವೇದವರ್ಧನ ತೀರ್ಥರು ಈ ಮಠದ 31ನೇ ಯತಿಗಳು.




 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News