ಕೃಷ್ಣ ಮಠ ಪರಿಸರದಲ್ಲಿ ಕಸ ಸಂಗ್ರಹಕ್ಕೆ ನಗರಸಭೆಯಿಂದ ವ್ಯವಸ್ಥೆ
ಉಡುಪಿ, ಅ.12: ಉಡುಪಿ ನಗರಸಭಾ ವ್ಯಾಪ್ತಿಯ ಶ್ರೀಕೃಷ್ಣಮಠದ ರಾಜಾಂಗಣದ ಪಾರ್ಕಿಂಗ್ ಪ್ರದೇಶದ ಬಳಿ ಇದ್ದ ಕಸದ ಬ್ಲ್ಯಾಕ್‌ಸ್ಪಾಟ್ ಅನ್ನು ತೆರವುಗೊಳಿಸಲಾಗಿದ್ದು, ಅಲ್ಲೀಗ ಕಸಗಳ ಸಂಗ್ರಹಕ್ಕೆ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗಿದೆ.
ಶ್ರೀಕೃಷ್ಣಮಠಕ್ಕೆ ಬರುವ ಪ್ರವಾಸಿಗರು ಮತ್ತು ಭಕ್ತಾಧಿಗಳು ಘನತ್ಯಾಜ್ಯ ವಸ್ತುಗಳನ್ನು ಮತ್ತು ಅಡಿಗೆ ಮಾಡಿದ ವಸ್ತುಗಳನ್ನು ಅಲ್ಲಲ್ಲಿ ಎಸೆದು ಹೋಗುತ್ತಿದ್ದುದರಿಂದ ಕಸವನ್ನು ಅಲ್ಲೇ ಇರುವ ಕಂಪೌಂಡಿನ ಬಳಿಯಲ್ಲಿ ಕಸವನ್ನು ಮಿಶ್ರಣ ಮಾಡಿ ಸಂಗ್ರಹಿ ಸಲಾಗುತ್ತಿತ್ತು. ಇದನ್ನು ವಾರಕೊಮ್ಮೆ ಅಥವಾ ವಾರಕ್ಕೆ 2 ಬಾರಿ ಸ್ವಚ್ಛ ಮಾಡಲಾಗುತ್ತಿತ್ತು.
ವರ್ಷವಿಡೀ ಭಾರೀ ಸಂಖ್ಯೆಯ ಪ್ರವಾಸಿಗರು ಬರುವಂತಹ ಉಡುಪಿ ನಗರ ಸ್ವಚ್ಛವಾಗಿ ಕಾಣಬೇಕೆಂಬ ದೃಷ್ಟಿಯಿಂದ ಇದೀಗ ನಗರಸಭೆಯ ವತಿಯಿಂದ ಹಸಿಕಸ, ಒಣಕಸ ವಿಂಗಡಣೆ ಮಾಡಿ, ಪ್ರತ್ಯೇಕವಾಗಿ ಸಂಗ್ರಹಿಸಲು ಹಸಿರು ಮತ್ತು ನೀಲಿ ಬಣ್ಣದ ದೊಡ್ಡ ಕಸದ ಡಬ್ಬಿ (ಡಸ್ಟ್‌ಬಿನ್) ಗಳನ್ನು ಇಟ್ಟು ಅದರಲ್ಲಿ ಕಸ ಹಾಕುವಂತೆ ವ್ಯವಸ್ಥೆ ಮಾಡಲಾಗಿದೆ.
ಈ ಬಗ್ಗೆ ನಗರಸಭೆಯ ಸ್ಥಳೀಯ ಸದಸ್ಯ ಗಿರೀಶ್ ಅಂಚನ್, ನಗರಸಭಾ ಪರಿಸರ ಅಭಿಯಂತರೆ ಸ್ನೇಹ ಕೆ.ಎಸ್, ಆರೋಗ್ಯ ನಿರೀಕ್ಷಕಿ ಶಶಿರೇಖಾ, ಮನೋಹರ, ಸ್ಯಾನಿಟರಿ ಸೂಪರ್‌ವೈಸರ್‌ಗಳಾದ ಸುರೇಶ್ ಶೆಟ್ಟಿ, ರಾಜು, ಸುರೇಂದ್ರ, ನಾಗಾರ್ಜುನ ಅವರು ಸ್ವಚ್ಛತಾ ಸಿಬ್ಬಂದಿಗಳಿಗೆ ಹಾಗೂ ಪೌರ ಕಾರ್ಮಿಕರ ಸೂಕ್ತ ಮಾರ್ಗದರ್ಶನಗಳನ್ನು ನೀಡಿದ್ದಾರೆ.
ನೂತನ ಮಾದರಿಯ ಹಸಿಕಸ, ಒಣಕಸ ಡಸ್ಟ್‌ಬಿನ್‌ಗಳನ್ನು ಮಠದ ಪರಿಸರದಲ್ಲಿ ಇರಿಸಿದ್ದು, ಪ್ರವಾಸಿಗರು ಕಸವನ್ನು ಎಲ್ಲೆಂದರಲ್ಲಿ ಎಸೆಯದೇ ಡಸ್ಟ್‌ಬಿನ್‌ಗಳಲ್ಲಿ ಹಾಕಲು ಒಬ್ಬ ಸಿಬ್ಬಂದಿಯನ್ನು ನೇಮಕ ಮಾಡಿ ಪ್ರವಾಸಿಗರಿಗೆ ಘನತ್ಯಾಜ್ಯ ವಸ್ತುಗಳ ಬಗ್ಗೆ ತಿಳುವಳಿಕೆ ನೀಡಲಾಗುತ್ತಿದೆ.
ಇಲ್ಲಿಗೆ ಭೇಟಿ ನೀಡುವ ಪ್ರತಿಯೊಬ್ಬ ಪ್ರವಾಸಿಗರು, ನಾಗರಿಕರು ಘನತ್ಯಾಜ್ಯ ವಸ್ತುಗಳನ್ನು ಮೂಲದಲ್ಲಿ ವಿಂಗಡಿಸಿ ಎಲ್ಲೆಂದರಲ್ಲಿ ಬಿಸಾಡದೆ ಡಸ್ಟ್‌ಬಿನ್‌ಗಳಲ್ಲಿ ಹಾಕಿ ನಗರಸಭೆಯ ವಾಹನಕ್ಕೆ ನೀಡಿ, ಸ್ವಚ್ಛಂದ ಪರಿಸರ ನಿರ್ಮಾಣಕ್ಕೆ ಸಹಕರಿಸುವಂತೆ ನಗರಸಭೆಯ ಪೌರಾಯುಕ್ತರು ಮನವಿ ಮಾಡಿದ್ದಾರೆ.
ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಘನತ್ಯಾಜ್ಯಗಳನ್ನು ವಿಂಗಡಿಸಿ ಡಸ್ಟ್‌ಬಿನ್‌ಗಳಲ್ಲಿ ಹಾಕಲು ಧ್ವನಿವರ್ಧಕ ಮೂಲಕ ಜಾಗೃತಿ ಮೂಡಿಸಲಾ ಗುವುದು ಎಂದು ನಗರಸಭೆಯ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.