×
Ad

"ವಾರಾಹಿ ನೀರು ಬೇರೆಡೆ ಕೊಡುವ ಮೊದಲು ಸಿದ್ದಾಪುರ ಏತ ನೀರಾವರಿ ಯೋಜನೆ ಜಾರಿ"

ಕಂಡ್ಲೂರು: ಜನಾಂದೋಲನ ಸಭೆಯಲ್ಲಿ ಗೋಪಾಲ ಪೂಜಾರಿ ಆಗ್ರಹ

Update: 2026-01-25 19:48 IST

ಕುಂದಾಪುರ: ವಾರಾಹಿ ನೀರು ಜಿಲ್ಲೆ ಹಾಗೂ ಹೊರ ಜಿಲ್ಲೆಯ ಬೇರೆ ಭಾಗಗಳಿಗೆ ಕೊಂಡೊಯ್ಯುವ ಮೊದಲು ಸಿದ್ದಾಪುರ ಏತ ನೀರಾವರಿ ಯೋಜನೆಯನ್ನು ಜಾರಿಗೊಳಿಸಬೇಕು. ನೀರು ಅಗತ್ಯವಿರುವೆಡೆ, ಬಿಟ್ಟು ಹೋಗಿರುವ ಪ್ರದೇಶಗಳನ್ನು ಸೇರಿಸಿ ನೀರು ಕೊಡಬೇಕು ಎಂದು ಬೈಂದೂರು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಆಗ್ರಹಿಸಿದ್ದಾರೆ.

ವಾರಾಹಿ ಅಣೆಕಟ್ಟಿನ ಕೆಳಭಾಗದ ನದಿ ಪಾತ್ರದ ಗ್ರಾಮ ಪಂಚಾಯತ್‌ಗಳ ರೈತರು, ಪಂಚಾಯತ್ ಕುಡಿಯುವ ನೀರಿನ ಫಲಾನುಭವಿಗಳು, ಸೌಕೂರು ಏತ ನೀರಾವರಿ ಫಲಾನುಭವಿಗಳು ಹಾಗೂ ಕುಂದಾಪುರ ಪುರಸಭೆ ವ್ಯಾಪ್ತಿಯ ಕುಡಿಯುವ ನೀರಿನ ಫಲಾನುಭವಿಗಳ ನೇತೃತ್ವದಲ್ಲಿ ಕಂಡ್ಲೂರಿನಲ್ಲಿ ರವಿವಾರ ನಡೆದ ಜನಾಂದೋಲನ ಸಭೆಯಲ್ಲಿ ಅವರು ಮಾತನಾಡುತಿದ್ದರು.

ಕ್ಷೇತ್ರದ ಜನರಿಗೆ ನೀರಿಗೆ ಅನುಕೂಲವಾಗುವ ರೀತಿಯಲ್ಲಿ ಸಿದ್ದಾಪುರ ಏತ ನೀರಾವರಿ ಯೋಜನೆ ಡಿಪಿಆರ್ ಸಿದ್ದಪಡಿಸಿ ಕಾರ್ಯಗತಗೊಳಿಸುವಂತೆ ಮುಖ್ಯಮಂತ್ರಿಗಳಿಗೆ ಎರಡು ಬಾರಿ ಪತ್ರ ಬರೆದಿದ್ದೇನೆ. ಸ್ವಾರ್ಥಕ್ಕಾಗಿ ಯಾರಿಗೂ ಪತ್ರ ಬರೆದಿಲ್ಲ. ಯಾವುದೇ ಕಾರಣಕ್ಕೂ ಪತ್ರ ವಾಪಾಸು ಪಡೆಯುವ ಪ್ರಶ್ನೆಯೇ ಇಲ್ಲ. ಸುರತ್ಕಲ್ ಎನ್‌ಐಟಿಕೆ ಕಾಲೇಜಿನ ತಜ್ಞರನ್ನು ಸಮಿತಿಯ ಸದಸ್ಯರನ್ನಾಗಿಸ ಬೇಕು ಎಂದರು.

ಕುಂದಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ವಿಕಾಸ್ ಹೆಗ್ಡೆ ಮಾತನಾಡಿ, ಸರಕಾರದ ಆದೇಶ ದಂತೆ ಪ್ರಸ್ತುತ ಆರಂಭವಾಗಿರುವ ಕಾಮಗಾರಿಯನ್ನು ನಿಲ್ಲಿಸಬೇಕು. ಸಮಿತಿ ವರದಿ ನೀಡಿ ಸಮಸ್ಯೆ ಬಗೆಹರಿಯುವ ವರೆಗೂ ಕಾಮಗಾರಿಗೆ ಸಂಬಂಧಿಸಿದ ಒಂದೂ ನಯಾ ಪೈಸೆ ಬಿಲ್ಲನ್ನು ಪಾವತಿ ಮಾಡಬಾರದು. ಸಂಸದ ರಾಘವೇಂದ್ರ ಮೇಲೆ ಒತ್ತಡ ತಂದು ಬೆರಳೆಣಿಕೆಯ ಪ್ರಭಾವಿಗಳಿಗೆ ಮಾತ್ರ ಉಪಯೋಗವಾಗುವಂತೆ ಸಿದ್ದಾಪುರ ಏತ ನೀರಾವರಿ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಮಾಜಿ ನಿರ್ದೇಶಕ ಸಂತೋಷ್ ಕುಮಾರ್ ಶೆಟ್ಟಿ ಬಲಾಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಕ್ಷೇತ್ರದ ಜನರ ಅಹವಾಲಿಗೆ ಸ್ಪಂದಿಸಿದ ಗೋಪಾಲ ಪೂಜಾರಿ ಅವರ ಮೇಲೆ ಸುಳ್ಳು ಆಪಾದನೆ ಮಾಡಲಾಗುತ್ತಿದೆ. ವಾರಾಹಿ ಮೂಲ ಯೋಜನೆಯಲ್ಲಿ ಬಿಟ್ಟು ಹೋದ ಪ್ರದೇಶಗಳಿಗೂ ನೀರು ದೊರಕಬೇಕು ಎಂಬುದು ನಮ್ಮ ಆಗ್ರಹ. ಡ್ಯಾಂ ಮೇಲ್ಭಾಗದಲ್ಲಿ ಯಾವುದೇ ಕಾಮಗಾರಿ ನಡೆದರೂ, ಭವಿಷ್ಯದಲ್ಲಿ ಡ್ಯಾಂ ಅಸ್ತಿತ್ವಕ್ಕೆ ಧಕ್ಕೆ ಬರುವ ಅಪಾಯ ಇದೆ ಎಂದರು.

ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಸಂಪಿಗೇಡಿ ಸಂಜೀವ ಶೆಟ್ಟಿ, ಪಶ್ಚಿಮವಾಹಿನಿ ಅಚ್ಚುಕಟ್ಟು ಅಭಿವೃದ್ಧಿ ಸಮಿತಿ ಅಧ್ಯಕ್ಷ ಚಿಟ್ಟೆ ರಾಜಗೋಪಾಲ್ ಹೆಗ್ಡೆ, ಬಸ್ರೂರು ಗ್ರಾಪಂ ಸದಸ್ಯ ಮಹೇಶ್ ಮೆಂಡನ್, ಜಿಪಂ ಮಾಜಿ ಸದಸ್ಯ ಗಣಪತಿ ಟಿ.ಶ್ರೀಯಾನ್ ಮಾತನಾಡಿದರು. ಪ್ರಮುಖರಾದ ಸಂತೋಷ ಶೆಟ್ಟಿ ಹಕ್ಲಾಡಿ, ಬಿಜೂರು ರಘುರಾಮ ಶೆಟ್ಟಿ, ಅಶೋಕ್ ಪೂಜಾರಿ ಬೀಜಾಡಿ, ಅನಂತ ಮೊವಾಡಿ, ಸುದೇಶ್ ಶೆಟ್ಟಿ ಗುಲ್ವಾಡಿ, ಜಯರಾಂ ನಾಯ್ಕ್, ಜಿ.ಮೊಹಮ್ಮದ್ ಉಪಸ್ಥಿತರಿದ್ದರು.

ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ತಗ್ಗರ್ಸೆ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ಅರವಿಂದ್ ಪೂಜಾರಿ ಪಡುಕೋಣೆ, ಜಿ.ಪಂ ಮಾಜಿ ಸದಸ್ಯರಾದ ಸದಾನಂದ ಬಳ್ಕೂರು, ಜ್ಯೋತಿ ನಾಯ್ಕ್, ರತ್ನಾಕರ್ ಶೆಟ್ಟಿ ಮಧುರಬಾಳು, ವಾಸುದೇವ ಯಡಿಯಾಳ, ಕಾಂಗ್ರೆಸ್ ಐಟಿ ಸೆಲ್‌ನ ಚಂದ್ರಶೇಖರ ಶೆಟ್ಟಿ, ನಾಗಪ್ಪ ಕೊಠಾರಿ, ಕಾಳಿಂಗ್ ಶೆಟ್ಟಿ, ಸುರೇಶ್ ಶೆಟ್ಟಿ ಗುಲ್ವಾಡಿ, ಪ್ರಭಾಕರ ಆನಗಳ್ಳಿ, ವಿಜಯ್ ಪುತ್ರನ್ ಮೊದಲಾದವರಿದ್ದರು.

ಬೈಂದೂರು ಬಿಜೆಪಿ ಮಂಡಲ ಕಾರ್ಯದರ್ಶಿ ರಾಘವೇಂದ್ರ ನೇಂಪು ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News