×
Ad

ಕರ್ನಾಟಕ ಕ್ರೀಡಾಕೂಟದ ಅತ್ಲೆಟಿಕ್ ಸ್ಪರ್ಧೆ: ಮಹಿಳೆಯರ 200ಮೀ.ನಲ್ಲಿ ಚಿನ್ನ, ಬೆಳ್ಳಿ ಪದಕ ಗೆದ್ದ ಉಡುಪಿಯ ಅತ್ಲೀಟ್ಸ್

Update: 2025-01-21 20:26 IST

ಉಡುಪಿ, ಜ.21: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ಕರ್ನಾಟಕ ಕ್ರೀಡಾಕೂಟ 2025ರ ಪ್ರಧಾನ ಆಕರ್ಷಣೆ ಯಾದ ಅತ್ಲೆಟಿಕ್ ಸ್ಪರ್ಧೆಗಳು ಇಂದು ಉಡುಪಿಯ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರಾರಂಭಗೊಂಡಿದ್ದು, ಮೊದಲ ದಿನ ಉಡುಪಿಯ ಇಬ್ಬರು ಅಥ್ಲೀಟ್‌ಗಳು ಮಹಿಳೆಯರ 200ಮೀ. ಸ್ಪ್ರಿಂಟ್‌ನಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಮಹಿಳೆಯರ 200ಮೀ.ನಲ್ಲಿ ಉಡುಪಿ ಜಿಲ್ಲೆಯ ಬೈಂದೂರಿನವರಾದ ಸದ್ಯ ಬೆಂಗಳೂರಿನಲ್ಲಿ ಅಭ್ಯಾಸ ನಿರತರಾಗಿರುವ ಜ್ಯೋತಿಕಾ ಅವರು 24.75 ಸೆ.ಗಳಲ್ಲಿ ಮೊದಲಿಗರಾಗಿ ಗುರಿಮುಟ್ಟುವ ಮೂಲಕ ಜಿಲ್ಲೆಗೆ ಚಿನ್ನದ ಪದಕ ಗೆಲ್ಲಿಸಿಕೊಟ್ಟರು. ಉಡುಪಿಯವರೇ ಆದ ಸ್ತುತಿ ಪಿ.ಶೆಟ್ಟಿ ಅವರು 25.02ಸೆ. ಸಾಧನೆಯೊಂದಿಗೆ ಬೆಳ್ಳಿ ಪದಕ ಪಡೆದರೆ ಮೈಸೂರಿನ ಮಮತಾ ಎಂ. 25.50ಸೆ.ಗಳಲ್ಲಿ ಗುರಿಮುಟ್ಟಿ ಕಂಚಿನ ಪದಕ ಗೆದ್ದರು.

200ಮೀ. ಪುರುಷರ ವಿಭಾಗದ ಚಿನ್ನ ಮೈಸೂರಿನ ಗುರುಪ್ರಸಾದ್ ಜಿ.ಸಿ. ಅವರ ಪಾಲಾಯಿತು. ಅವರು 21.43ಸೆ. ಸಾಧನೆಯೊಂದಿಗೆ ಗುರಿ ಮುಟ್ಟಿದರೆ, ಬೆಂಗಳೂರಿನ ಪ್ರಸನ್ನಕುಮಾರ್ ವಿರೂಪಾಕ್ಷ ಮಣ್ಣೂರು 21.60ಸೆ. ಸಾಧನೆ ಯೊಂದಿಗೆ ಬೆಳ್ಳಿ ಪದಕ ಹಾಗೂ ಉಡುಪಿಯ ಧನುಷ್ ಡಿ. 21.90ಸೆ.ನಲ್ಲಿ ಮೂರನೇಯವರಾಗಿ ಗುರಿಮುಟ್ಟಿ ಕಂಚಿನಪದಕ ಗೆದ್ದರು.

ಮಹಿಳೆಯರ ಜಾವೆಲಿನ್ ಎಸೆತದ ಮೂರು ಪದಕಗಳು ಕರಾವಳಿ ಪಾಲಾದವು. ಉಡುಪಿಯ ಶ್ರಾವ್ಯ ಇದರಲ್ಲಿ ಚಿನ್ನದ ಪದಕ ಪಡೆದರೆ ದಕ್ಷಿಣ ಕನ್ನಡದ ಪವಿತ್ರ ಬೆಳ್ಳಿ ಹಾಗೂ ಸಿಂಚನ ಕಂಚಿನ ಪದಕ ಗೆದ್ದುಕೊಂಡರು. ಅದೇ ರೀತಿ ಮಹಿಳೆಯರ ಲಾಂಗ್‌ಜಂಪ್‌ನ ಮೂರು ಪದಕ ಸಹ ಕರಾವಳಿಗೆ ಸಂದಿತು. ಉಡುಪಿಯ ಪವಿತ್ರ ಹಾಗೂ ಶ್ರೀದೇವಿಕಾ ಚಿನ್ನ ಮತ್ತು ಕಂಚು ಗೆದ್ದರೆ, ದ.ಕ.ದ ಐಶ್ವರ್ಯ ಬೆಳ್ಳಿ ಪದಕ ಪಡೆದರು.

ಪುರುಷರ ಲಾಂಗ್‌ಜಂಪ್ ನಲ್ಲಿ ಅನುಷ್ ಟಿ.ಆರ್. ಬೆಳ್ಳಿಪದಕ ಪಡೆದರೆ, ದಕ್ಷಿಣ ಕನ್ನಡದ ದೀಪಶ್ರಿ ಹಾಗೂ ರೇಖಾ ಮಹಿಳೆ ಯರ 800ಮೀ.ನಲ್ಲಿ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದುಕೊಂಡರು. ಉಡುಪಿಯ ಮಾಧುರ‌್ಯಗೆ ಮಹಿಳೆಯರ ಶಾಟ್‌ಪುಟ್‌ನಲ್ಲಿ ಕಂಚು ದೊರಕಿತು. ದನುಷ್ ಅವರು ಪುರುಷರ 200ಮೀ.ನಲ್ಲಿ ಹಾಗೂ ದ.ಕ.ದ ದೀಕ್ಷಿತಾ ಹಾಗೂ ಉಡುಪಿಯ ರಕ್ಷಿತಾ 100ಮೀ. ಹರ್ಡಲ್ಸ್‌ನಲ್ಲಿ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದುಕೊಂಡರು.

ಪುರುಷರ 110ಮೀ. ಹರ್ಡಲ್ಸ್‌ನಲ್ಲಿ ಯಾದಗಿರಿಯ ಲೋಕೇಶ್ ದಾಮು ರಾಠೋಡ್ ಅವರು 15.03ಸೆಗಳ ಸಾಧನೆ ಯೊಂದಿಗೆ ಚಿನ್ನದ ಪದಕ ಗೆದ್ದುಕೊಂಡರು. ಮೂಲತ: 10 ಸ್ಪರ್ಧೆಗಳ ಡೆಕತ್ಲಾನ್ ಕ್ರೀಡಾಪಟು ವಾಗಿರುವ ಲೋಕೇಶ್ ಇಲ್ಲಿ ಅದಕ್ಕೆ ಅವಕಾಶವಿಲ್ಲದ ಕಾರಣ ಹರ್ಡಲ್ಸ್‌ನಲ್ಲಿ ಸ್ಪರ್ಧಿಸಿ ಚಿನ್ನದ ಪದಕ ಪಡೆದರು. ಅದೇ ರೀತಿ ಪೋಲ್‌ವಾಲ್ಡ್‌ನಲ್ಲೂ ಸ್ಪರ್ಧಿಸಿದ ಅವರು ಅಲ್ಲೂ ಕಂಚಿನ ಪದಕ ಗೆದ್ದುಕೊಂಡರು.

ಮೊದಲ ದಿನ ಅತ್ಲೆಟಿಕ್ಸ್‌ನಲ್ಲಿ ನಡೆದ 13 ಸ್ಪರ್ಧೆಗಳು ಸಂಪೂರ್ಣ ಫಲಿತಾಂಶ ಹೀಗಿದೆ. (ಚಿನ್ನ, ಬೆಳ್ಳಿ, ಕಂಚಿನ ಪದಕ ವಿಜೇತರು)

ಪುರುಷರ ವಿಭಾಗ:

200ಮೀ.: 1.ಗುರುಪ್ರಸಾದ್ ಡಿ.ಸಿ. ಮೈಸೂರು (21.43ಸೆ.), 2.ಪ್ರಸನ್ನ ಕುಮಾರ್ ವಿರೂಪಾಕ್ಷ ಮಣ್ಣೂರು ಬೆಂಗಳೂರು, 3.ಧನುಷ್ ಡಿ.ಕೆ. ಉಡುಪಿ.

800ಮೀ.: 1.ಕಮಲಕಣ್ಣನ್ ಎಸ್., ಬೆಂಗಳೂರು ನಗರ (1ನಿ 52.92ಸೆ.) 2.ಲೋಕೇಶ್ ಕೆ., ರಾಮನಗರ, 3.ವಿನಾಯಕ ಅಂಗಡಿ, ಬೆಳಗಾವಿ.

110ಮೀ. ಹರ್ಡಲ್ಸ್: 1.ಲೋಕೇಶ್ ದಾಮು ರಾಠೋಡ್ ಯಾದಗಿರಿ (15.03ಸೆ.), 2.ತೇಜಲ್ ಕೆ.ಆರ್. ದಕ್ಷಿಣ ಕನ್ನಡ, 3.ಸಂತೋಷ್ ಕುಮಾರ್ ಆರ್. ಬೆಂಗಳೂರು.

10,000ಮೀ.: 1.ವಿಜಯ ಸಂಜಯ್ ಸಾವರ್ಕರ್ ಬೆಳಗಾವಿ (32ನಿ. 23.47ಸೆ.), 2.ಗುರುಪ್ರಸಾದ್ ತುಮಕೂರು, 3.ಸಂದೀಪ್ ಟಿ.ಎಸ್. ತುಮಕೂರು.

ಲಾಂಗ್‌ಜಂಪ್: 1.ಜಾಫರ್ ಖಾನ್ ಸರ್ವರ್ ಬೆಳಗಾವಿ (7.44ಮೀ.), 2.ಅನುಷ್ ಟಿ.ಆರ್. ಚಿಕ್ಕಮಗಳೂರು, 3.ಸುಶಾನ್ ಜಿ.ಸುವರ್ಣ ಉಡುಪಿ

ಡಿಸ್ಕಸ್ ತ್ರೋ: 1.ಮುಹಮ್ಮದ್ ಸಕ್ಲೈನ್ ಅಹ್ಮದ್ ಮೈಸೂರು (52.36ಮೀ.), 2.ನಾಗೇಂದ್ರ ಅಣ್ಣಪ್ಪ ನಾಯ್ಕ್ ಉತ್ತರ ಕನ್ನಡ, 3.ಮೋಹಿತ್ ಎನ್.ರಾಜ್ ಮೈಸೂರು.

ಪೋಲ್‌ವಾಲ್ಟ್: 1.ರಾಹುಲ್ ಅಶೋಕ್ ನಾಯ್ಕ್ ಉತ್ತರ ಕನ್ನಡ (4.20ಮೀ.), 2.ಆದಿತ್ಯ ವಿ.ಎಂ. ಬೆಂಗಳೂರು, 3.ಲೋಕೇಶ್ ದಾಮು ರಾಠೋಡ್ ಯಾದಗಿರಿ.

ಮಹಿಳೆಯರ ವಿಭಾಗ:

200ಮೀ.: 1.ಜ್ಯೋತಿಕಾ ಉಡುಪಿ (24.72ಸೆ.), 2.ಸ್ತುತಿ ಪಿ. ಶೆಟ್ಟಿ ಉಡುಪಿ, 3.ಮಮತಾ ಎಂ., ಮೈಸೂರು.

800ಮೀ.:1.ವಿಜಯಕುಮಾರ್ ಜಿ.ಕೆ. ಬೆಂಗಳೂರು(2:14.02ಸೆ.), 2.ದೀಪಶ್ರೀ ಉಡುಪಿ, 3.ರೇಖಾ ಬಸಪ್ಪ ಪಿರೋಜಿ ಬೆಳಗಾವಿ.

100ಮೀ. ಹರ್ಡಲ್ಸ್: 1.ಇಶಾ ಎಲಿಜಬೆತ್ ರಿಂಜಿತಾ ಬೆಂಗಳೂರು (14.58ಸೆ.), 2.ದೀಕ್ಷಿತಾ ರಾಮಕೃಷ್ಣ ಗೌಡ ಉತ್ತರ ಕನ್ನಡ, 3.ರಕ್ಷಿತಾ ಉಡುಪಿ.

ಲಾಂಗ್‌ಜಂಪ್: 1.ಪವಿತ್ರ ಜಿ. ಉಡುಪಿ(5.56ಮೀ.), 2.ಐಶ್ವರ್ಯ ಆರ್.ಪಿ. ಬೆಳಗಾವಿ, 3.ಶ್ರೀದೇವಿಕಾ ವಿ.ಎಸ್. ಉಡುಪಿ.

ಶಾಟ್‌ಪುಟ್: 1.ಅಂಬಿಕಾ ವಿ., ಮೈಸೂರು (14.53ಮೀ), 2.ಬೃಂದಾ ಎಸ್.ಗೌಡ ಮೈಸೂರು, 3.ಮಾಧುರ್ಯ ಉಡುಪಿ.

ಜಾವೆಲಿನ್ ತ್ರೋ: 1.ಶ್ರಾವ್ಯ ಉಡುಪಿ ((40.62ಮೀ.), 2.ಜೀವಿತಾ ಡಿ. ದಕ್ಷಿಣ ಕನ್ನಡ, 3.ಸಿಂಚನ ಎಸ್.ಎಂ., ದಕ್ಷಿಣ ಕನ್ನಡ.

ಅಕಸ್ಮಿಕವಾಗಿ ಕ್ರೀಡೆಗೆ ಬಂದು ಚಿನ್ನ ಗೆದ್ದ ಜ್ಯೋತಿಕಾ


ಆರನೇ ತರಗತಿಯವರೆಗೆ ಕ್ರೀಡೆ ಬಗ್ಗೆ ಏನೂ ಗೊತ್ತಿಲ್ಲದ ಬೈಂದೂರಿನ ಜ್ಯೋತಿಕಾ, ಬವಳಾಡಿಯಲ್ಲಿ ಓದುತಿದ್ದಾಗ ಬೈಂದೂರಿನಲ್ಲಿ ನಡೆದ ಕ್ರೀಡಾ ವಸತಿ ಶಾಲೆಯ ಆಯ್ಕೆ ಟ್ರಯಲ್ಸ್‌ನಲ್ಲಿ ಅಕಸ್ಮಿಕವಾಗಿ ಭಾಗವಹಿಸಿ ಆಯ್ಕೆಯಾಗುವ ಮೂಲಕ ಕ್ರೀಡಾ ಲೋಕಕ್ಕೆ ಪಾದಾರ್ಪಣೆ ಮಾಡಿದವಳು ಇಂದು ಉಡುಪಿಯಲ್ಲಿ ನಡೆದಿರುವ ಕರ್ನಾಟಕ ಕ್ರೀಡಾಕೂಟದ ಮಹಿಳೆಯರ 200ಮೀ.ನಲ್ಲಿ ಚಿನ್ನದ ಪದಕ ಗೆದ್ದು ಕೊಂಡಿದ್ದಾರೆ.

ಅಜ್ಜರಕಾಡಿನ ಸ್ಟೇಡಿಯಂ ಬಳಿ ಇರುವ ಕ್ರೀಡಾ ವಸತಿ ಶಾಲೆಯಲ್ಲಿದ್ದು, ಪಕ್ಕದ ವಿವೇಕಾನಂದ ಪ್ರೌಡಶಾಲೆಯಲ್ಲಿ ಎಸೆಸೆಲ್ಸಿ ಮುಗಿಸಿದ ಜ್ಯೋತಿಕಾ ಜೂನಿಯರ್ ನ್ಯಾಷನಲ್ಸ್‌ನಲ್ಲಿ 400ಮೀ. ಹಾಗೂ 400ಮೀ. ಹರ್ಡಲ್ಸ್‌ನಲ್ಲಿ ಬೆಳ್ಳಿ ಪದಕ ಪಡೆದಿದ್ದರು. ಕೊಡಗಿನ ಗೋಣಿಕೊಪ್ಪಲಿನಲ್ಲಿರುವ ಅಶ್ವಿನಿ ನಾಚಪ್ಪ ಅವರ ಅಶ್ವಿನಿ ಸ್ಪೋರ್ಟ್ಸ್ ಫೌಂಡೇಷನ್‌ನಲ್ಲಿ ಕ್ರೀಡೆಯಲ್ಲಿ ತರಬೇತಿ ಪಡೆಯುತ್ತಾ ಡಿಗ್ರಿಯನ್ನು ಮುಗಿಸಿದರು.

ಅನಂತರ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಕ್ರೀಡಾ ತರಬೇತಿ ಪಡೆಯುತ್ತಿರುವ ಜ್ಯೋತಿಕಾ ಸದ್ಯ ಬೆಂಗಳೂರಿನ ಜೈನ್ ಕಾಲೇಜಿನಲ್ಲಿ ಎರಡನೇ ವರ್ಷದ ಎಂ.ಕಾಂ ಓದುತಿದ್ದಾರೆ. ಹೆಚ್ಚಾಗಿ 400ಮೀ.ನಲ್ಲಿ ಓಡುವ ಜ್ಯೋತಿಕಾ ಕರ್ನಾಟಕ ಕ್ರೀಡಾಕೂಟದಲ್ಲಿ 200ಮೀ.ನಲ್ಲಿ ಓಡಲು ಆಯ್ಕೆ ಯಾಗಿದ್ದಾರೆ.

ಇದೇ ತಿಂಗಳು ಉತ್ತರ ಖಂಡದಲ್ಲಿ ನಡೆಯುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಅವರು ಮಹಿಳೆಯರ 400ಮೀ. ಹಾಗೂ 100ಮೀ. ರಿಲೇ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.

ರೈತನ ಮಗನಿಗೆ ಒಲಿದ ಹರ್ಡಲ್ಸ್ ಚಿನ್ನ


ಇಂದು ಇಲ್ಲಿ ಪುರುಷರ 110ಮೀ. ಹರ್ಡಲ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿರುವ ಲೋಕೇಶ್ ದಾಮು ರಾಠೋಡ್‌ರ ನೆಚ್ಚಿನ ಸ್ಪರ್ಧೆ ಡೆಕಾತ್ಲಾನ್. ರಾಜ್ಯಮಟ್ಟದಲ್ಲಿ ಡೆಕಾತ್ಲಾನ್‌ನ ಜೂನಿಯರ್ ಹಾಗೂ ಸೀನಿಯರ್ ವಿಭಾಗಗಳಲ್ಲಿ ದಾಖಲೆಗಳನ್ನು ಹೊಂದಿ ರುವ ಅವರು ಇಲ್ಲಿ ಹರ್ಡಲ್ಸ್ ಹಾಗೂ ಪೋಲ್‌ವಾಲ್ಡ್‌ನಲ್ಲಿ ಸ್ಪರ್ಧಿಸಿದ್ದಾರೆ. ಮೊದಲನೇಯ ದರಲ್ಲಿ ಪೋಲ್‌ವಾಲ್ಟ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.

ಯಾದಗಿರಿ ಜಿಲ್ಲೆ ಶಹಪುರ ತಾಲೂಕಿನ ಬಿ.ಎನ್.ತಾಂಡದವರಾದ ಲೋಕೇಶ್ ಅವರ ತಂದೆ ದಾಮು ರಾಠೋಡ್ ಎರಡೆಕರೆ ಜಮೀನು ಹೊಂದಿದ್ದಾರೆ. ಮಳೆಯನ್ನು ನೆಚ್ಚಿಕೊಂಡು ಹೊಲವನ್ನು ಉತ್ತು ಬಿತ್ತುವ ದಾಮು, ಉಳಿದ ಅವಧಿಯಲ್ಲಿ ಕೂಲಿ ಕೆಲಸ ಮಾಡುತ್ತಾರೆ. ಹೈಸ್ಕೂಲ್ ಶಿಕ್ಷಣವನ್ನು ಪುಣೆಯಲ್ಲಿ ಪೂರೈಸಿದ ಲೋಕೇಶ್, ಪಿಯುಸಿ ಶಿಕ್ಷಣವನ್ನು ಬೆಂಗಳೂರಿ ನಲ್ಲಿ ಮಾಡಿ ಇದೀಗ ಬಳ್ಳಾರಿಯ ಜಿಬಿಆರ್ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಎ. ಓದುತಿದ್ದಾರೆ.

ಪ್ರಾರಂಭದಿಂದಲೂ ಹತ್ತು ಕ್ರೀಡೆಗಳನ್ನು ಹೊಂದಿರುವ ಡೆಕಾತ್ಲಾನ್‌ನಲ್ಲಿ ಸ್ಪರ್ಧಿಸುತ್ತಿರುವ ಲೋಕೇಶ್ 2019ರಿಂದ 23ರವರೆಗೆ ಜೂನಿಯರ್ ವಿಭಾಗದಲ್ಲಿ ಎರಡು ರಾಜ್ಯ ದಾಖಲೆ ಬರೆದಿದ್ದು 5556 ಅಂಕಗಳ ದಾಖಲೆಯನ್ನು ಈಗಲೂ ತನ್ನ ಹೆಸರಿನಲ್ಲಿ ಹೊಂದಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಂಡರು.

ಎಪ್ರಿಲ್ ತಿಂಗಳಲ್ಲಿ ನಡೆಯುವ ವಿವಿ ಮಟ್ಟದ ಅತ್ಲೆಟಿಕ್ ಟೂರ್ನಿಯಲ್ಲಿ ತಾನು ವಿಜಯನಗರ ವಿವಿಯನ್ನು ಡೆಕತ್ಲಾನ್ ಸ್ಪರ್ಧೆಯಲ್ಲಿ ಪ್ರತಿನಿಧಿಸಲಿದ್ದು, ಇದಕ್ಕಾಗಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುತಿದ್ದೇನೆ ಎಂದರು.











Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News