ಆ.9: ಕೃಷ್ಣಮಠದ ನೂತನ ‘ಯಾಳಿ’ ಲೋಕಾರ್ಪಣೆ
ನಿರ್ಮಲಾ ಸೀತಾರಾಮ್‌ರಿಂದ ಉದ್ಘಾಟನೆ
ಉಡುಪಿ, ಆ.5: ಸುಮಾರು ಎಂಟು ಶತಮಾನಗಳ ಹಿಂದೆ ಆಚಾರ್ಯ ಮಧ್ವರು ಶ್ರೀಕೃಷ್ಣನಿಗಾಗಿ ಉಡುಪಿಯಲ್ಲಿ ನಿರ್ಮಿಸಿದರೆನ್ನಲಾದ ಕೃಷ್ಣಮಠದ ಪ್ರಾಚೀನ ಸೌಂದರ್ಯವನ್ನು ಆಧುನಿಕ ಬೆಳಕಿಂಡಿಯಲ್ಲಿ ಪ್ರದರ್ಶಿಸಲು ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮುಂದಾಗಿದ್ದಾರೆ. ಕರಾವಳಿಯ ಮೂಲ ವಾಸ್ತುಶೈಲಿ ಮಾದರಿಯ ಕಾಷ್ಠ ಯಾಳಿ (ಸುತ್ತು ಪೌಳಿ)ಯನ್ನು ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ಪುನರ್ ನಿರ್ಮಿಸಲಾಗಿದೆ.
ಕನಕ ಗೋಪುರಕ್ಕೆ ಹೊಂದಿಕೊಂಡಿರುವ ಚಂದ್ರಶಾಲೆ ಸಹಿತ ಮಧ್ವ ಸರೋವರದವರೆಗೆ ಶ್ರೀಕೃಷ್ಣ ಆಲಯದ ಮೇಲ್ಛಾವಣಿಗೆ ಪ್ರಾಚೀನ ವಾಸ್ತುಶೈಲಿಯ ರೂಪ ನೀಡಲಾಗಿದೆ. ಆ ಮೂಲಕ ಕೃಷ್ಣಮಠದ ದಿವ್ಯ ಸೌಂದರ್ಯವನ್ನು ಭವ್ಯಗೊಳಿಸಲಾಗಿದೆ.
ನೂತನ ಯಾಳಿಯನ್ನು ಹುಣ್ಣಿಮೆಯ ಪರ್ವದಿನದಂದು ಆ.9ರಂದು ಬೆಳಿಗ್ಗೆ ಮಹಾಪೂಜೆಯ ಬಳಿಕ 10 ಗಂಟೆಗೆ ರಾಜ್ಯಸಭಾ ಸದಸ್ಯೆ, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಉದ್ಘಾಟಿಸುವರು. ಇನ್ಫೋಸಿಸ್ ಫೌಂಡೇಶನ್ ಪ್ರವರ್ತಕರಾದ ಸುಧಾ ಮೂರ್ತಿ ಮತ್ತು ನಿವೃತ್ತ ಮುಖ್ಯ ನ್ಯಾಯಾಧೀಶ ದಿನೇಶ್‌ಕುಮಾರ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಭಾ ಕಾರ್ಯಕ್ರಮ ರಾಜಾಂಗಣದಲ್ಲಿ ನಡೆಯಲಿದ್ದು, ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು, ಅದಮಾರು ಮಠಾಧೀಶ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು ಮತ್ತು ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರತೀರ್ಥರು ಆರ್ಶೀವಚನ ನೀಡಲಿದ್ದಾರೆ. ಶ್ರೀಮಠದ ದಿವಾನರಾದ ನಾಗರಾಜ ಆಚಾರ್ಯ ಹಾಗೂ ಕಾರ್ಯದರ್ಶಿ ಪ್ರಸನ್ನಾಚಾರ್ಯ ತಿಳಿಸಿದ್ದಾರೆ.
ಮಹಿಳಾ ವಿದ್ಯಾಪೀಠ ಪ್ರಾರಂಭ: ಮಹಿಳೆಯರಲ್ಲೂ ಧಾರ್ಮಿಕ, ಸಾಂಸ್ಕೃತಿಕ ಪ್ರಜ್ಞೆ ಉದ್ದೀಪನಗೊಳಿಸಿ ಅವರನ್ನೂ ತೊಡಗಿಸಿಕೊಳ್ಳುವ ಆಶಯದಿಂದ ಪುತ್ತಿಗೆ ಮಠದಿಂದ ಆರಂಭಿಸಲಾಗುವ ಮಹಿಳಾ ವಿದ್ಯಾಪೀಠಕ್ಕೆ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಸುಧಾ ಮೂರ್ತಿ ಇದೇ ಸಂದರ್ಭದಲ್ಲಿ ಗೀತಾ ಮಂದಿರದಲ್ಲಿ ಚಾಲನೆ ನೀಡುವರು.
ಬಿಡುವಿನ ವೇಳೆಯಲ್ಲಿ ಮಹಿಳೆಯರಿಗೆ ಲಕ್ಷ್ಮೀಶೋಭಾನೆ, ಭಗವದ್ಗೀತೆ, ವಿವಿಧ ಶ್ಲೋಕಗಳನ್ನು ಮಾತ್ರವಲ್ಲದೇ ರಂಗೋಲಿ, ಹೂಕಟ್ಟುವುದು, ಬತ್ತಿ ಹೊಸೆಯುವುದು ಇತ್ಯಾದಿ ಧಾರ್ಮಿಕ ಚಟುವಟಿಕೆಗಳನ್ನು ಮಹಿಳಾ ವಿದ್ಯಾಪೀಠದಲ್ಲಿ ಅನುಭವಿ ಮಹಿಳೆಯರು ತಿಳಿಸಿಕೊಡುವರು ಎಂದು ಪರ್ಯಾಯ ಪುತ್ತಿಗೆ ಮಠದ ಪ್ರಕಟನೆ ತಿಳಿಸಿದೆ.