ಬಡಾ ಗ್ರಾಮ: ಅಭಿವೃದ್ಧಿ ಕಾಮಗಾರಿಗಳ ಗುದ್ದಲಿ ಪೂಜೆ, ಉದ್ಘಾಟನೆ
ಕಾಪು, ಡಿ.13: ಎಲ್ಲೂರು ಗ್ರಾಮದಲ್ಲಿ ಅದಾನಿ ಪವರ್ ಲಿಮಿಟೆಡ್, ಅದಾನಿ ಸಮೂಹದ ಸಿಎಸ್ಆರ್ ಅಂಗವಾದ ಅದಾನಿ ಫೌಂಡೇಶನ್ ನ ಸಹಯೋಗದಲ್ಲಿ, ಬಡಾ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 17 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ನೂತನ ಮಾರುಕಟ್ಟೆ ಸಂಕೀರ್ಣದ ಉದ್ಘಾಟನೆ, 20 ಲಕ್ಷ ರೂ. ಯೋಜನಾ ವೆಚ್ಚದ ಮಾರುಕಟ್ಟೆ ವಿಸ್ತರಣೆ ಹಾಗೂ ಸಾರ್ವಜನಿಕ ಶೌಚಾಲಯ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು.
ಉದ್ಘಾಟನೆ ಹಾಗೂ ಭೂಮಿಪೂಜೆಯನ್ನು ನೆರವೇರಿಸಿದ ಅದಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಅಧ್ಯಕ್ಷ ಕಿಶೋರ್ ಆಳ್ವ ಮಾತನಾಡಿ, ಕಳೆದ ಒಂದು ದಶಕದಿಂದ ವಿವಿಧ ಸಿಎಸ್ಆರ್ ಉಪಕ್ರಮಗಳನ್ನು ಅದಾನಿ ಪವರ್ ಲಿಮಿಟೆಡ್ ಸಕ್ರಿಯವಾಗಿ ಕೈಗೆತ್ತಿಕೊಂಡಿದೆ. ಒಟ್ಟು 23 ಕೋಟಿ ರೂ. ಮೌಲ್ಯದ ಮೂಲಸೌಕರ್ಯ ಕಾಮಗಾರಿಗಳನ್ನು ಸುತ್ತಮುತ್ತಲಿನ 7 ಗ್ರಾಪಂಗಳಲ್ಲಿ ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಬಡಾ ಗ್ರಾಪಂ ವ್ಯಾಪ್ತಿಯಲ್ಲಿ ಈವರೆಗೆ 1.51 ಕೋಟಿ ರೂ. ಮೌಲ್ಯದ ಮೂಲಭೂತ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಕಳೆದ 1 ದಶಕದಲ್ಲಿ ಸಂಸ್ಥೆ ಸಿಎಸ್ಆರ್ ಅನುದಾನದಲ್ಲಿ ಒಟ್ಟು 46 ಕೋಟಿ ರೂ. ವೆಚ್ಚ ಮಾಡಿದ್ದು, ಇದರಲ್ಲಿ ಸುಮಾರು 19 ಕೋಟಿ ಸಮುದಾಯ ಮೂಲಸೌಕರ್ಯ ಅಭಿವೃದ್ಧಿಗೆ ಮೀಸರಿಸಲಾಗಿದೆ ಎಂದರು.
ಬಡಾ ಗ್ರಾಪಂ ಅಧ್ಯಕ್ಷ ಶಿವಕುಮಾರ್ ಮೆಂಡನ್, ಸದಸ್ಯರಾದ ಇಂದಿರಾ ಶೆಟ್ಟಿ, ಅಬ್ದುಲ್ ಮಜೀದ್, ಶಕುಂತಲಾ, ನಿರ್ಮಲಾ, ರಜಾಕ್, ಮೋನಿ ಸುವರ್ಣ, ಕಲಾವತಿ, ತಾಪಂ ಮಾಜಿ ಸದ್ಯಸ್ಯ ಯು.ಟಿ.ಶೇಕಬ್ಬ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸತೀಶ, ಪಂಚಾಯತ್ ಸಿಬ್ಬಂದಿ ಶಶಿಕಾಂತ್ ಕುಮಾರ್, ಅದಾನಿ ಪವರ್ ಲಿಮಿಟೆಡ್ ನ ಎದಿಎಂ ರವಿ ಆರ್. ಜೇರೆ ಮತ್ತು ಅದಾನಿ ಫೌಂಡೇಶನ್ ನ ಅನುದೀಪ್ ಉಪಸ್ಥಿತರಿದ್ದರು.