×
Ad

ಬೈಂದೂರು | ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ನೂತನ ಕಚೇರಿ ಕಟ್ಟಡ ಉದ್ಘಾಟನೆ

Update: 2025-11-29 19:04 IST

ಬೈಂದೂರು, ನ.29: ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ನ ನೂತನ ಕಚೇರಿ ಕಟ್ಟಡ, ಸಭಾಭವನ, ಸಂಜೀವಿನಿ ಕಚೇರಿ, ಗ್ರಾಮ ಆಡಳಿತ ಅಧಿಕಾರಿಯವರ ಕಚೇರಿ ಹಾಗೂ ಅರಿವು ಕೇಂದ್ರದ ಉದ್ಘಾಟನಾ ಸಮಾರಂಭ ಶನಿವಾರ ನಡೆಯಿತು.

ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ನೂತನ ಗ್ರಾಮ ಪಂಚಾಯತ್ ಕಚೇರಿ ಉದ್ಘಾಟಿಸಿ ಮಾತನಾಡಿ, ಗ್ರಾಮ ಪಂಚಾಯತ್ ಗಳು ಸಹಕಾರದ ಮನೋಭಾವದ ಮೂಲಕ ಸಂವಿಧಾನದ ಆಶಯಗಳಿಗೆ ಚ್ಯುತಿ ಬಾರದಂತೆ ಕಾರ್ಯನಿರ್ವಹಿಸಬೇಕು. ಸರಕಾರಿ ಕಚೇರಿಗಳು ಗ್ರಾಮಸ್ಥರ ಸಮಸ್ಯೆಗಳಿಗೆ ಪರಿಹಾರ ನೀಡುವ ಕಟ್ಟಡಗಳಾಗಬೇಕು ಎಂದರು.

ಊರಿನ ವ್ಯವಸ್ಥೆಗಳು ಮಾದರಿಯಾದಾಗ ಊರು ಮಾದರಿಯಾಗುತ್ತದೆ. ಜನಸೇವೆಯಲ್ಲಿ ಹೆಚ್ಚಿನ ಕಾಳಜಿ ತೋರಬೇಕು. ಗ್ರಾಮ ಪಂಚಾಯತ್ ನೊಂದಿಗೆ ದಾನಿಗಳ ಸಹಕಾರವಿದ್ದಾಗ ಗ್ರಾಮ ಉತ್ತಮ ಬೆಳವಣಿಗೆ ಕಾಣಲು ಸಾಧ್ಯ. ಎಲ್ಲರ ಸಹಕಾರದಲ್ಲಿ ಗ್ರಾಮ ಪಂಚಾಯತ್ ನ ನೂತನ ಕಚೇರಿ ನಿರ್ಮಾಣಗೊಂಡಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಮಾತನಾಡಿ, ಗ್ರಾಮ ಪಂಚಾಯತಿಗಳು ರಾಜ್ಯ ಸರಕಾರದ ಹಲವು ಯೋಜನೆಗಳನ್ನು ಜನರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡುತ್ತಿದೆ. ಸ್ವಚ್ಛ ಭಾರತ ಕಾರ್ಯರೂಪಕ್ಕೆ ತರುವ ಕೆಲಸದಲ್ಲಿ ಗ್ರಾ.ಪಂ.ಗಳ ಪಾತ್ರ ಹಿರಿದಾಗಿದ್ದು, ಇದು ಶೇ.100ರಷ್ಟು ಯಶಸ್ವಿಯಾಗಬೇಕಾದರೆ ಗ್ರಾಮಸ್ಥರ ಸಹಕಾರ ಅತ್ಯಗತ್ಯ ಎಂದರು.

ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಶೇಖರ ಖಾರ್ವಿ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಬೈಂದೂರು ಮಾಜಿ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ಕೊಲ್ಲೂರು ಮೂಕಾಂಬಿಕಾ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಬೈಂದೂರಿನ ಮಾಜಿ ತಾಪಂ ಸದಸ್ಯ ಮಹೇಂದ್ರ ಪೂಜಾರಿ, ಖಂಬದ ಕೋಣೆ ರೆ.ಸೇ.ಸ.ಸ.ನಿ ಉಪ್ಪುಂದ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ, ಜಿ.ಪಂ ಮಾಜಿ ಅಧ್ಯಕ್ಷ ಎಸ್.ರಾಜು ಪೂಜಾರಿ, ನೂರ್ ಜುಮ್ಮಾ ಮಸ್ಜಿದ್ ನಾಗೂರು ಅಧ್ಯಕ್ಷ ಎಮ್.ಎಸ್.ಫಾರೂಕ್ ಸಾಹೇಬ್, ಕಿರಿಮಂಜೇಶ್ವರ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ಅನ್ನಪೂರ್ಣ ಉಡುಪಿ, ಉದ್ಯಮಿ ಸುರೇಶ್ ಶೆಟ್ಟಿ, ಶೇಖರ್ ಪೂಜಾರಿ ನಾಗೂರು, ಬೈಂದೂರು ಪೊಲೀಸ್ ಠಾಣೆಯ ಉಪನಿರೀಕ್ಷಕ ತಿಮ್ಮೆಶ್ ಬಿ.ಎನ್., ಕಿರಿಮಂಜೇಶ್ವರ ಅಗಸ್ತ್ಯೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಎನ್.ವಿ.ಪ್ರಕಾಶ್ ಐತಾಳ್, ಕಿರಿಮಂಜೇಶ್ವರ ಗ್ರಾಪಂ ಉಪಾಧ್ಯಕ್ಷೆ ಸುಶೀಲಾ, ಕಾರ್ಯದರ್ಶಿ ಮುಕ್ತ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಗ್ರಾಪಂನ ಮಾಜಿ ಅಧ್ಯಕ್ಷರನ್ನು, ಗುತ್ತಿಗೆದಾರರನ್ನು, ಹಾಲಿ ಅಧ್ಯಕ್ಷರು ಹಾಗೂ ಪಿಡಿಓ ಅವರನ್ನು ಸಮ್ಮಾನಿಸಲಾಯಿತು. ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜೇಶ್ ಸ್ವಾಗತಿಸಿದರು. ಶಿಕ್ಷಕ ಉದಯ ನಾಯ್ಕ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News