ಬನ್ನಂಜೆಯ ನಾರಾಯಣಗುರು ವೃತ್ತ ತೆರವು: ವ್ಯಾಪಕ ಆಕ್ರೋಶಕ್ಕೆ ಮಣಿದು ಅಲ್ಲೇ ಮರುಸ್ಥಾಪನೆ
ಉಡುಪಿ, ಆ.31: ಉಡುಪಿ ನಗರಸಭೆಯಿಂದ ಅಧಿಕೃತವಾಗಿ ಸ್ಥಾಪನೆ ಗೊಂಡ ಬನ್ನಂಜೆ ನಾರಾಯಣ ಗುರು ವೃತ್ತವನ್ನು ಯಾವುದೇ ಮುನ್ಸೂಚನೆ ನೀಡದೆ ತೆರವುಗೊಳಿಸಿ ಪಾಲುಬಿದ್ದ ಜಾಗದಲ್ಲಿ ಎಸೆದಿರುವ ಬಗ್ಗೆ ವ್ಯಾಪಾಕ ಆಕ್ರೋಶ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ರವಿವಾರ ಸಂಜೆ ವೇಳೆ ಅದನ್ನು ಮತ್ತೆ ಅದೇ ಸ್ಥಳದಲ್ಲಿ ಸ್ಥಾಪನೆ ಮಾಡಲಾಯಿತು.
ಉಡುಪಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ನಿರ್ಣಯಿಸಿ ದಂತೆ 2022ರ ನ.16ರಂದು ಕರ್ನಾಟಕ ಪುರಸಭೆಗಳ ಅಧಿನಿಯಮ 1964 211ರ ಅನ್ವಯದಂತೆ ಉಡುಪಿ ನಗರಸಭಾ ವ್ಯಾಪ್ತಿಯ ಬನ್ನಂಜೆ ಸರ್ಕಲ್‌ಗೆ ನಾರಾಯಣಗುರು ವೃತ್ತ ಎಂದು ನಾಮಕರಣ ಮಾಡಲು ರಾಜ್ಯ ಸರಕಾರ ಆದೇಶಿಸಿತ್ತು. ಆ ಹಿನ್ನೆಲೆಯಲ್ಲಿ ಅಲ್ಲಿ ವೃತ್ತ ಕೂಡ ಸ್ಥಾಪಿಸಲಾಗಿತ್ತು.
ಇಲ್ಲಿನ ಇಕ್ಕಟ್ಟಿನ ರಸ್ತೆಯಿಂದ ಈ ವೃತ್ತದಲ್ಲಿ ಬಸ್ ಸಂಚಾರಕ್ಕೆ ಸಮಸ್ಯೆ ಯಾಗುತ್ತಿರುವುದನ್ನು ಮನಗಂಡ ಉಡುಪಿ ಸಂಚಾರ ಪೊಲೀಸರು, ಏಕಾಏಕಿಯಾಗಿ ಶ್ರೀನಾರಾಯಣಗುರು ವೃತ್ತವನ್ನು ಅಲ್ಲಿಂದ ತೆರವು ಗೊಳಿಸಿದರೆನ್ನಲಾಗಿದೆ. ಬಳಿಕ ಅದೇ ಸ್ಥಳದಲ್ಲಿ ಸಣ್ಣ ಗಾತ್ರದ ಬ್ಯಾಂಕ್ ಆಫ್ ಬರೋಡ ನಾಮ ಫಲಕದ ವೃತ್ತವನ್ನು ಸ್ಥಾಪಿಸಿದ್ದರು.
ವ್ಯಾಪಾಕ ಆಕ್ರೋಶ, ಖಂಡನೆ: ಬನ್ನಂಜೆ ವೃತ್ತದಲ್ಲಿ ಶ್ರೀನಾರಾಯಣ ಗುರುಗಳ ಹೆಸರಿನ ವೃತ್ತವನ್ನು ತೆರವುಗೊಳಿಸಿರುವ ಕ್ರಮಕ್ಕೆ ವ್ಯಾಪಾಕ ಖಂಡನೆ ವ್ಯಕ್ತವಾಯಿತು.
ಇದು ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ತೋರಿದ ದೊಡ್ಡ ಅಗೌರವ. ಜಿಲ್ಲಾಡಳಿತ ತಕ್ಷಣ ಎಚ್ಚೆತ್ತುಕೊಂಡು ಕೂಡಲೇ ಸ್ಪಷ್ಟನೆಯನ್ನು ಕೊಡಬೇಕು. ಇಲ್ಲದಿದ್ದಲ್ಲಿ ಇಡೀ ಸಮಾಜವನ್ನು ಒಗ್ಗೂಡಿಸಿಕೊಂಡು ಮುಂದಿನ ನಿರ್ಣಯ ವನ್ನು ಕೈಗೊಳ್ಳಲಾಗುವುದು ಎಂದು ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ಪ್ರವೀಣ್ ಎಂ.ಪೂಜಾರಿ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದರು.
ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಉಡುಪಿ ಬನ್ನಂಜೆಯ ನಾರಾಯಣಗುರು ವೃತ್ತವನ್ನು ತೆರವುಗೊಳಿಸಿರು ವುದನ್ನು ಖಂಡಿಸಿದ ಉಡುಪಿ ಮಾಜಿ ಶಾಸಕ ಕೆ.ರಘುಪತಿ ಭಟ್, ನಾರಾಯಣಗುರು ವೃತ್ತ ತೆರವುಗೊಳಿಸಿದ ವರನ್ನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು. ನಗರಸಭೆಯಿಂದ ಸುಂದರವಾದ ನಾರಾಯಣ ಗುರು ವೃತ್ತ ನಿರ್ಮಾಣ ಮಾಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಿದರು.
ಬನ್ನಂಜೆ ಶ್ರೀನಾರಾಯಣ ಗುರು ವೃತ್ತವನ್ನು ತೆರವು ಗೊಳಿಸಿದ ವ್ಯಕ್ತಿಗಳನ್ನು ತಕ್ಷಣ ಬಂಧಿಸಿ ಕ್ರಮಕೈಗೊಳ್ಳಬೇಕು. ಬನ್ನಂಜೆ ವೃತ್ತದಲ್ಲಿ ನಾರಾಯಣ ಗುರುಗಳ ಪುತ್ಥಳಿ ಸ್ಥಾಪಿಸಿ ಸುಸಜ್ಜಿತ ವೃತ್ತ ನಿರ್ಮಾಣ ಮಾಡುವ ಬಗ್ಗೆ ಈಗಾಗಲೇ ನಿರ್ಣಯ ಮಾಡಲಾಗಿದೆ. ಹೊಸ ವೃತ್ತ ನಿರ್ಮಾಣಗೊಳ್ಳುವ ವರೆಗೆ ತೆರವು ಮಾಡಿರುವ ವೃತ್ತವನ್ನು ಪುನರ್ ಅಳವಡಿಸಬೇಕು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಆಗ್ರಹಿಸಿದರು.
ಅಲ್ಲೇ ವೃತ್ತ ಮರುಸ್ಥಾಪನೆ: ಶ್ರೀನಾರಾಯಣಗುರು ವೃತ್ತ ತೆರವುಗೊಳಿಸಿ ರುವುದಕ್ಕೆ ವ್ಯಾಪಾಕ ಆಕ್ರೋಶ ವ್ಯಕ್ತವಾ ಗುತ್ತಿದ್ದಂತೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಸೂಚನೆಯಂತೆ ನಗರ ಸಂಚಾರ ಪೊಲೀಸರು, ವೃತ್ತವನ್ನು ಅದೇ ಸ್ಥಳದಲ್ಲಿ ರವಿವಾರ ಸಂಜೆ ಮರುಸ್ಥಾಪಿಸಿದರು.
‘ಬನ್ನಂಜೆಯಲ್ಲಿರುವ ಶ್ರೀನಾರಾಯಣ ಗುರು ಅವರ ಹೆಸರಿನಲ್ಲಿರುವ ಸಂಚಾರ ವೃತವನ್ನು ಅಜಾಗರೂಕತೆಯಿಂದ ತೆಗೆದುಹಾಕಲಾಗಿದೆ ಎಂದು ನಮ್ಮ ಗಮನಕ್ಕೆ ಬಂದಿದೆ. ಕೂಡಲೇ ಅದನ್ನು ಮತ್ತೆ ಅದೇ ಸ್ಥಳದಲ್ಲಿ ಮರು ಸ್ಥಾಪಿಸಲಾಗಿದೆ’ ಎಂದು ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.