ಲಾರಿಯ ಚಕ್ರದಡಿಗೆ ಬಿದ್ದು ಬೈಕ್ ಸವಾರ ಮೃತ್ಯು
Update: 2025-09-01 21:15 IST
ಉಡುಪಿ, ಸೆ.1: ಬೃಹತ್ ಗಾತ್ರ ಲಾರಿಯ ಚಕ್ರದಡಿಗೆ ಬಿದ್ದು ಬೈಕ್ ಸವಾರರೊಬ್ಬರು ಮೃತಪಟ್ಟ ಘಟನೆ ಇಂದು ಸಂಜೆ ವೇಳೆ ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ಬಳಿ ನಡೆದಿದೆ.
ಮೃತರನ್ನು ದೊಂದುರುಕಟ್ಟೆಯ ಪ್ರದೀಪ(38) ಎಂದು ಗುರುತಿಸಲಾಗಿದೆ. ಅಂಬಲಪಾಡಿಯ ಸುರಭಿ ಅಟೋ ಮೊಬೈಲಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಇವರು, ಸಂಜೆ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಬೈಕಿನಿಂದ ರಸ್ತೆಗೆ ಬಿದ್ದ ಇವರ ತಲೆಯ ಮೇಲೆ ಕಂಟೈನರ್ ಲಾರಿಯ ಚಕ್ರ ಹರಿಯಿತ್ತೆನ್ನಲಾಗಿದೆ. ಇದರಿಂದ ಗಂಭೀರ ವಾಗಿ ಗಾಯಗೊಂಡ ಅವರು ಸ್ಥಳದಲ್ಲಿಯೇ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಜಿಲ್ಲಾಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ಸಮಾಜಸೇವಕ ನಿತ್ಯಾನಂದ ಒಳಕಾಡು ಇಲಾಖೆಗೆ ನೆರವಾದರು.