×
Ad

ಬಿಜೆಪಿ-ಜೆಡಿಎಸ್ ಹಾಲು-ಜೇನು ತರ; ಯಾರೂ ಹುಳಿ ಹಿಂಡೋದು ಬೇಡ: ಆರ್. ಅಶೋಕ್

Update: 2025-12-29 20:07 IST

ಉಡುಪಿ: ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹಾಲು-ಜೇನು ತರ ಇದ್ದೇವೆ. ಇದಕ್ಕೆ ಯಾರೂ ಹುಳಿ ಹಿಂಡೋದು ಬೇಡ. ನಾವು ಮುಂದೆ ಬರುವ ಚುನಾವಣೆಗಳಲ್ಲಿ ಕೇಂದ್ರದ ನಾಯಕರು ಹೇಳಿದಂತೆ ಸ್ಪರ್ಧಿಸುತ್ತೇವೆ. ನಮ್ಮ ನಡುವೆ ಮೈತ್ರಿ ಚೆನ್ನಾಗಿದೆ. ಮುಂದೆ ಮೈತ್ರಿ ಯಾವ ರೀತಿ ಇರಬೇಕು ಅನ್ನೋದನ್ನ ಕುಮಾರಸ್ವಾಮಿ, ದೇವೇಗೌಡ ಮತ್ತು ನಮ್ಮ ಪಕ್ಷದ ಪ್ರಮುಖರು ನಿರ್ಧರಿಸುತ್ತಾರೆ ಎಂದು ರಾಜ್ಯ ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.

ಕಾಪುವಿನ ಮಂಥನ್ ರೆಸಾರ್ಟ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಶೋಕ್, ಮುಂಬರುವ ಚುನಾವಣೆಗಳಲ್ಲಿ ಸ್ಪರ್ಧಿಸುವ ಕುರಿತಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಜೆಡಿಎಸ್ ನಾಯಕ ಎಚ್.ಡಿ.ದೇವೇಗೌಡ ನೀಡಿದ ವಿಭಿನ್ನ ಹೇಳಿಕೆಯ ಕುರಿತು ಕೇಳಿದ ಪ್ರಶ್ನೆಗೆ ಅವರು ಉತ್ತರಿಸುತಿದ್ದರು.

ನಾವು ಎನ್‌ಡಿಎ ಪಾರ್ಟನರ್‌ಗಳು. ಇದನ್ನು ನಮ್ಮ ರಾಷ್ಟ್ರೀಯ ಅಧ್ಯಕ್ಷರು, ಪ್ರಧಾನ ಮಂತ್ರಿಗಳು ಈಗಾಗಲೇ ಘೋಷಿಸಿದ್ದಾರೆ. ನಮ್ಮ ನಡುವಿನ ಮೈತ್ರಿ ಹೇಗಿರಬೇಕು ಎನ್ನುವುದನ್ನು ನಿರ್ಧರಿಸುವವರು ಬಿಜೆಪಿ ಮತ್ತು ಜೆಡಿಎಸ್‌ನ ಹಿರಿಯ ನಾಯಕರು. ಅದಿನ್ನೂ ತೀರ್ಮಾನ ಆಗಿಲ್ಲ. ಸದ್ಯಕ್ಕೆ ನಮ್ಮ ನಡುವೆ ಯಾವುದೇ ಸಮಸ್ಯೆ ಇಲ್ಲ. ಚುನಾವಣೆಗಳಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ಮುಂದುವರೆಯುತ್ತೆ. ಸಂಸತ್ ಚುನಾವಣೆಯಲ್ಲಿ ಇದು ಯಶಸ್ವಿಯಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲೂ -ಅದು ಯಾವತ್ತೂ ಬೇಕಾದರೂ ಬರಬಹುದು- ಮುಂದುವರಿಯುತ್ತೆ. ನಾವು ಈ ಸರಕಾರ ಬೀಳಿಸಲು ಹೋಗಲ್ಲ. ಸರಕಾರ ಬೀಳಿಸುವ ಮನಸ್ಥಿತಿಯಲ್ಲಿ ನಾವೀಗ ಇಲ್ಲ. ಅದರ ಪರಿಣಾಮವನ್ನು ನಾವು ಈಗಾಗಲೇ ಒಮ್ಮೆ ನೋಡಿದ್ದೇವೆ ಎಂದು ಅಶೋಕ್ ನುಡಿದರು.

ಮುಂದೆ ವಿಧಾನಸಭಾ ಚುನಾವಣೆ ನಡೆದರೆ ಬಿಜೆಪಿ ಮತ್ತು ಜೆಡಿಎಸ್ ರಾಜ್ಯದಲ್ಲಿ ತೆಲಂಗಾಣ, ಬಿಹಾರದಲ್ಲಿ ಭರ್ಜರಿ ಬಹುಮತ ಬಂದಂತೆ ಇಲ್ಲೂ 170ಕ್ಕೂ ಅಧಿಕ ಸ್ಥಾನವನ್ನು ಗೆಲ್ಲುವುದು ಖಂಡಿತ ಎಂದವರು ಭವಿಷ್ಯ ನುಡಿದರು.

ಹಾಗಿದ್ದರೆ ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನಾವು ಪ್ರತ್ಯೇಕವಾಗಿ ಸ್ಪರ್ಧಿಸುತ್ತೇವೆ ಎನ್ನುವ ದೇವೇಗೌಡರ ಹೇಳಿಕೆಗೆ ಏನು ಹೇಳುತ್ತೀರಿ ಎಂದು ಪ್ರಶ್ನಿಸಿದಾಗ, ದೇವೇಗೌಡರು ಹಿರಿಯರು ಅವರು ಅವರ ಭಾವನೆಗಳನ್ನು ಹೇಳಿದ್ದಾರೆ. ಆದರೆ ಅಂತಿಮವಾಗಿ ಇದನ್ನು ಎನ್‌ಡಿಎ ಸಮನ್ವಯ ಸಮಿತಿ ತೀರ್ಮಾನಿಸುತ್ತದೆ ಎಂದರು.

ದೇವೇಗೌಡರ ಬಗ್ಗೆ ಅಪಾರ ಗೌರವ ಇದೆ. ದೇವೇಗೌಡರ ಮಾತಿನಲ್ಲಿ ತೂಕ ಇದೆ. ಅವರ ಭಾವನೆ ಅವರು ಹೇಳಿದ್ದಾರೆ. ಆದರೆ ವಿಷಯವನ್ನು ನಮ್ಮ ರಾಷ್ಟ್ರೀಯ ಅಧ್ಯಕ್ಷರು, ಪ್ರಧಾನಿಗಳು ಅವರ ಜೊತೆ ಕೂತು ಮಾತನಾಡಿ ನಿರ್ಧರಿಸುತ್ತಾರೆ. ಸಮನ್ವಯ ಸಮಿತಿಯ ತೀರ್ಮಾನವೇ ಅಂತಿಮ ಎಂದು ಅಶೋಕ್, ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದರು.

ಹಾಗಿದ್ದರೆ ನಾವು ಸ್ವಂತ ಬಲದಲ್ಲಿ 140 ಸ್ಥಾನ ಗೆಲ್ಲುತ್ತೇವೆ ಎಂಬ ನಿಮ್ಮ ಅಧ್ಯಕ್ಷ ವಿಜಯೇಂದ್ರ ಹೇಳಿಕೆಗೆ ಏನು ಅರ್ಥ ಎಂದು ಮರು ಪ್ರಶ್ನಿಸಿದಾಗ, ತಮ್ಮ ಹೇಳಿಕೆಗೆ ವಿಜಯೇಂದ್ರ ಈಗಾಗಲೇ ಸ್ಪಷ್ಟೀಕರಣ ನೀಡಿದ್ದಾರೆ. ಅದು ನನ್ನ ಮಾತಲ್ಲ. ನಮ್ಮ ಕಾರ್ಯಕರ್ತರದ್ದು ಎಂದಿದ್ದಾರೆ. ಅದು ನನ್ನ ಭಾವನೆ ಅಲ್ಲ ಎಂದೂ ಹೇಳಿದ್ದಾರೆ. ನಾವು ಒಟ್ಟಾಗಿ ಹೋಗುವುದು ಇಡೀ ಪಕ್ಷದ ನಿರ್ಧಾರ ಎಂದು ಅಶೋಕ್ ತಿಳಿಸಿದರು.

ಬಿಜೆಪಿ ಅಧ್ಯಕ್ಷ ಸ್ಥಾನ ಆಯ್ಕೆಯ ಕುರಿತಂತೆ ಬಗೆಹರಿಯದ ವಿವಾದ ಕುರಿತಂತೆ ಹೇಳಿದಾಗ, ನಮ್ಮ ಪಕ್ಷದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಚುನಾವಣೆ ನಡೆಯುತ್ತೆ. ಈಗಿನ ಅಧಿಕ ವಿಜಯೇಂದ್ರ ಅವರನ್ನು ವರಿಷ್ಠರು ನಾಮಿನೇಟ್ ಮಾಡಿದ್ದಾರೆ. ಅವರನ್ನು ಮುಂದುವರಿಸುವುದು ಅಥವಾ ಬಿಡುವುದನ್ನು ಕೇಂದ್ರದ ಅಧ್ಯಕ್ಷರು ತೀರ್ಮಾನಿಸುತ್ತಾರೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಸಮಜಾಯಿಷಿ ನೀಡಿದರು.

ವಿಜಯೇಂದ್ರ ಅವರನ್ನು ನೇಮಕ ಮಾಡಿ ಎರಡು ವರ್ಷ ಆಗಿದೆ. ಅವರನ್ನೇ ಮುಂದುವರಿಸಬೇಕಾ ಬೇಡವಾ ಅನ್ನೋದನ್ನು ನಾವು ತೀರ್ಮಾನ ಮಾಡೋಕೆ ಆಗಲ್ಲ. ಮುಂದಿನ ನಮ್ಮ ರಾಷ್ಟ್ರೀಯ ಅಧ್ಯಕ್ಷರು ತೀರ್ಮಾನಿಸುತ್ತಾರೆ. ಇದರಲ್ಲಿ ಜಟಿಲತೆ ಏನಿಲ್ಲ. ಜನವರಿ ನಂತರ ಹೊಸ ಅಧ್ಯಕ್ಷರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.

ನಮ್ಮೆಲ್ಲರನ್ನು ಕೇಳಿಯೇ ವಿಜಯೇಂದ್ರ ಅವರನ್ನು ನಾಮಿನೇಟ್ ಮಾಡಿದ್ದಾರೆ. ನಮ್ಮದು ಕಮ್ಯುನಿಸ್ಟ್ ಪಾರ್ಟಿಯಲ್ಲ, ಪ್ರಜಾಪ್ರಭುತ್ವ ಇರುವ ಪಕ್ಷ ನಮ್ಮದು. ನಮ್ಮಲ್ಲಿ ಅಭಿಪ್ರಾಯ ಭೇದ ಇದೆ. ಆದರೆ ಕೇಂದ್ರ ನಾಯಕರ ತೀರ್ಮಾನ ಅಂತಿಮ. ಸಣ್ಣಪುಟ್ಟ ವಿಚಾರ ಭೇದ ಇರುವುದು ಸಹಜ. ಸದ್ಯಕ್ಕೆ ವಿಜಯೇಂದ್ರ ನಮ್ಮ ರಾಜ್ಯಧ್ಯಕ್ಷರು. ಯಾವುದೇ ಪ್ರಶ್ನೆ ಇಲ್ಲ. ನೆಲದಲ್ಲಿ ಕೂತ ಕಾರ್ಯಕರ್ತರು. ನಮ್ಮಲ್ಲಿ ಪ್ರಧಾನಿಯಾಗುತ್ತಾರೆ. ದಿಗ್ವಿಜಯ ಸಿಂಗ್ ಅದನ್ನೇ ಹೇಳಿದ್ದಾರೆ. ಕಾಂಗ್ರೆಸ್ ಬಿಜೆಪಿಗೆ ಇದೇ ವ್ಯತ್ಯಾಸ. ಕಾಂಗ್ರೆಸ್‌ನಲ್ಲಿ ಮೇಲೆ ಕೂತವರು ಮೇಲೆನೇ ಕೂತಿರುತ್ತಾರೆ. ನಮ್ಮಲ್ಲಿ ಯಾವುದೇ ಕ್ಷಣದಲ್ಲಿ ಕಾರ್ಯಕರ್ತರ ದೊಡ್ಡ ಹುದ್ದೆಗೆ ಏರಬಹುದು ಎಂದರು.

ಈ ಕುರಿತು ಪ್ರಶ್ನೆಗಳ ಸುರಿಮಳೆಯೇ ಆದಾಗ ಅಶೋಕ್, ಇದರಲ್ಲಿ ಎನ್‌ಡಿಎ ಸಮನ್ವಯ ಸಮಿತಿಯ ತೀರ್ಮಾನವೇ ಅಂತಿಮ. ಯಾರು ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿದರೂ, ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕಾಗಿರುವುದು ಸಮನ್ವಯ ಸಮಿತಿಯಲ್ಲಿ. ಅಲ್ಲಿ ಚರ್ಚೆಯಾಗಿ ತೀರ್ಮಾನವನ್ನು ನಾವೆಲ್ಲರೂ ಒಪ್ಪಿಕೊಳ್ಳುತ್ತೇವೆ ಎಂದು ಅಶೋಕ್ ನುಡಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಮೆಂಡನ್ ಬಿಜೆಪಿ ನಾಯಕರುಗಳಾದ ಕುತ್ಯಾರು ನವೀನ್ ಶೆಟ್ಟಿ, ರೇಶ್ಮಾ ಉದಯ ಶೆಟ್ಟಿ, ಕಲ್ಯ ದಿವಾಕರ ಶೆಟ್ಟಿ, ಶ್ರೀಕಾಂತ ನಾಯಕ್ ಹಾಗೂ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News