ನಾಪತ್ತೆಯಾದ ಯುವಕನ ಮೃತದೇಹ ಪತ್ತೆ: ಸಾವಿನ ಬಗ್ಗೆ ಸಂಶಯವಿರುವುದಾಗಿ ಸಹೋದರನಿಂದ ದೂರು
ಕುಂದಾಪುರ: ಸ್ವಂತ ಟಿಪ್ಪರ್ ಹೊಂದಿದ್ದು 3-4 ವಷರ್ಗಳಿಂದ ವ್ಯವಹಾರ ಮಾಡಿಕೊಂಡಿದ್ದ ಹೊಸಂಗಡಿ ತಾರ್ಕಿಮಕ್ಕಿ ನಿವಾಸಿ ಕವೀನಾ ನಾಯ್ಕ್ (26) ಅ.2 ರಂದು ನಾಪತ್ತೆಯಾದ ಬಗ್ಗೆ ಸಹೋದರ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಅ.5 ರಂದು ಹೊಸಂಗಡಿಯ ಮಾತಿನಮಠ ಎಂಬಲ್ಲಿ ಖಾಸಗಿ ಜಾಗವೊಂದರಲ್ಲಿ ಮೃತದೇಹ ಪತ್ತೆಯಾಗಿದೆ.
ಪ್ರಕರಣದ ಸಾರಾಂಶ:
ಕವೀನಾ ನಾಯ್ಕ ಎನ್ನುವರು ಹಾಲ್ಕಲ್ ಬಳಿ ಸ್ವಂತ ಟಿಪ್ಪರ್ ಇಟ್ಟುಕೊಂಡು 3-4 ವಷರ್ಗಳಿಂದ ವ್ಯವಹಾರ ಮಾಡಿಕೊಂಡಿದ್ದು ಕುಂದಾಪುರ ತಾಲೂಕು ಹೊಸಂಗಡಿ ಗ್ರಾಮದ ತಾರ್ಕಿಮಕ್ಕಿ ಎಂಬಲ್ಲಿಗೆ ಅ.2ರಂದು ಸಂಜೆ 6.30ರ ಸುಮಾರಿಗೆ ಸ್ನೇಹಿತನ ಬಳಿ ಮನೆಗೆ ಹೋಗಿ ಬರುವುದಾಗಿ ತಿಳಿಸಿ ತೆರಳಿದ್ದು ಮನೆಗೆ ಬಾರದೇ ನಾಪತ್ತೆಯಾಗಿದ್ದು ಮೊಬೈಲ್ ಕೂಡ ಸ್ವಿಚ್ ಆಫ್ ಆಗಿತ್ತು. ಬಳಿಕ ಕವೀನಾ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ.
ಕುಟುಂಬಿಕರು ಸತತವಾಗಿ ಹುಡುಕಾಡಿದ್ದು ಸೋಮವಾರ ಹೊಸಂಗಡಿಯ ಮಾತಿನಮಠ ಎಂಬಲ್ಲಿ ಖಾಸಗಿ ತೋಟದಲ್ಲಿ ಮೃತದೇಹ ಅಂಗಾಂತನೇ ಬಿದ್ದು, ಹುಳು-ನೊಣಗಳಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಸಹೋದರ ದೂರಿನಲ್ಲಿ ತಿಳಿಸಿದ್ದಾರೆ.
ಮೃತದೇಹ ಸಿಕ್ಕ ಸ್ಥಳ ತಮ್ಮ ಮನೆಗೆ ಹೋಗುವ ದಾರಿಯಲ್ಲವಾಗಿದ್ದು ಮತ್ತು ಮೃತರ ಕಾಲಿನಲ್ಲಿ ಚಪ್ಪಲಿ ಇರದೇ ಇರುವುದು ಹಾಗೂ ಈ ಸ್ಥಳದಲ್ಲಿ ಕಾಲಿನ ಚಪ್ಪಲಿ ಕಂಡುಬಾರದಿದ್ದು ಕವೀನಾ ಸಾವಿನಲ್ಲಿ ಸಂಶಯ ಇರುವ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಸಹೋದರ ಪ್ರವೀಣ್ ನೀಡಿದ ದೂರಿನಂತೆ ಅಸಹಜ ಸಾವು ಪ್ರಕರಣ ದಾಖಲಾಗಿದೆ.