ರಾಷ್ಟ್ರೀಯ ಹೆದ್ದಾರಿಗೆ ಅಳವಡಿಸಿದ ರಿಫ್ಲೆಕ್ಟರ್ ಕೋನ್‌ಗಳು ಒಂದೇ ವಾರದಲ್ಲಿ ನಾಶ!
ಕುಂದಾಪುರ, ಅ.5: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅರಾಟೆ ಸಮೀಪದ ಹಳೆ ಸೇತುವೆಯನ್ನು ಪುನರ್ ನಿರ್ಮಿಸುವ ಕಾಮಗಾರಿ ನಡೆಯುತ್ತಿರುವ ಹಿನ್ನಲೆಯಲ್ಲಿ ಅರಾಟೆಯಿಂದ ಹೆಮ್ಮಾಡಿ ಶ್ರೀಕಾಶೀ ಮಠದ ತನಕ ರಾಷ್ಟ್ರೀಯ ಹೆದ್ದಾರಿ ಮಧ್ಯದ ಮಾರ್ಗದ ಉದ್ದಕ್ಕೂ ಅಳವಡಿಸಲಾಗಿದ್ದ ರಿಫ್ಲೆಕ್ಟರ್ ಕೋನ್ ಒಂದೇ ವಾರದಲ್ಲಿ ಸಂಪೂರ್ಣ ನಾಶವಾಗಿದೆ.
ಅರಾಟೆಯ ಹೊಸ ಸೇತುವೆಯಲ್ಲಿ ಎರಡು ಕಡೆ ಸಾಗುವ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟ ಹಿನ್ನೆಲೆ ಇತ್ತೀಚೆಗೆ ಒಂದಷ್ಟು ಅಪಘಾತಗಳು ಸಂಭವಿಸಿತ್ತು. ಈ ಬಗ್ಗೆ ಹೆದ್ದಾರಿ ಕಾಮಗಾರಿ ಗುತ್ತಿಗೆ ವಹಿಸಿದ್ದ ಐಆರ್‌ಬಿ ಕಂಪೆನಿಯು ಹೆಮ್ಮಾಡಿ ಸಮೀಪದ ಶ್ರಿಕಾಶೀ ಮಠದ ಕ್ರಾಸ್ನಿಂದ ಅರಾಟೆ ಸೇತುವೆವರೆಗೆ ರಸ್ತೆ ಲೇನ್ ಶಿಸ್ತನ್ನು ಸುಧಾರಿಸಲು, ಅನಧಿಕೃತ ಹಾಗೂ ಅಕ್ರಮ ಯು-ಟರ್ನ್ಗಳನ್ನು ತಡೆಯಲು ಮತ್ತು ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು, ಹಾಗೆಯೇ ಅಪಾಯಕಾರಿ ಪ್ರದೇಶಗಳಲ್ಲಿ ಹೆದ್ದಾರಿ ಮಧ್ಯದ ಮಾರ್ಗದ ಉದ್ದಕ್ಕೂ ಹೆಚ್ಚು ಗೋಚರಿಸುವ ರಿಫ್ಲೆಕ್ಟರ್ ಕೋನ್‌ಗಳನ್ನು ಅಳವಡಿಸಿತ್ತು.
ಹೆದ್ದಾರಿ ಮಧ್ಯದ ಮಾರ್ಗದ ಉದ್ದಕ್ಕೂ ಅಳವಡಿಸಲಾಗಿದ್ದ ಹೆಚ್ಚು ಗೋಚರಿಸುವ ರಿಫ್ಲೆಕ್ಟರ್ವುಳ್ಳ ಕೋನ್ಗಳಿಗೆ ಭಾರಿ ವಾಹನಗಳು ಡಿಕ್ಕಿ ಹೊಡೆದು ಕೋನ್ ಅಳವಡಿಸಿದ ಒಂದೇ ವಾರದಲ್ಲಿ ಎಲ್ಲಾ ಕೋನ್‌ಗಳು ಕಿತ್ತು ಹೋಗಿದೆ.