ಬ್ರಹ್ಮಾವರ: ಲಾರಿಯಡಿ ಸಿಲುಕಿ ಬೈಕ್ ಸವಾರ ದಾರುಣ ಮೃತ್ಯು
ಬ್ರಹ್ಮಾವರ, ಜ.23: ಲಾರಿಯೊಂದು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಚಕ್ರದಡಿ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಜ.23ರಂದು ಬೆಳಗ್ಗೆ 8ಗಂಟೆ ಸುಮಾರಿಗೆ ಉಪ್ಪೂರು ಗ್ರಾಮದ ಕೆ.ಜಿ ರೋಡ್ ಜಂಕ್ಷನ್ ಡಿವೈಡರ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.
ಮೃತರನ್ನು ಬ್ರಹ್ಮಾವರ ಮಟಪಾಡಿಯ ಅಭಿಷೇಕ್ ಡಿ.ನಾಯ್ಕ(27) ಎಂದು ಗುರುತಿಸಲಾಗಿದೆ. ಉಡುಪಿ ವಿದ್ಯೋದಯ ಪಬ್ಲಿಕ್ ಸ್ಕೂಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಇವರು, ಬೆಳಗ್ಗೆ ತನ್ನ ಬೈಕಿನಲ್ಲಿ ಬ್ರಹ್ಮಾವರದಿಂದ ಉಡುಪಿ ಕಡೆಗೆ ಬರುತ್ತಿದ್ದರು.
ಇದೇ ಸಂದರ್ಭ ಉಡುಪಿ ಕಡೆಗೆ ಹೋಗುತ್ತಿದ್ದ ಲಾರಿಯನ್ನು ಚಾಲಕ ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಒಮ್ಮೇಲೆ ರಸ್ತೆಯ ಎಡಕ್ಕೆ ಚಲಾಯಿಸಿದನು. ಇದರ ಪರಿಣಾಮ ಲಾರಿಯ ಎಡಬದಿಯ ಮಧ್ಯದ ಚಕ್ರ ಅಭಿಷೇಕ್ ನಾಯ್ಕ ಅವರ ಬೈಕಿಗೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ.
ಇದರಿಂದ ಅಭಿಷೇಕ್ ನಾಯ್ಕ ಲಾರಿಯ ಚಕ್ರದ ಅಡಿ ಸಿಲುಕಿಕೊಂಡಿದ್ದು, ಅಪಘಾತದ ಭೀಕರತೆಗೆ ಅಭಿಷೇಕ್ ದೇಹದಿಂದ ತಲೆ ಪ್ರತ್ಯೇಕಗೊಂಡು ಸ್ಥಳದಲ್ಲಿಯೇ ಮೃತಪಟ್ಟರು ಎಂದು ತಿಳಿದುಬಂದಿದೆ. ಶವ ತೆರವು ಹಾಗೂ ಅಜ್ಜರಕಾಡು ಜಿಲ್ಲಾಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ಸಮಾಜಸೇವಕ ನಿತ್ಯಾನಂದ ಒಳ ಕಾಡು ಮತ್ತು ಬ್ರಹ್ಮಾವರದ ಅಂಬುಲೆನ್ಸ್ ಚಾಲಕ ನೆರವಾದರು. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.