ದ್ವೇಷದ ಉಚ್ಚಾಟನೆಗೆ ಬೈಂದೂರು ಶಾಸಕ ಗಂಟಿಹೊಳೆ ಕಾರಣ: ಬಿಜೆಪಿ ಮುಖಂಡ ದೀಪಕ್ ಕುಮಾರ್ ಶೆಟ್ಟಿ ಆರೋಪ
ಬೈಂದೂರು: ಕಳೆದ 13 ವರ್ಷಗಳಿಂದ ಹಗಲಿರುಳು ಬಿಜೆಪಿ ಪಕ್ಷ ಸಂಘಟನೆಗಾಗಿ ದುಡಿದು ನನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಯಾವುದೇ ತಪ್ಪು ಮಾಡದೆ ಬಿಜೆಪಿ ಪಕ್ಷದಿಂದ ನನ್ನನ್ನು ಉಚ್ಚಾಟಿಸಿ ’ಪೊಲಿಟಿಕಲ್ ಮರ್ಡರ್’ ಮಾಡಲಾಗಿದೆ. ಈ ದ್ವೇಷದ ಉಚ್ಚಾಟನೆಗೆ ಬೈಂದೂರು ಹಾಲಿ ಶಾಸಕ ಗುರುರಾಜ ಗಂಟಿಹೊಳೆ ಕಾರಣ. ಈ ಆದೇಶಕ್ಕೆ ಯಾವುದೇ ಬೆಲೆಯಿಲ್ಲ. ಉಚ್ಚಾಟನೆ ಮಾಡಬೇಕಾಗಿರುವುದು ಬೈಂದೂರು ಶಾಸಕರನ್ನು ಎಂದು ಬೈಂದೂರು ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಟೀಕಿಸಿದ್ದಾರೆ.
ಬಿಜೆಪಿ ಪಕ್ಷದಿಂದ ಉಚ್ಚಾಟಿಸಿದ ವಿಚಾರದಲ್ಲಿ ಅವರು ಬೈಂದೂರು ರೈತ ಕಛೇರಿಯಲ್ಲಿ ಶುಕ್ರವಾರ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತಿದ್ದರು. ಬಿಜೆಪಿ ಪಕ್ಷದ ನಿಯಮದ ಪ್ರಕಾರ ನನ್ನ ಉಚ್ಚಾಟನೆಯಾಗಿಲ್ಲ. ಹಲವಾರು ದಶಕಗಳಿಂದ ರೈತಪರ ಹೋರಾಟ, ಪಕ್ಷ ಸಂಘಟನೆಯಲ್ಲಿ ಮುನ್ನೆಲೆಯಾಗಿ ತೊಡಗಿಸಿಕೊಂಡವರಿಗೆ ಹೀಗಾದರೆ ಬಿಜೆಪಿ ಪಕ್ಷದ ಸಾಮಾನ್ಯ ಕಾರ್ಯಕರ್ತರ ಗತಿಯೇನು. ರೈತರ ಪರವಾಗಿ ಹೋರಾಟ ಮಾಡಿರುವುದು ಪಕ್ಷ ವಿರೋಧಿಯಾಗುವುದು ಹೇಗೆ ಎಂದು ಪ್ರಶ್ನಿಸಿದರು.
ಶಾಸಕ ಗಂಟಿಹೊಳೆ ಗೆಲುವಿನ ಹಿಂದೆ ನಮ್ಮಂತ ಸಾವಿರಾರು ಕಾರ್ಯಕರ್ತರ ಪರಿಶ್ರಮವಿದೆ. ಬಡವರ ಮನೆ ಹುಡುಗ ಗೆಲ್ಲಬೇಕೆಂದು ಹಗಲು-ರಾತ್ರಿ ದುಡಿದೆವು. ಮನೆ, ವಾರ್ಡ್ ಗೊತ್ತಿಲ್ಲದರನ್ನು ಗೆಲ್ಲಿಸಿದ್ದು ಬಡವರ ಮನೆ ಹುಡುಗ ಈಗ ಶ್ರೀಮಂತರ ಮನೆ ಪಾಲಾಗಿದ್ದಾರೆ ಎಂದ ಅವರು, ನಮ್ಮನ್ನು ತಡೆಯುವರು ಯಾರೂ ಇಲ್ಲ. ನಾನು ಹಿಂದೆ ಕೂಡ ಬಿಜೆಪಿ. ಮುಂದೆಯೂ ಬಿಜೆಪಿ ಎಂದರು.
ಪಟ್ಟಣ ಪಂಚಾಯತಿಯಿಂದ ಗ್ರಾಮೀಣ ಭಾಗಗಳನ್ನು ಕೈಬಿಡಬೇಕೆಂದು ರೈತರು ಮಾಡುತ್ತಿರುವ ಹೋರಾಟ 124 ದಿನ ಪೂರೈಸಿದೆ. ಸರಕಾರ, ಜಿಲ್ಲಾಡಳಿತ ರೈತರ ಬೇಡಿಕೆ ಈಡೇರಿಸುವ ಹಂತದಲ್ಲಿದ್ದರು ಕೂಡ ಯಾವುದೋ ಹಿತಾಸಕ್ತಿ ಕಾರಣಕ್ಕೆ ಅದಕ್ಕೂ ತಡೆಯೊಡ್ಡಿ ರೈತರಿಗೆ ನ್ಯಾಯ ಸಿಗದಿರುವಂತೆ ಮಾಡಲಾಗಿದೆ ಎಂದು ಅವರು ಆರೋಪಿಸಿದರು.
ಬೈಂದೂರು ಶಾಸಕರು ಕ್ಷೇತ್ರಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ಕಳೆದ ಬಾರಿ ಉತ್ಸವದ ಹೆಸರಿನಲ್ಲಿ ವಿದೇಶದಲ್ಲಿ ಹಣ ಸಂಗ್ರಹಿಸಿದ್ದಾರೆ. ಈ ಬಾರಿಯೂ ಉತ್ಸವ ಮಾಡಲಾಗುತ್ತಿದೆ. ಈ ಉತ್ಸವದಿಂದ ಬೈಂದೂರಿನ ಜನರಿಗೆ ಏನು ಲಾಭ ಇಲ್ಲ. ಇವರ ಉತ್ಸವ ರೈತರ ಹೆಣದ ಮೇಲೆ ನಡೆಯುವ ನೈತಿಕತೆಯಿಲ್ಲದ ಉತ್ಸವವಾಗಿದೆ. ಆದುದರಿಂದ ಈ ಉತ್ಸವಕ್ಕೆ ಬರುವ ಸಚಿವರು, ವಿವಿಧ ನಾಯಕರುಗಳು ಪರಾಮರ್ಷಿಸಬೇಕು ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಗ್ರಾ.ಪಂ ಮಾಜಿ ಅಧ್ಯಕ್ಷ ಕೃಷ್ಣ ದೇವಾಡಿಗ, ಕುಂದಾಪುರ ತಾ.ಪಂ ಮಾಜಿ ಸದಸ್ಯ ಸುರೇಂದ್ರ ಖಾರ್ವಿ, ಯುವಮೋರ್ಚಾ ಮಾಜಿ ಪ್ರಧಾನ ಕಾರ್ಯದರ್ಶಿ ಆಕಾಶ್ ಪೂಜಾರಿ, ಪ್ರಮುಖರಾದ ಲಿಮೋನ್ ಅತ್ಯಾಡಿ, ಭಾಸ್ಕರ ಮರಾಠಿ ಗಂಗನಾಡು ಇದ್ದರು.
‘ಶಾಸಕ ನನ್ನ ಮೇಲೆ ಕೈ ಮಾಡಿದ್ದರು’
ಮಣಿಪಾಲದಲ್ಲಿ ಬೈಂದೂರು ಶಾಸಕ ಗಂಟಿಹೊಳೆ ಸಂಸದ ಹಾಗೂ ಇತರ ಶಾಸಕರುಗಳ ಎದುರೇ ನನ್ನ ಕುತ್ತಿಗೆಗೆ ಕೈಹಾಕಿ ತಳ್ಳಿದರು. ಒಬ್ಬ ಶಾಸಕ ಮಂಡಲ ಅಧ್ಯಕ್ಷನ ಮೇಲೆ ಕೈ ಮಾಡಿರುವುದು ಶಾಸಕರ ರಾಜಕೀಯ ದುರಾಸೆಯ ವರ್ತನೆ ಎಂದು ದೀಪಕ್ ಕುಮಾರ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಿ ಬೆಳ್ತಂಗಡಿ, ಪುತ್ತೂರು, ಬಳ್ಳಾರಿ ರಿಜೆಕ್ಟೆಡ್ ಪೀಸ್‌ಗಳನ್ನು ಖುರ್ಚಿ ಮೇಲೆ ಕೂರಿಸಿ ಬೈಂದೂರಿನ ಸ್ವಾಭಿಮಾನಿ ಕಾರ್ಯಕರ್ತರನ್ನು ಆಳಲು ಹೊರಟಾಗ ವಿರೋಧಿಸಬೇಕಾಯಿತು. ಪಕ್ಷ ಯಾರ ಮನೆಯ ಆಸ್ತಿಯಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿ.ವೈ. ರಾಘವೇಂದ್ರ ನನ್ನ ಸಂಬಂಧ ಹಾಳು ಮಾಡುವ ಸಲುವಾಗಿ ಅವರ ಲೀಡ್ ಕಮ್ಮಿ ಮಾಡುವ ಹುನ್ನರವೂ ನಡೆದಿತ್ತು ಎಂದು ಅವರು ಆರೋಪಿಸಿದರು.
‘ಬರಿಗಾಲ ಸಂತ ಹೇಳಿಕೊಂಡು ಗುರುರಾಜ್ ಗಂಟಿಹೊಳೆ ಶಾಸಕರಾಗಿ ಬಂದ ಮೇಲೆ ಬೈಂದೂರಿಗೆ ಬರಗಾಲ ಬಂದಿದೆ. ಕ್ಷೇತ್ರದಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದು ಸೂಕ್ತ ಸಮಯದಲ್ಲಿ ಎಲ್ಲಾ ದಾಖಲೆ ಬಹಿರಂಗ ಪಡಿಸಲಾಗುವುದು’
-ದೀಪಕ್ ಕುಮಾರ್ ಶೆಟ್ಟಿ, ಮಾಜಿ ಅಧ್ಯಕ್ಷರು, ಬೈಂದೂರು ಬಿಜೆಪಿ ಮಂಡಲ