ಉಡುಪಿ: ಸಾಲುಮರದ ತಿಮ್ಮಕ್ಕ ವಿಷಯಾಧಾರಿತ ಫಲಪುಷ್ಪ ಪ್ರದರ್ಶನ
ಜ.26ರಿಂದ 28ರವರೆಗೆ 26 ಜಾತಿಯ ಹೂವುಗಳ ಪ್ರದರ್ಶನ
ಉಡುಪಿ, ಜ.23: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ತೋಟಗಾರಿಕೆ ಇಲಾಖೆಗಳ ಸಹಯೋಗದಲ್ಲಿ ಈ ಬಾರಿ ಸಾಲುಮರದ ತಿಮ್ಮಕ್ಕ ವಿಷಯಾಧಾರಿತ ಫಲಪುಷ್ಪ ಪ್ರದರ್ಶನ ಜ.26ರಿಂದ 28ರವರೆಗೆ ಉಡುಪಿ ದೊಡ್ಡಣಗುಡ್ಡೆಯಲ್ಲಿರುವ ಶಿವಳ್ಳಿ ಮಾದರಿ ತೋಟಗಾರಿಕೆ ಕ್ಷೇತ್ರದ ಪುಷ್ಪ ಹರಾಜು ಕೇಂದ್ರ (ರೈತ ಸೇವಾ ಕೇಂದ್ರ) ದಲ್ಲಿ ನಡೆಯಲಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ತಿಳಿಸಿದ್ದಾರೆ.
ತೋಟಗಾರಿಕಾ ಇಲಾಖೆಯ ವತಿಯಿಂದ ಈ ಬಾರಿ ನಡೆಯುವ ಫಲಪುಷ್ಪ ಪ್ರದರ್ಶನದ ಕುರಿತು ವಿವರಣೆ ನೀಡಲು ಕರೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಬಾರಿಯ ಪ್ರದರ್ಶನದ ಪ್ರಧಾನ ಆಕರ್ಷಣೆ ಇತ್ತೀಚೆಗೆ ತೀರಿಕೊಂಡ ಸಾಲುಮರದ ತಿಮ್ಮಕ್ಕರ ಜೀವನ ಹಾಗೂ ಸಾಧನೆಗಳ ಕುರಿತು ವಿವರಿಸುವ ವಿವಿಧ ಕಲಾಕೃತಿಗಳ ಪ್ರದರ್ಶನ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಜ.26ರಂದು ಬೆಳಗ್ಗೆ 8:30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳ್ಳರ್ ಅವರು ಫಲಪುಷ್ಪ ಪ್ರದರ್ಶನ ವನ್ನು ಉದ್ಘಾಟಿಸಲಿದ್ದಾರೆ. ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲೆ ಸಂಸದರು, ಶಾಸಕರು ಹಾಗೂ ಇತರ ಗಣ್ಯರು ಉಪಸ್ಥಿತರಿರುವರು ಎಂದರು.
ಫಲಪುಷ್ಪ ಪ್ರದರ್ಶನದ ಅಂಗವಾಗಿ ಸುಮಾರು 7000ಕ್ಕೂ ಅಧಿಕ 26 ಜಾತಿಯ ವಿವಿಧ ಬಣ್ಣ, ಆಕೃತಿಯ ಅತ್ಯಾಕರ್ಷಕ ಹೂವುಗಳು ನೋಡುಗರನ್ನು ಸೆಳೆಯಲಿವೆ. ಪೆಟೂನಿಯ, ಸೆಲೋಷಿಯಾ, ಸಾಲ್ವಿಯ, ಸೇವಂತಿಗೆ, ಚೆಂಡು ಹೂ, ಜೀನಿಯಾ, ಚೈನಾ ಅಸ್ಟರ್, ಬಾಲ್ಬಮ್, ತೊರೇನಿಯ, ಗುಲಾಬಿ, ಟೆಕೋಮಾ, ದಾಸವಾಳ, ಪ್ಯಾನ್ಸಿ, ಇಂಪೇಷಿಯನ್ಸ್ ಹಾಗೂ ಮುಂತಾದ ಜಾತಿಯ ಗಿಡಗಳನ್ನು ಪ್ರದರ್ಶಿಸಲಾಗುವುದು ಎಂದು ಹೇಳಿದರು.
ಫಲಪುಷ್ಪ ಪ್ರದರ್ಶನದಲ್ಲಿ ಗುಲಾಬಿ, ಸೇವಂತಿಗೆ ಮುಂತಾದ ಹೂವುಗಳನ್ನು ಬಳಸಿ ತಯಾರಿಸಿದ ವಿವಿಧ ಕಲಾಕೃತಿ ಗಳ ಹಾಗೂ ತೆಂಗಿನ ಗರಿಗಳಿಂದ ತಯಾರಿಸಿದ ಜಾನೂರ್ ಆರ್ಟ್ ಕಲಾಕೃತಿಗಳನ್ನು ಸಹ ಪ್ರದರ್ಶಿಸಲಾಗುತ್ತದೆ. ಅಲ್ಲದೇ ಹೂವುಗಳಿಂದಲೇ ತಯಾರಿಸಿದ ಸೆಲ್ಫಿ ರೆನ್, ಡೋರೆಮನ್, ಮಶರೂಮ್, ಕೋನ್ ಮಾದರಿಗಳ ಪ್ರದರ್ಶನವೂ ಇರಲಿದೆ ಎಂದರು.
ವಿವಿಧ ಅಲಂಕಾರಿಕ ಗಿಡಗಳ ಪ್ರದರ್ಶನ, ಹೂವಿನ ಕುಂಡಗಳ ಜೋಡಣೆ, ವಿವಿಧ ತರಕಾರಿಗಳ ಮಾದರಿ ಕೈತೋಟ ಹಾಗೂ ಮೈಕ್ರೋಗ್ರೀನ್ಸ್ ಬಗ್ಗೆ ಪ್ರಾತ್ಯಕ್ಷಿಕೆಯೂ ಇರಲಿದೆ. ಇವುಗಳೊಂದಿಗೆ ಕೃಷಿಗೆ ಸಂಬಂಧಿಸಿದ ಇಲಾಖೆ ಗಳ ವಸ್ತು ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳನ್ನು ತೆರೆಯಲಾಗುವುದು. ನರ್ಸರಿ ಗಿಡಗಳ ಮಾರಾಟ ಮಳಿಗೆ, ಕೃಷಿ ಪರಿಕರಗಳ ಪ್ರದರ್ಶನ ಹಾಗೂ ಯಂತ್ರೋಪಕರಣಗಳ ಮಾರಾಟ ಮಳಿಗೆಯನ್ನು ತೆರೆಯಲಾಗುವುದು ಎಂದರು.
ಪ್ರದರ್ಶನದಲ್ಲಿ ಜ.26ರಂದು ಅಡಿಕೆ ಎಲೆ ಚುಕ್ಕೆ ರೋಗ ನಿಯಂತ್ರಣ ಕುರಿತು, 27ರಂದು ಉಡುಪಿಯ ಜಿಐ ಮಾನ್ಯತೆ ಪಡೆದ ಉಡುಪಿ ಮಲ್ಲಿಗೆ ಹಾಗೂ ಮಟ್ಟುಗುಳ್ಳ ಬದನೆ ಬೆಳೆಗಳಿಗೆ ಇರುವ ರಫ್ತು ಅವಕಾಶಗಳ ಬಗ್ಗೆ ವಿಚಾರ ಸಂಕಿರಣವಿರುತ್ತದೆ. 28ರಂದು ಕೈತೋಟ, ತಾರಸಿ ತೋಟ ನಿರ್ಮಾಣ ಹಾಗೂ ನಿರ್ವಹಣೆ ಕುರಿತು ಆಸಕ್ತರಿಗೆ ಮಾಹಿತಿಯನ್ನು ನೀಡಲಾಗುತ್ತದೆ ಎಂದು ಸ್ವರೂಪ ಟಿ.ಕೆ. ತಿಳಿಸಿದರು.
ಜಿಲ್ಲೆಯ ರೈತರು ಬೆಳೆದಿರುವ ವಿಶಿಷ್ಟ ಹಣ್ಣುಗಳು, ತರಕಾರಿ, ತೋಟದ ಬೆಳೆಗಳು, ಸಾಂಬಾರು ಬೆಳೆಗಳನ್ನು ಸಹ ಪ್ರದರ್ಶನಕ್ಕೆ ಇಡಲಾಗುವುದು. ಅಲ್ಲದೇ ಕೃಷಿ, ಮೀನುಗಾರಿಕೆ, ಪಶುಸಂಗೋಪನೆ, ಕೃಷಿ ವಿಜ್ಞಾನ ಕೇಂದ್ರ, ಬ್ಯಾಂಕ್ ಹಾಗೂ ಇತರ ಇಲಾಖೆಗಳ ಮಾಹಿತಿ ಮಳಿಗೆಯೂ ಪ್ರದರ್ಶನದಲ್ಲಿ ಇರಲಿವೆ ಎಂದರು.
ಮೂರು ದಿನಗಳ ಫಲಪುಷ್ಪ ಪ್ರದರ್ಶನವನ್ನು ವೀಕ್ಷಿಸಲು ಬೆಳಿಗ್ಗೆ 10 ರಿಂದ ಸಂಜೆ 8 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕಿ ಕ್ಷಮಾ ಪಾಟೀಲ್ ಉಪಸ್ಥಿತರಿದ್ದರು.