×
Ad

ಬ್ರಹ್ಮಾವರ | ʼಕಿಶೋರ ಯಕ್ಷಗಾನ ಸಂಭ್ರಮ-2025ʼ ಉದ್ಘಾಟನೆ

Update: 2025-11-26 19:50 IST

ಬ್ರಹ್ಮಾವರ, ನ.26: ಉಡುಪಿಯ ಯಕ್ಷಶಿಕ್ಷಣ ಟ್ರಸ್ಟ್ ಹದಿನೆಂಟು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಕಿಶೋರ ಯಕ್ಷಗಾನ ಸಂಭ್ರಮ -2025 ಬ್ರಹ್ಮಾವರದ ಬಂಟರ ಭವನದ ಬಳಿ ಮಂಗಳವಾರ ಸಂಜೆ ಉದ್ಘಾಟನೆಗೊಂಡಿತು.

ಬ್ರಹ್ಮಾವರ ಬಂಟರ ಸಂಘದ ಆವರಣದಲ್ಲಿ ನಿರ್ಮಿಸಿದ ವೇದಿಕೆಯಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ದೀಪ ಬೆಳಗಿಸುವ ಮೂಲಕ ಈ ಬಾರಿಯ ಕಿಶೋರ ಯಕ್ಷಗಾನ ಸಂಭ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೋಟ, ಯಕ್ಷಗಾನ ಶ್ರೀಮಂತ ಕಲಾಪ್ರಕಾರವಾಗಿದ್ದು, ಮಕ್ಕಳಲ್ಲಿ ಭಾಷಾ ಪ್ರೌಢಿಮೆ, ಪುರಾಣ ಜ್ಞಾನ, ಆತ್ಮ ವಿಶ್ವಾಸ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಮಕ್ಕಳಿಗೆ ಇಂಥ ಅವಕಾಶವನ್ನು ನಿರಂತರವಾಗಿ ನೀಡುತ್ತಿರುವ ಉಡುಪಿಯ ಯಕ್ಷಗಾನ ಕಲಾರಂಗ ಅಭಿನಂದನಾರ್ಹ ಎಂದರು.

ಉಡುಪಿ ಶಾಸಕ ಹಾಗೂ ಟ್ರಸ್ಟ್ ನ ಅಧ್ಯಕ್ಷರೂ ಆದ ಯಶಪಾಲ್ ಎ.ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಹಿರಿಯರಾದ ಬಿ. ಭುಜಂಗ ಶೆಟ್ಟಿ, ಆರೂರು ತಿಮ್ಮಪ್ಪ ಹೆಗ್ಡೆ, ದಿನಕರ ಹೇರೂರು, ಟಿ.ಭಾಸ್ಕರ್ ರೈ, ಮೈರ್ಮಾಡಿ ಅಶೋಕ್ಕುಮಾರ್ ಶೆಟ್ಟಿ, ಬಿರ್ತಿ ರಾಜೇಶ ಶೆಟ್ಟಿ, ಎಂ. ಗಂಗಾಧರ ರಾವ್, ರಾಜು ಕುಲಾಲ್, ಮಾರಾಳಿ ಪ್ರತಾಪ ಹೆಗ್ಡೆ, ಬಿ.ಆರ್.ನಿತ್ಯಾನಂದ, ನಾರಾಯಣ ಎಂ.ಹೆಗಡೆ ಉಪಸ್ಥಿತರಿದ್ದರು.

ಟ್ರಸ್ಟ್ ನ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳನ್ನಾಡಿದರು. ಪ್ರದರ್ಶನ ಸಂಘಟನಾ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಉದಯ ಪೂಜಾರಿ ವಂದಿಸಿದರು. ಟ್ರಸ್ಟಿನ ಕೋಶಾಧಿಕಾರಿ ಗಣೇಶ ಬ್ರಹ್ಮಾವರ ಕಾರ್ಯಕ್ರಮ ನಿರೂಪಿಸಿದರು.

ಉದ್ಘಾಟನಾ ಸಮಾರಂಭದ ನಂತರ ಎಸ್.ಎಂ.ಎಸ್. ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಂದ ನರಸಿಂಹ ತುಂಗ ನಿರ್ದೇಶನದಲ್ಲಿ ವೀರ ವೃಷಸೇನ ಪ್ರದರ್ಶನಗೊಂಡಿತು. ಈ ವರ್ಷ ಒಟ್ಟು 94 ಪ್ರೌಢಶಾಲೆಗಳ ವಿದ್ಯಾರ್ಥಿಗಳು ಡಿ.31ರವರೆಗೆ ಉಡುಪಿ, ಕಾಪು, ಕುಂದಾಪುರ ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರದರ್ಶನ ನೀಡಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News