×
Ad

ಬ್ರಹ್ಮಾವರ | ಸಿಜೆಐ ಮೇಲೆ ಶೂ ಎಸೆದ ವಕೀಲನ ಗಡಿಪಾರಿಗೆ ಆಗ್ರಹಿಸಿ ಪ್ರತಿಭಟನೆ

Update: 2025-10-13 17:32 IST

ಬ್ರಹ್ಮಾವರ : ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆದ ವಕೀಲ ಕಿಶೋರ್ ವಿರುದ್ಧ ಸ್ವಯಂ ಪ್ರೇರಿತ ಎಫ್‌ಐಆರ್ ದಾಖಲಿಸಿ, ದೇಶದಿಂದ ಗಡಿಪಾರು ಮಾಡಲು ಆದೇಶಿಸುವಂತೆ ಆಗ್ರಹಿಸಿ ಸಮತಾ ಸೈನಿಕ ದಳದ ವತಿಯಿಂದ ರವಿವಾರ ಬ್ರಹ್ಮಾವರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಮತಾ ಸೈನಿಕ ದಳ ಹಾಗೂ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾಧ್ಯಕ್ಷ ವಿಶ್ವನಾಥ್ ಪೇತ್ರಿ, ಅಂಬೇಡ್ಕರ್ ನೀಡಿದ ಭಾರತದ ಸಂವಿಧಾನ ಭಗವಾನ್ ಬುದ್ಧರ ಆದರ್ಶವನ್ನು ಒಳಗೊಂಡಿದೆ. ಹಾಗಾಗಿ ಅದನ್ನು ಸಹಿಸಲಾರದೆ ಮನುವಾದವನ್ನು ಪ್ರತಿಪಾದಿಸುವ ಕೆಲವರಿಗೆ ಜೀರ್ಣವಾಗುವುದಿಲ್ಲ ಎಂದು ತಿಳಿಸಿದರು.

ವಕೀಲ ರಾಕೇಶ್ ಕಿಶೋರ್ ತನ್ನನ್ನು ದೇವರೇ ಈ ಕೃತ್ಯ ಮಾಡಿಸಿದ್ದು, ಹಾಗಾಗಿ ನನಗೆ ಪಶ್ಚಾತಾಪ ಇಲ್ಲ ಎಂದಿರುವುದು ನಮಗೆ ಸಂಶಯವಿದೆ. ಆತ ಎಲ್‌ಎಲ್‌ಬಿ ಮಾಡಿ ವಕೀಲನಾಗಿದ್ದ ಅಥವಾ ಜ್ಯೋತಿಷ್ಯ ಓದಿ ವಕೀಲನಾಗಿದ್ದ ಎಂಬುದು ತನಿಖೆ ಮಾಡಬೇಕು. ಆತನ ವಿರುದ್ಧ ಪ್ರಕರಣ ದಾಖಲಿಸಿ ಹಾಗೂ ಆತನಿಗೆ ಕುಮ್ಮಕ್ಕು ನೀಡಿ ಅಶಾಂತಿ ಉಂಟು ಮಾಡಿದ ಆತನ ಕಾಣದ ಕೈಗಳನ್ನು ದೇಶದ್ರೋಹ ಕಾಯ್ದೆಯಡಿ ಬಂಧಿಸಿ, ಗಡಿಪಾರು ಮಾಡಬೇಕು ಎಂದರು.

ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಹಾಗೂ ಸಹಬಾಳ್ವೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಇದ್ರೀಸ್ ಹೂಡೆ, ವಕೀಲ ರಾಕೇಶ್ ಕಿಶೋರ್ ಪ್ರತಿಕೃತಿಗೆ ಅಗ್ನಿ ಸ್ಪರ್ಶ ಮಾಡಿದರು.

ಪ್ರತಿಭಟನೆಯಲ್ಲಿ ಸಮತಾ ಸೈನಿಕ ದಳದ ಮುಖಂಡರಾದ ಜ್ಯೋತಿ ಶಿರಿಯಾರ, ಸತೀಶ್ ಜಿನ್ನಾಡಿ, ವಿಘ್ನೇಶ್ ಬ್ರಹ್ಮಾವರ, ಸಂತೋಷ್ ಆಮ್ರಕಲ್ಲು, ಗೋವಿಂದ ಹೈಕಾಡಿ, ರಘು ಕೊಂಜಾಡಿ, ರಮೇಶ್ ಶೇಡಿ ಮನೆ, ಅಮೂಲ್ಯ ಅರಸಮ್ಮ ಕಾನು, ಸತೀಶ್ ಮುದ್ದೂರು, ಗೌರಿ ನಡ್ಕೇರಿ, ಸದಾಶಿವ ತಾರಿಕಟ್ಟೆ, ಚಂದ್ರ ಸೂರ್ಗೊಳಿ, ಪ್ರಮೋದ ಮುದ್ದೂರು, ಶರತ್ ಮುದ್ದೂರು, ಸುರೇಶ್ ಪೆರ್ಡೂರು ಮುಂತಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News