×
Ad

ಬ್ರಹ್ಮಾವರ | ದೇಶದ ಆರ್ಥಿಕಾಭಿವೃದ್ಧಿಗೆ ಗ್ರಾಮೀಣ ಭಾರತದ ಅಭಿವೃದ್ಧಿ ಮುಖ್ಯ : ಟಿ.ಎಸ್.ಎನ್.ಪೂರ್ಣಾನಂದ

ಬ್ರಹ್ಮಾವರ ರುಡ್‌ಸೆಟ್‌ನಲ್ಲಿ ಬ್ಯಾಂಕ್ ಮಿತ್ರ ತರಬೇತಿಗೆ ಚಾಲನೆ

Update: 2025-12-11 20:31 IST

ಬ್ರಹ್ಮಾವರ, ಡಿ.11: ಭಾರತ ಒಟ್ಟಾರೆ ಆರ್ಥಿಕಾಭಿವೃದ್ಧಿ ಹಾಗೂ ಪ್ರಗತಿ ಗ್ರಾಮೀಣ ಭಾರತದ ಸಮಗ್ರ ಅಭಿವೃದ್ಧಿಯನ್ನು ಅವಲಂಬಿಸಿದೆ. ಇದು ಸಾಧ್ಯವಾಗಬೇಕಿದ್ದರೆ ಆರ್ಥಿಕ ಚಟುವಟಿಕೆಗಳಿಂದ ಹೊರಗುಳಿದವರ ಸೇರ್ಪಡೆ ಅನಿವಾರ್ಯ ಎಂದು ಕೆನರಾ ಬ್ಯಾಂಕ್ ನ ಉಡುಪಿ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ವ್ಯವಸ್ಥಾಪಕ ಟಿ.ಎಸ್.ಎನ್.ಪೂರ್ಣಾನಂದ ಹೇಳಿದ್ದಾರೆ.

ಬ್ರಹ್ಮಾವರದ ಹೇರೂರಿನಲ್ಲಿರುವ ಗ್ರಾಮಾಭಿವೃದ್ಧಿ ಮತ್ತು ಸ್ವಉದ್ಯೋಗ ತರಬೇತಿ (ರುಡ್ಸೆಟ್) ಸಂಸ್ಥೆಯ ಆಶ್ರಯದಲ್ಲಿ ಆಯೋಜಿಸಲಾದ ಬ್ಯಾಂಕ್ ಮಿತ್ರ ತರಬೇತಿಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಈ ಹಿನ್ನೆಲೆಯಲ್ಲಿ ಕೊನೆಯ ಹಂತದ ಸಂಪರ್ಕವನ್ನು ಪ್ರಯತ್ನಿಸುವ ಬ್ಯಾಂಕ್ನ ಪ್ರತಿನಿಧಿಯಾಗಿ ಸೇವೆಯನ್ನು ನೀಡುವ ವ್ಯವಸ್ಥೆ ಇದಾಗಿದೆ. ಈಗಾಗಲೇ ಬ್ಯಾಂಕ್ ಮಿತ್ರ ಯೋಜನೆಯು ಸಾಕಷ್ಟು ಪ್ರಾಮುಖ್ಯತೆಯನ್ನು ಪಡೆದಿದೆ. ಬ್ಯಾಂಕ್ ಮಿತ್ರ ಅಭ್ಯರ್ಥಿಗಳು ಕಮಿಷನ್ಗಾಗಿ ಕೆಲಸ ಮಾಡದೇ, ಸೇವೆಯೆಂದು ಭಾವಿಸಿ ಕೆಲಸ ಮಾಡಿದಲ್ಲಿ ಖಂಡಿತವಾಗಿ ಸಮಾಜದಲ್ಲಿ ಮಾನ್ಯತೆ ಸಿಗುತ್ತದೆ ಎಂದರು.

ಜಿಲ್ಲಾ ಲೀಡ್ ಬ್ಯಾಂಕ್ ನ ಮ್ಯಾನೇಜರ್ ಹರೀಶ್ ಮಾತನಾಡಿ, ಬ್ಯಾಂಕ್ ಮಿತ್ರ ಯೋಜನೆಯ ಮುಖ್ಯ ಉದ್ದೇಶ ಬ್ಯಾಂಕ್ ಶಾಖೆಗಳಿಲ್ಲದಲ್ಲಿಗೆ ಮತ್ತು ಇಲ್ಲಿಯ ತನಕ ಬ್ಯಾಂಕಿಂಗ್ ಸೌಲಭ್ಯಗಳಿಂದ ಹೊರಗುಳಿದವರಿಗೆ, ಬ್ಯಾಂಕಿಂಗ್ ಸೇವೆಯನ್ನು ಒದಗಿಸುವುದು. ಹೀಗಾಗಿ ಬ್ಯಾಂಕ್ ಮಿತ್ರ ಅಭ್ಯರ್ಥಿಗಳು ಬ್ಯಾಂಕ್ ನ ಪ್ರತಿನಿಧಿಗಳು. ಶಾಖೆ ಮತ್ತು ಸುತ್ತಮುತ್ತಲಿನ ಜನರ ನಡುವಿನ ಸೇತು ನೀವಾಗಿದ್ದೀರಿ ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ರುಡ್ಸೆಟ್ ಸಂಸ್ಥೆ ನಿರ್ದೇಶಕ ಬೊಮ್ಮಯ್ಯ ಎಂ. ಮಾತನಾಡಿ, ಸಂಸ್ಥೆ ನೀಡುವ ತರಬೇತಿಯನ್ನು ಶ್ರದ್ಧೆಯಿಂದ ಪಡೆಯು ವಂತೆ ತಿಳಿಸಿದರಲ್ಲದೇ, ಜನ ಸಾಮಾನ್ಯರಿಗೆ ನಿಮ್ಮಿಂದ ಬ್ಯಾಂಕಿಂಗ್ ಕ್ಷೇತ್ರದ ಕುರಿತಾಗಿ ಉತ್ತಮ ಮಾಹಿತಿಗಳು ಲಭಿಸಲಿ ಎಂದು ಹೇಳಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಬ್ಯಾಂಕ್ ಮಿತ್ರ ತರಬೇತುದಾರರಾದ ಕೆನರಾ ಬ್ಯಾಂಕ್ ನ ನಿವೃತ್ತ ವಿಭಾಗೀಯ ವ್ಯವಸ್ಥಾಪಕ ಸುಂದರೇಶ, ಅತಿಥಿ ಉಪನ್ಯಾಸಕಿ ರಾಜಲಕ್ಷ್ಮೀ ಉಪಸ್ಥಿತರಿದ್ದರು. ಉಪನ್ಯಾಸಕ ಸಂತೋಷ್ ಸ್ವಾಗತಿಸಿದರೆ, ಚೈತ್ರ ಕೆ. ಕಾರ್ಯಕ್ರಮವನ್ನು ನಿರೂಪಿಸಿದರು. ಶಾಂತಪ್ಪ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News