×
Ad

ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಹಗರಣ: ಆರೋಪಿಗಳ ವಿಚಾರಣೆಗೆ ಸರಕಾರದ ಹಸಿರು ನಿಶಾನೆ

► ತನಿಖೆ ನಡೆಸಿ; ಬಲವಂತದ ಕ್ರಮ ಬೇಡ: ಹೈಕೋರ್ಟ್ ಸೂಚನೆ ► ಗುಜರಿ ಮಾರಾಟದಲ್ಲಿ 13.92 ಕೋಟಿ ರೂ. ಭ್ರಷ್ಟಾಚಾರ ಸಾಬೀತು

Update: 2025-08-19 21:12 IST

ಉಡುಪಿ, ಆ.19: ಬ್ರಹ್ಮಾವರದ ದಕ್ಷಿಣ ಕನ್ನಡ ಸಹಕಾರಿ ಸಕ್ಕರೆ ಕಾರ್ಖಾನೆಯ ಹಳೆ ಯಂತ್ರೋಪಕರಣಗಳ (ಗುಜರಿ) ಮಾರಾಟದಲ್ಲಿ ಒಟ್ಟು 13.92 ಕೋಟಿ ರೂ. ಭ್ರಷ್ಟಾಚಾರ ನಡೆದಿರುವುದು ತನಿಖೆಯಲ್ಲಿ ದೃಢಪಟ್ಟಿದ್ದು, ಇದಕ್ಕೆ ಕಾರಣರಾದ ಕಾರ್ಖಾನೆಯ ಆಗಿನ ಆಡಳಿತ ಮಂಡಳಿ, ಟೆಂಡರ್ ಕಮ್ ಹರಾಜಿನ ತಾಂತ್ರಿಕ ಸಮಿತಿ ಸದಸ್ಯರು ಹಾಗೂ ಕಾರ್ಖಾನೆಯ ಆಗಿನ ಮೂವರು ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗೆ ರಾಜ್ಯ ಸರಕಾರ ಅನುಮತಿ ನೀಡಿದೆ.

ಕೋಟ್ಯಾಂತರ ರೂ.ಗಳ ಈ ಹಗರಣದ ಕುರಿತು ತನಿಖೆ ನಡೆಸಿದ ಬ್ರಹ್ಮಾವರ ಸರ್ಕಲ್ ಇನ್‌ಸ್ಪೆಕ್ಟರ್ ನೇತೃತ್ವದ ಉಡುಪಿ ಪೊಲೀಸರಿಗೆ ಸಹಕಾರಿ ಇಲಾಖೆಯ ಅಧಿಕಾರಿಗಳು ಸೇರಿದಂತೆ ಆರೋಪಿಗಳ ವಿರುದ್ಧ ಕ್ರಿಮಿನಲ್ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಒತ್ತಾಯಿಸಿ ಕಳೆದ ಫೆಬ್ರವರಿ ತಿಂಗಳಲ್ಲಿ ವಿಧಾನಪರಿಷತ್‌ನ ಮಾಜಿ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ ನೇತೃತ್ವದಲ್ಲಿ ಉಡುಪಿ ಜಿಲ್ಲಾ ರೈತ ಸಂಘ 50 ದಿನಗಳ ಕಾಲ ಕಾರ್ಖಾನೆ ಎದುರು ಧರಣಿ ಸತ್ಯಾಗ್ರಹ ನಡೆಸಿತ್ತು.

ಈ ಬಗ್ಗೆ ಸರಕಾರದಿಂದ ಖಚಿತ ಭರವಸೆ ಪಡೆದು ಕೊನೆಗೆ ಪ್ರತಿಭಟನೆಯನ್ನು ವಾಪಾಸು ಪಡೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ಸರಕಾರ ಸುಪ್ರಸಾದ್ ಶೆಟ್ಟಿ ನೇತೃತ್ವದಲ್ಲಿ ಅಂದಿನ ಆಡಳಿತ ಮಂಡಳಿಯ 10 ಮಂದಿ ಸದಸ್ಯರು ಮೂವರು ತಾಂತ್ರಿಕ ಸಮಿತಿಯ ಸದಸ್ಯರು ಹಾಗೂ ಮೂವರು ಎಂಡಿಗಳ (ಪ್ರವೀಣ್ ಬಿ.ನಾಯಕ್, ಜಿ.ಎನ್. ಲಕ್ಷ್ಮೀನಾರಾಯಣ, ರಮೇಶ್) ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದೆ ಎಂದು ರೈತ ಸಂಘದ ಕಾರ್ಯದರ್ಶಿ ಬೆಳ್ಳೆ ಸತೀಶ್ ಕಿಣಿ ತಿಳಿಸಿದ್ದಾರೆ.

ಆದರೆ ಇದರ ವಿರುದ್ಧ ಆರೋಪಿಗಳೆಲ್ಲರೂ ಹೈಕೋರ್ಟ್‌ನ ಮೆಟ್ಟಲೇರಿದ್ದು, ಮೊಕದ್ದಮೆಯನ್ನು ರದ್ದುಪಡಿಸುವಂತೆ ಮನವಿ ಮಾಡಿದ್ದಾರೆ. ಕೋರ್ಟ್ ಅವರ ಮನವಿಗೆ ಪುರಸ್ಕರಿಸಿಲ್ಲ ಎಂದು ಸತೀಶ್ ಕಿಣಿ ತಿಳಿಸಿದ್ದಾರೆ. ಆದರೆ ಕೋರ್ಟ್ ಅವರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಸೂಚಿಸಿದ್ದು, ತನಿಖೆಯನ್ನು ಮುಂದು ವರಿಸಲು ಅನುಮತಿ ನೀಡಿದೆ ಎಂದು ಕಿಣಿ ವಿವರಿಸಿದ್ದಾರೆ.

ತನಿಖೆ ಮುಗಿಸಿ ಎಫ್‌ಐಆರ್ ಹಾಕುವ ಮುನ್ನ ಕೋರ್ಟ್‌ನ ಗಮನಕ್ಕೆ ತರುವಂತೆಯೂ ನ್ಯಾಯಾಲಯ ತಿಳಿಸಿದೆ. ಹೀಗಾಗಿ ತನಿಖೆ ನಡೆದು ವಿಚಾರಣೆ ಪ್ರಾರಂಭಿಸುವ ಮುನ್ನ ನ್ಯಾಯಾಲಯದ ಅನುಮತಿಯನ್ನು ಪಡೆಯಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಸಹಕಾರಿ ಇಲಾಖೆ ತನಿಖೆ: ಹಗರಣದ ಕುರಿತಂತೆ ಉಡುಪಿ ಜಿಲ್ಲಾದಿಕಾರಿಗಳು 2024ರ ಜೂನ್ ತಿಂಗಳಲ್ಲಿ ಸರಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಗುಜರಿ ಮಾರಾಟದಲ್ಲಿ ಅವ್ಯವಹಾರ ನಡೆದಿರುವುದು ಖಚಿತವಾಗಿದ್ದು, ಈ ಬಗ್ಗೆ ಇಲಾಖಾ ವಿಚಾರಣೆ ನಡೆಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಇಲಾಖೆ ಅವ್ಯವಹಾರ ಗಳ ಆರೋಪದ ತನಿಖೆಗೆ ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ರಾಧಾಕೃಷ್ಣ ಹೊಳ್ಳರನ್ನು ವಿಚಾರಣಾಧಿಕಾರಿಯಾಗಿ ನೇಮಿಸಿದ್ದು, ಉಡುಪಿಗೆ ಆಗಮಿಸಿ ಸಂಬಂಧಿತರ ವಿಚಾರಣೆ ನಡೆಸಿರುವ ನ್ಯಾಯಾಧೀಶ ಹೊಳ್ಳರು ಇದೀಗ ವರದಿ ಯನ್ನು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲರಿಗೆ ನೀಡಿದ್ದಾರೆ.

ನ್ಯಾ.ರಾಧಾಕೃಷ್ಣ ಹೊಳ್ಳರ ವರದಿಯಲ್ಲೂ ಗುಜರಿ ಮಾರಾಟದಲ್ಲಿ ಕಾರ್ಖಾನೆಗೆ ಕೋಟ್ಯಾಂತರ ಕೋಟಿ ರೂ. ನಷ್ಟವಾಗಿರುವುದು ದೃಢಪಟ್ಟಿದ್ದು, ಆರ್ಥಿಕ ನಷ್ಟ ಉಂಟಾಗಲು ಆಡಳಿತ ಮಂಡಳಿ, ಟೆಂಡರ್ ಕಮ್ ಹರಾಜಿನ ತಾಂತ್ರಿಕ ಸಮಿತಿ ಸದಸ್ಯರು ಹಾಗೂ ಆಗಿನ ವ್ಯವಸ್ಥಾಪಕ ನಿರ್ದೇಶಕರಾದ ಪ್ರವೀಣ್ ಬಿ. ನಾಯಕ್ ಮತ್ತು ಜಿ. ಎನ್. ಲಕ್ಷ್ಮೀನಾರಾಯಣ ಅವರ ನಿರ್ಲಕ್ಷ್ಯವೇ ಕಾರಣ ಎಂಬುದು ತನಿಖಾ ವರದಿಯಲ್ಲಿ ಕಂಡು ಬಂದಿದೆ ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.

ಆರೋಪಿಗಳಿಂದ ಹಣ ವಸೂಲಿಗೆ ಸೂಚನೆ: ಹೀಗಾಗಿ ಈ ಹಿಂದೆ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆಗೆ ಸಂಬಂಧಿ ಸಿದಂತೆ ಹಿಂದಿನ ವ್ಯವಸ್ಥಾಪಕ ನಿರ್ದೇಶಕರಾದ ಪ್ರವೀಣ್ ಬಿ. ನಾಯ್ಕ ಹಾಗೂ ಜಿ. ಎನ್. ಲಕ್ಷ್ಮೀ ನಾರಾಯಣ ವಿರುದ್ಧ ಕ್ರಿಮಿನಲ್ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲಾಗಿದೆ. ಈ ಇಬ್ಬರು ಅಧಿಕಾರಿಗಳ ಮೇಲೆ ಇಲಾಖಾ ವಿಚಾರಣೆಗೆ ಸಹಕಾರ ಇಲಾಖೆಗೆ ಶಿಫಾರಸು ಮಾಡಲಾಗಿದೆ. ಅಲ್ಲದೆ ನಷ್ಟದ ಹಣವನ್ನು ಸಂಬಂಧಪಟ್ಟ ವರಿಂದ ವಸೂಲು ಮಾಡಲು ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಅವ್ಯವಹಾರದಲ್ಲಿ ಆಡಳಿತ ಮಂಡಳಿಯ ನಿರ್ದೇಶಕರು ಭಾಗಿಯಾಗಿರುವುದು ತನಿಖಾ ವರದಿಯಲ್ಲಿ ಸ್ಪಷ್ಟವಾಗಿರು ವುದರಿಂದ ಅವರ ವಿರುದ್ಧವೂ ಕ್ರಿಮಿನಲ್ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲಾಗಿದೆ. ಈ ಟೆಂಡರ್ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದೆ ಎಂದು ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹಾಗೂ ಉಡುಪಿ ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬೆಳ್ಳೆ ಸತೀಶ್ ಕಿಣಿ ಸರಕಾರಕ್ಕೆ ದೂರು ಸಲ್ಲಿಸಿದ್ದರು.

13.92 ಕೋಟಿ ರೂ. ಹಗರಣದ ಹಿನ್ನೆಲೆ

1985ರಲ್ಲಿ ಪ್ರಾರಂಭವಾಗಿದ್ದ ಸಕ್ಕರೆ ಕಾರ್ಖಾನೆ 2002-03ನೇ ಸಾಲಿನವರೆಗೆ ಕಬ್ಬು ನುರಿಸಿದ್ದು, ಕಬ್ಬಿನ ಕೊರತೆ ಮತ್ತು ದುಡಿಯುವ ಬಂಡವಾಳದ ಕೊರತೆ ಕಾರಣ 2003-04ನೇ ಸಾಲಿನಿಂದ ಕಬ್ಬು ನುರಿಸುವ ಕಾರ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ 17 ವರ್ಷಗಳಿಂದ ಕಾರ್ಯ ನಿರ್ವಹಿಸದ ಕಾರಣ ತುಕ್ಕು ಹಿಡಿದು ಹಾಳಾಗುತ್ತಿರುವ ಯಂತ್ರೋಪಕರಣ ಮತ್ತು ಕಾರ್ಖಾನೆ ಕಟ್ಟಡವನ್ನು ಟೆಂಡರ್ ಕಮ್ ಹರಾಜು ಮೂಲಕ ಮಾರಾಟ ಮಾಡಲು ಆಡಳಿತ ಮಂಡಳಿ ಕೋರಿದ್ದರಿಂದ ಅನುಮತಿ ನೀಡಲಾಗಿತ್ತು.

ಆದರೆ ಟೆಂಡರ್ ಪ್ರಕ್ರಿಯೆಯನ್ನು ನಿಯಮಗಳ ಪ್ರಕಾರ ನಡೆಸದಿರುವುದು ದಾಖಲಾತಿಗಳಿಂದ ಸ್ಪಷ್ಟವಾಗಿದೆ. ಯಂತ್ರೋಪಕರಣ ಹಾಗೂ ನಿರುಪಯುಕ್ತ ಸಾಮಗ್ರಿಗಳನ್ನು ಟೆಂಡರ್ ಕಮ್ ಹರಾಜು ಮೂಲಕ ಮಾರಾಟ ಮಾಡುವ ಪ್ರಕ್ರಿಯೆಯಲ್ಲಿ ಪ್ರತಿ ಕೆಜಿಗೆ ಅತಿ ಹೆಚ್ಚು ದರ ನಮೂದಿಸಿದ ಬಿಡ್ದಾರರಿಗೆ ಮಾರಾಟ ಮಾಡಬೇಕು ಎಂದು ಆಡಳಿತ ಮಂಡಳಿ ನಿರ್ಧಾರ ಕೈಗೊಂಡು, 50 ಲಕ್ಷ ರೂ. ಭದ್ರತಾ ಠೇವಣಿ ಹಾಗೂ 5 ಕೋಟಿ ರೂ. ಬ್ಯಾಂಕ್ ಗ್ಯಾರಂಟಿ ಪಾವತಿಸಬೇಕು ಎಂದು ಬಿಡ್‌ದಾರರರಿಗೆ ತಿಳಿಸಿತ್ತು.

ಹಳೆಯ ಯಂತ್ರೋಪಕರಣಗಳನ್ನು ಕೆಜಿ ಲೆಕ್ಕದಲ್ಲಿ ತೆಗೆದುಕೊಂಡು ಹೋಗುವುದು ಕಷ್ಟ, ಹೀಗಾಗಿ ಲಾಟ್ ಆಧಾರದ ಮೇಲೆ ನೀಡಬೇಕು ಎಂದು ಟೆಂಡರ್ ಪಡೆದ ಚೆನ್ನೈನ ನ್ಯೂ ರಾಯಲ್ ಟ್ರೇಡರ್ಸ್ ಮನವಿ ಮಾಡಿತ್ತು. ಈ ಮನವಿಗೆ ಆಡಳಿತ ಮಂಡಳಿ ಸಮ್ಮತಿಸಿರುವುದು ಟೆಂಡರ್ ನಿಯಮಗಳ ಸ್ಪಷ್ಟ ಉಲ್ಲಂಘನೆ ಎಂದು ವಿಚಾರಣಾಧಿಕಾರಿಗಳು ವರದಿಯಲ್ಲಿ ತಿಳಿಸಿದ್ದಾರೆ.

ರಾಯಲ್ ಟ್ರೇಡರ್ಸ್ 46 ಲೋಡುಗಳಲ್ಲಿ 1139.37 ಮೆಟ್ರಿಕ್ ಟನ್ ಸ್ಕ್ರಾಪ್ ತೆಗೆದುಕೊಂಡು ಹೋಗಿದ್ದೇವೆ ಎಂದು ತಿಳಿಸಿದ್ದಾರೆ. ಆದರೆ 83 ಲೋಡುಗಳಲ್ಲಿ 2245.65 ಮೆಟ್ರಿಕ್ ಟನ್ ಸ್ಕ್ರಾಪ್ ಸಾಗಾಟ ಮಾಡಿರುವುದು ದಾಖಲೆ ಗಳಲ್ಲಿ ಸ್ಪಷ್ಟವಾಗಿದೆ. ಖರೀದಿದಾರರು ಕಾರ್ಖಾನೆಗೆ ನೀಡಿರುವ ಹಣವನ್ನು ಕಳೆದು ಇನ್ನೂ 12.63 ಕೋಟಿ ರೂ. ಬರಬೇಕಾಗಿದೆ. ಇದಲ್ಲದೆ ಹಳೆಯ ಕಟ್ಟಡ ಸಾಮಗ್ರಿಗಳನ್ನು ಕೂಡ ಮಾರಾಟ ಮಾಡಿದ್ದು, ಇದರಿಂದ 1.28 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಕಾರ್ಖಾನೆಯಿಂದ ಸಾಗಾಟ ಮಾಡಲಾಗಿದೆ ಎಂದು ತನಿಖಾ ವರದಿಯಲ್ಲಿ ವಿವರಿಸಲಾಗಿದೆ.

ಕಾರ್ಖಾನೆ ಯಂತ್ರೋಪಕರಣ ಮತ್ತು ಕಟ್ಟಡ ಮಾರಾಟದಲ್ಲಿ ಅವ್ಯವಹಾರ ನಡೆದಿರುವುದು ತನಿಖೆಯಲ್ಲಿ ಸ್ಪಷ್ಟ ವಾಗಿದೆ. ಆಡಳಿತ ಮಂಡಳಿ ನಿರ್ದೇಶಕರ ಮೇಲೆ ಕ್ರಿಮಿನಲ್ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲಾಗಿದೆ. ತಾಂತ್ರಿಕ ಸಲಹಾ ಸಮಿತಿ ಮೇಲೆ ಸಹ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.

-ಶಿವಾನಂದ ಪಾಟೀಲ, ಕಬ್ಬು ಅಭಿವೃದ್ಧಿ, ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News