×
Ad

ಸಂಗೀತದಿಂದ ಆರೋಗ್ಯವಂತ ಸಮಾಜ ನಿರ್ಮಾಣ: ಕಿರಣ್ ಕೊಡ್ಗಿ

Update: 2025-08-30 15:12 IST

ಉಡುಪಿ, ಆ.30: ಸಂಗೀತವು ಭಾರತೀಯ ಸಂಸ್ಕೃತಿಯನ್ನು ಬೆಳೆಸುವ ಮೂಲಕ ಆರೋಗ್ಯವಂತ ಸಮಾಜದ ನಿರ್ಮಾಣ ಮಾಡುತ್ತದೆ ಎಂದು ಕುಂದಾಪುರ ಶಾಸಕ ಎ.ಕಿರಣ್‌ಕುಮಾರ್ ಕೊಡ್ಗಿ ಹೇಳಿದ್ದಾರೆ.

ಕುಂದಾಪುರದ ಭಂಡಾರ್‌ಕಾರ್ಸ್‌ ಕಾಲೇಜಿನ ಆರ್.ಎನ್.ಶೆಟ್ಟಿ ಸಭಾಂಗಣ ದಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಭಂಡಾರ್‌ಕಾರ್ಸ್‌ ಕಾಲೇಜು ಐಕ್ಯೂಎಸಿ ವಿಭಾಗದ ಸಹಯೋಗದಿಂದ ಗುರುವಾರ ನಡೆದ ಪರಿಶಿಷ್ಟ ಜಾತಿ ಉಪಯೋಜನೆಯಡಿಯಲ್ಲಿ ‘ಹಾಡಿರೇ ರಾಗಗಳ ತೂಗಿರೇ ದೀಪಗಳ’ ಸಂಗೀತ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ನಮ್ಮ ದೇಶೀಯ ಕಲೆ ಉಳಿವಿಗೆ ಹಾಗೂ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಅನೇಕ ಸಂಗೀತ ಪ್ರಕಾರಗಳಿದ್ದು, ಇಂತಹ ಕಾರ್ಯಕ್ರಮಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪ್ರೋತ್ಸಾಹ ನೀಡಿ ವೇದಿಕೆಯನ್ನು ಕಲ್ಪಿಸುತ್ತದೆ. ವಿದ್ಯಾರ್ಥಿಗಳು ಸಂಗೀತ, ನೃತ್ಯ, ಯಕ್ಷಗಾನದಂತಹ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ ತಮ್ಮ ಶೈಕ್ಷಣಿಕ ವಿಷಯಗಳಲ್ಲೂ ಹೆಚ್ಚಿನ ಸಾಧನೆ ಮಾಡಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಭಂಡಾರ್‌ಕಾರ್ಸ್‌ ಕಾಲೇಜಿನ ವಿಶ್ವಸ್ಥ ಮಂಡಳಿ ಉಪಾಧ್ಯಕ್ಷ ಶಾಂತರಾಮ ಪ್ರಭು ಮಾತನಾಡಿ, ಸಂಗೀತ ಕಲೆಯು ಸಮಸ್ತ ಜೀವರಾಶಿಯನ್ನು ತನ್ನತ್ತ ಸೆಳೆಯುವ ಜೊತೆಗೆ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ.ಶುಭಕರಾಚಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಲಾವಿದರಿಗೆ ಅಭಿನಂದನಾ ಪತ್ರಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಐಕ್ಯೂಎಸಿ ಸಂಯೋಜಕ ಸತ್ಯನಾರಾಯಣ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎಂ.ಗೊಂಡ ಹಾಗೂ ಇತರರು ಉಪಸ್ಥಿತರಿದ್ದರು.

ಸಂಗೀತ ಕಾರ್ಯಕ್ರಮದಲ್ಲಿ ಸರೋಜ ಮತ್ತು ತಂಡದಿಂದ ಪಾಡ್ದನದ ಹಾಡುಗಳು, ಸ್ವಪ್ನರಾಜ್ ಹಾಗೂ ತಂಡದಿಂದ ಹಿಂದೂಸ್ತಾನಿ ಗಾಯನ, ಜಯಲಕ್ಷ್ಮಿ ಮತ್ತು ತಂಡದಿಂದ ಸೋಬಾನೆ ಪದಗಳು, ನವೀನ್ ಕೋಟ ಮತ್ತು ತಂಡದಿಂದ ಯಕ್ಷಗಾನ ಪದಗಳು, ರಮೇಶ್ ಬಿ. ನಿಟ್ಟೆ ಮತ್ತು ತಂಡದಿಂದ ಸುಗಮ ಸಂಗೀತ, ಸುಬ್ಬಣ್ಣ ಕೋಣಿ ಮತ್ತು ತಂಡದಿಂದ ಜನಪದ ಗೀತೆಗಳು, ವಸಂತಿ ಕಡಂಬಳ ಮತ್ತು ತಂಡದಿಂದ ದಾಸರ ಪದಗಳು, ಶಂಕರ್‌ದಾಸ್ ಚಂಡ್ಕಳ ಮತ್ತು ತಂಡದಿಂದ ರಂಗ ಗೀತೆಗಳು ಹಾಗೂ ರಮೇಶ್ ಮಹಾಂತ ಮತ್ತು ತಂಡದಿಂದ ವಚನ ಗೀತೆಗಳನ್ನು ಪ್ರಸ್ತುತ ಪಡಿಸಲಾಯಿತು.

ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರೆ, ಅಕ್ಷಯ್ ಹೆಗ್ಡೆ ಮೊಳಹಳ್ಳಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News