ಬೈಂದೂರು| ಖಂಬದಕೊಣೆಯಲ್ಲಿ ಅಪಘಾತ: ಬೈಕ್ ಸವಾರ ಮೃತ್ಯು
ಹಿಂಬದಿ ಸವಾರನಿಗೆ ಗಂಭೀರ ಗಾಯ
ಬೈಂದೂರು, ಡಿ.31: ಬೈಕ್ ಹಾಗೂ ಟಾಟಾ ಏಸ್ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟು ಹಿಂಬದಿ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಬುಧವಾರ ಅಪರಾಹ್ನದ ವೇಳೆ ಬೈಂದೂರು ತಾಲೂಕಿನ ಖಂಬದಕೋಣೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.
ಅಪಘಾತದಲ್ಲಿ ಸಾವನ್ನಪ್ಪಿದ ಬೈಕ್ ಸವಾರನನ್ನು ಉಪ್ಪುಂದ ನಿವಾಸಿ ಭುವನ್ (19) ಎಂದು ಗುರುತಿಸಲಾಗಿದೆ. ಹಿಂಬದಿ ಸವಾರ ಉಪ್ಪುಂದ ಮೂಲದ ಮಧುಸೂಧನ್ ಗಂಭೀರ ಗಾಯಗೊಂಡಿದ್ದಾರೆ.
ಭುವನ್ ಹಾಗೂ ಮಧು ಅವರು ಬೈಕಿನಲ್ಲಿ ಕುಂದಾಪುರ ಕಡೆಯಿಂದ ಉಪ್ಪುಂದಕ್ಕೆ ಬರುತ್ತಿದ್ದರು. ಖಂಬದ ಕೋಣೆಯಲ್ಲಿ ಬರುತ್ತಿದ್ದ ವೇಳೆ ಟಾಟಾ ಏಸ್ ವಾಹನವೊಂದು ಹೆದ್ದಾರಿಯ ಡಿವೈಡರ್‌ನಲ್ಲಿ ಏಕಾಏಕಿ ಯೂ ಟರ್ನ್ ತೆಗೆದುಕೊಂಡಿದ್ದು, ಇದರಿಂದ ಗೂಡ್ಸ್ ವಾಹನಕ್ಕೆ ಬೈಕ್ ಡಿಕ್ಕಿ ಹೊಡೆದಿದೆ. ಢಿಕ್ಕಿಯಿಂದ ರಸ್ತೆಗೆಸೆಯಲ್ಪಟ್ಟ ಪರಿಣಾಮ ಭುವನ್ ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಸಿಪಿಐ ಶಿವಕುಮಾರ್, ಪಿಎಸ್‌ಐ ಸುನೀಲ್ ಕುಮಾರ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅವೈಜ್ಞಾನಿಕ ಹೆದ್ದಾರಿ ಕಾಮಗಾರಿ
ರಾಷ್ಟ್ರಿಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿ ಇಂತಹ ಅಪಘಾತ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಸರ್ವಿಸ್ ರಸ್ತೆ, ಚರಂಡಿ, ರಸ್ತೆ ಮದ್ಯೆ ಬರುವ ಎಂಬರೇಜ್‌ಮೆಂಟ್ ಇನ್ನೂ ಆಗಿಲ್ಲ. ಯೂ ಟರ್ನ್ ಪಡೆಯುವಲ್ಲಿ ವಾಹನಗಳು ನಿಧಾನಗತಿ ಸಾಗುವಂತೆ ವೈಜ್ಞಾನಿಕವಾಗಿ ಕಾಮಗಾರಿ ನಡೆಸಬೇಕಿತ್ತು. ದಾರಿ ಮದ್ಯೆ ಬೀದಿ ದೀಪ ವ್ಯವಸ್ಥೆಯಿಲ್ಲ. ಸಂಬಂದಪಟ್ಟ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಗುತ್ತಿಗೆ ಕಂಪೆನಿ ಈ ಬಗ್ಗೆ ಅಗತ್ಯ ಕ್ರಮವಹಿಸಬೇಕೆಂದು ಸಮಾಜ ಸೇವಕ ಸುಬ್ರಮಣ್ಯ ಬಿಜೂರು ಆಗ್ರಹಿಸಿದ್ದಾರೆ.