121 ದಿನಕ್ಕೆ ಬೈಂದೂರು ರೈತರ ಹೋರಾಟ: ಬೈಕ್ ಜಾಥಾ
ಬೈಂದೂರು, ಜ.20: ರೈತರಿಗೆ ನ್ಯಾಯ ನೀಡಲು ಸರಕಾರದ ಮಟ್ಟದಲ್ಲಿ ಸಚಿವರು ಸಮ್ಮತಿ ನೀಡಿದರೂ ಅಧಿಕಾರಿಗಳು ಅನಗತ್ಯ ವಿಳಂಬ ಮಾಡುತ್ತಿದ್ದಾರೆ. ಈ ಕುರಿತು ಈ ಜಿಲ್ಲೆಯ ನಾಯಕರು ಒಮ್ಮತದಿಂದ ರೈತರ ಪರ ಧ್ವನಿ ಎತ್ತಬೇಕು ಎಂದು ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಆಗ್ರಹಿಸಿದ್ದಾರೆ.
ಗ್ರಾಮೀಣ ಭಾಗಗಳನ್ನು ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಕೈಬಿಡಬೇಕೆಂದು ಆಗ್ರಹಿಸಿ ಬೈಂದೂರು ತಾಲೂಕು ಆಡಳಿತ ಸೌಧದ ಎದುರು ಬೈಂದೂರು ರೈತ ಸಂಘದ ಮುಂದಾಳತ್ವದಲ್ಲಿ ನಡೆಯುತ್ತಿರುವ 121 ದಿನದ ಪ್ರತಿಭಟನೆ ಪ್ರಯುಕ್ತ ಮಂಗಳವಾರ ಬೈಕ್ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡುತಿದ್ದರು.
ಮರಳುಗಾರಿಕೆಯಲ್ಲಿ ರಾಜಕೀಯ ಮರೆತು ಹೊಂದಾಣಿಕೆ ಮಾಡಿಕೊಳ್ಳುವ ನಾಯಕರು ರೈತರಿಗೆ ನ್ಯಾಯ ಕೊಡಲು ಮಾತ್ರ ಒಗ್ಗಟ್ಟು ತೋರಿಸುತ್ತಿಲ್ಲ. ರೈತರ ವಿಚಾರದಲ್ಲಿ ಅನ್ಯಾಯ ಮಾಡಿದರೆ ನಿಮ್ಮ ಭವಿಷ್ಯ ನಿರ್ನಾಮ ವಾಗುತ್ತದೆ ಎಂದು ಅವರು ಆರೋಪಿಸಿದರು.
ಕೆಆರ್‌ಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುಪತಿ ಮಾತನಾಡಿ, ಉಡುಪಿ ಜಿಲ್ಲಾಡಳಿತ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಈ ಜಿಲ್ಲೆಯ ಜಿಲ್ಲಾಧಿಕಾರಿ ನೂರು ದಿವಸ ರೈತರು ಬೀದಿಯಲ್ಲಿ ಕುಳಿತರು ಕನಿಷ್ಠ ಮಾತನಾ ಡಿಸುವ ಸೌಜನ್ಯವಿಲ್ಲದೆ ರಾಜಕೀಯ ಮುಖಂಡರ ಕೈಗೊಂಬೆಯಾಗಿದ್ದಾರೆ. ರೈತರು ನ್ಯಾಯಕ್ಕಾಗಿ ಆಗ್ರಹಿಸಿದರೆ ಜಿಲ್ಲಾಡಳಿತ ಮತ್ತು ರಾಜಕೀಯ ವ್ಯವಸ್ಥೆ ಬೈಂದೂರು ಉತ್ಸವದ ಸಿದ್ದತೆಯಲ್ಲಿರುವುದು ಇವರ ಮಾನಸಿಕ ದಿವಾಳಿತನವನ್ನು ಬಿಂಬಿಸುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಬೇಡಿಕೆಗಳಿಗೆ ಸ್ಪಂಧಿಸುವುದು ಜನಪ್ರತಿನಿಧಿಗಳ ಜವಬ್ದಾರಿಯಾಗಿದೆ ಎಂದರು.
ಖಂಬದಕೋಣೆ ರೈತರ ಸೇವಾ ಸಹಾಕರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಬೈಂದೂರು ಗ್ರಾ.ಪಂ ಮಾಜಿ ಸದಸ್ಯ ಗಣೇಶ ಪೂಜಾರಿ, ನಾಗಪ್ಪ ಮರಾಠಿ, ಲಿಮೋನ್ ಬೈಂದೂರು, ಪದ್ಮಾಕ್ಷ ಗೋಳಿಬೇರು, ಹಿರಿಯರಾದ ಹೆರಿಯಣ್ಣ ಪೂಜಾರಿ ಗೋಳಿಬೇರು, ಸುಭಾಷ್ ಗಂಗನಾಡು, ಕೇಶವ ಪೂಜಾರಿ ಅಂತಾರ್, ರೈತ ಮುಖಂಡರು, ಗ್ರಾಮೀಣ ಭಾಗದ ರೈತರು ಹಾಗೂ ಕೆಆರ್‌ಎಸ್ ಪಕ್ಷದ ಸದಸ್ಯರು ಉಪಸ್ಥಿತರಿದ್ದರು.
ಅರುಣ್ ಕುಮಾರ್ ಶಿರೂರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿ ದರು. ಈ ಸಂದರ್ಭದಲ್ಲಿ ಬೈಂದೂರು ತಾಲೂಕು ಆಡಳಿತ ಸೌಧದಿಂದ ಕಿರಿಮಂಜೇಶ್ವರದವರೆಗೆ ಬೈಕ್ ಜಾಥಾ ನಡೆಸಲಾಯಿತು. ಜಾಥಾದಲ್ಲಿ ನೂರಾರು ರೈತರು ಭಾಗವಹಿಸಿದ್ದರು.