ಬೈಂದೂರು| ಕತ್ತಿಯಿಂದ ಕಡಿದು ಕೇರಳದ ವ್ಯಕ್ತಿಯ ಕೊಲೆ ಪ್ರಕರಣ: ಆರೋಪಿ ಸೆರೆ
ಉದಯ ಕುಮಾರ್
ಬೈಂದೂರು, ಸೆ.14: ಕೂಲಿ ಹಣದ ವಿಚಾರವಾಗಿ ವ್ಯಕ್ತಿಯೊಬ್ಬ ತನ್ನೊಂದಿಗೆ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಕತ್ತಿ ಯಿಂದ ಕಡಿದು ಕೊಲೆ ಮಾಡಿರುವ ಘಟನೆ ಯಡ್ತರೆ ಗ್ರಾಮದ ಕೊಸಳ್ಳಿ ಸಮೀಪದ ದೇವರಗದ್ದೆ ಎಂಬಲ್ಲಿ ಸೆ.14ರಂದು ನಡೆದಿದೆ.
ಕೊಲೆಗೀಡಾದ ವ್ಯಕ್ತಿಯನ್ನು ಕೇರಳದ ಕೋಟಿಯನ್ ಜಿಲ್ಲೆಯ ಕಾನೇರಪಳ್ಳಿ ನಿವಾಸಿ ಬಿನೋ ಪಿಲಿಪ್(45) ಎಂದು ಗುರುತಿಸಲಾಗಿದೆ. ಕೊಲೆ ಆರೋಪಿ ಕೇರಳದ ಕೊಲಂ ಜಿಲ್ಲೆಯ ಕೊಟ್ಟರಯೇಕರ್‌ನ ಉದಯ ಕುಮಾರ್(42) ಎಂಬಾತನನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ತೂದಳ್ಳಿ ದೇವರಗದ್ದೆಯ ಥೋಮಸ್ ಎಂಬವರ ರಬ್ಬರ್ ತೋಟದಲ್ಲಿ ಬಿನೋ ಪಿಲಿಪ್ ಹಾಗೂ ಉದಯ ಕುಮಾರ್ ಕಳೆದ ಎರಡು ವರ್ಷಗಳಿಂದ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದರು. ರಬ್ಬರ್ ತೋಟದಲ್ಲಿರುವ ಶೆಡ್‌ನಲ್ಲಿ ಇವರಿಬ್ಬರು ಒಟ್ಟಿಗೆ ವಾಸ ಮಾಡಿಕೊಂಡಿದ್ದರು.
ಇವರಿಬ್ಬರು ರಬ್ಬರ್ ಟ್ಯಾಪಿಂಗ್ ಮಾಡುವ ಕೂಲಿ ಹಣದ ವಿಚಾರದಲ್ಲಿ ಆಗಾಗ್ಗೆ ಮದ್ಯ ಸೇವಿಸಿ ಗಲಾಟೆ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದ್ದು, ಇದೇ ವಿಚಾರವಾಗಿ ಉದಯ ತನ್ನ ಕೈಯಲ್ಲಿದ್ದ ರಬ್ಬರ್ ಟ್ಯಾಪಿಂಗ್ ಕತ್ತಿಯಿಂದ ಬೀನು ಪಿಲಿಪ್‌ನ ಹೊಟ್ಟೆಯ ಭಾಗಕ್ಕೆ ಇರಿದಿದ್ದು, ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲಿಯೇ ಮೃತಪಟ್ಟರೆಂದು ತಿಳಿದುಬಂದಿದೆ.
ಕೊಲೆ ಮಾಡಿದ ಬಳಿಕ ಉದಯ್ ಅಲ್ಲಿಂದ ಓಡಿ ಪರಾರಿಯಾಗಿದ್ದನು. ಈ ಕುರಿತು ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಘಟನಾ ಸ್ಥಳಕ್ಕೆ ಕುಂದಾಪುರ ಡಿವೈಎಸ್ಪಿ ಎಚ್.ಡಿ.ಕುಲಕರ್ಣಿ ಮತ್ತು ಬೈಂದೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.