ಮಲ್ಪೆ| ನಿಷೇಧಿತ ಭಾದ್ರಗಡ ದ್ವೀಪಕ್ಕೆ ಪ್ರವೇಶ: ಎಂಟು ಮಂದಿ ವಿರುದ್ಧ ಪ್ರಕರಣ ದಾಖಲು
Update: 2025-11-17 23:33 IST
ಮಲ್ಪೆ: ನಿಷೇಧಿತ ಭಾದ್ರಗಡ ದ್ವೀಪಕ್ಕೆ ಗಾಳ ಹಾಕಲು ಬೋಟಿನಲ್ಲಿ ತೆರಳಿದ್ದ ಎಂಟು ಮಂದಿ ವಿರುದ್ಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಲ್ಪೆ ವಡಾಬಾಂಡೇಶ್ವರದ ನಿವಾಸಿ ಶೇಖರ್ ಕುಂದರ್ ಎಂಬವರ ಮಾಲಕತ್ವದ ದೋಣಿಯಲ್ಲಿ ಭಟ್ಕಳದ ನಿವಾಸಿಗಳಾದ ಮೊಹಮ್ಮದ್ ಹುಸೈನ್ ಮಲ್ಬಾರಿ, ರೋಶನ್ ಜಮೀರ್, ಮೊಹಮ್ಮದ್ ಅನ್ಸಾರ್ ಬಶೀರಾ, ಅಬು ಸನಾನ್, ಅಣ್ಣಪ್ಪ ಮಂಜುನಾಥ ದೇವಾಡಿಗ, ಮೊಹಮ್ಮದ್ ಫೈಜಾನ್ ಶೇಖ್ ಹಾಗೂ ಮಹಮ್ಮದ್ ಜಾವೇದ್ ಅಹ್ಮದ್ ಎಂಬವರು ನಿರ್ಬಂಧಿತ ಭಾದ್ರಗಡ ದ್ವೀಪಕ್ಕೆ ನ.14ರಂದು ಸಂಜೆ ಹೋಗಿ ವಾಪಾಸ್ಸು ಬಂದಿರುವುದಾಗಿ ದೂರಲಾಗಿದೆ.
ಈ ಬಗ್ಗೆ ಮಲ್ಪೆ ಬಂದರು ಉಪ ಸಂರಕ್ಷಣಾಧಿಕಾರಿ ಅಂತೋನಿ ಫೆಲಿಕ್ಸ್ ಪರಂಬಿಲ್ ನೀಡಿದ ದೂರಿನಂತೆ ಈ ಎಂಟು ಮಂದಿ ದ್ವೀಪಕ್ಕೆ ತೆರಳಿ ಜಿಲ್ಲಾಧಿಕಾರಿಯವರ ಆದೇಶವನ್ನು ಉಲ್ಲಂಘಿಸಿ ಅತಿಕ್ರಮ ಪ್ರವೇಶ ಮಾಡಿ ಅಪರಾಧ ಎಸಗಿರುವುದಾಗಿ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.