×
Ad

ಮಂಗಳಾ ಎಕ್ಸ್‌ಪ್ರೆಸ್ ರೈಲಿನ ಅಲರಾಂ ಚೈನ್ ಎಳೆದ ಪ್ರಯಾಣಿಕನ ವಿರುದ್ಥ ಕೇಸು ದಾಖಲು

Update: 2025-11-06 23:34 IST

ಸಾಂದರ್ಭಿಕ ಚಿತ್ರ (credit: Grok)

ಉಡುಪಿ: ರೈಲಿನಲ್ಲಿ ತುರ್ತು ಸಂದರ್ಭದಲ್ಲಿ ಬಳಕೆಗಾಗಿ ಇರುವ ಅಲರಾಂ ಚೈನ್‌ನ್ನು ತಪ್ಪು ಉದ್ದೇಶಕ್ಕಾಗಿ ಬಳಸಿದ ಮಂಗಳಾ ಎಕ್ಸ್‌ಪ್ರೆಸ್‌ನ ಪ್ರಯಾಣಿಕರೊಬ್ಬರ ವಿರುದ್ಧ ಕೊಂಕಣ ರೈಲ್ವೆ ಕೇಸು ದಾಖಲಿಸಿದೆ.

ಎಚ್.ನಿಝಾಮುದ್ದೀನ್ ಹಾಗೂ ಎರ್ನಾಕುಲಂ ಜಂಕ್ಷನ್ ನಡುವೆ ಸಂಚರಿಸುವ ಮಂಗಳಾ ಎಕ್ಸ್‌ಪ್ರೆಸ್‌ನಲ್ಲಿ ಅ.23ರಂದು ನಡೆದ ಘಟನೆಗೆ ಸಂಬಂಧಿಸಿದಂತೆ ಈ ಪ್ರಕರಣ ದಾಖಲಾಗಿದೆ. ದಿವಾಂಖಾವಾಡಿ ಹಾಗೂ ಕಲಂಬನಿ ಬುದ್ರುಕ್ ನಿಲ್ದಾಣಗಳ ನಡುವೆ ಈ ಘಟನೆ ನಡೆದಿತ್ತು.

ತನ್ನ ಮೊಬೈಲ್ ಫೋನ್ ಅಕಸ್ಮಿಕವಾಗಿ ಕೈಯಿಂದ ಜಾರಿ ಓಡುತಿದ್ದ ರೈಲಿನ ಕಿಟಕಿ ಹೊರಗೆ ಬಿದ್ದಾಗ ಪ್ರಯಾಣಿಕ ಎಸಿಪಿಯನ್ನು ಎಳೆದು ರೈಲನ್ನು ನಿಲ್ಲಿಸಿದ್ದ. ರೈಲು ನಿಂತಾಗ ಅದರಿಂದ ಹೊರಜಿಗಿದ ಪ್ರಯಾಣಿಕ ರೈಲು ಹಳಿಯ ಮೇಲೆ ಬಿದ್ದಿದ್ದ ತನ್ನ ಮೊಬೈಲ್‌ನ್ನು ಎತ್ತಿಕೊಂಡು ಬಂದಿದ್ದ.

ಅನಿರೀಕ್ಷಿತವಾಗಿ ನಡೆದ ಈ ಘಟನೆಯ ಕುರಿತಂತೆ ರೈಲಿನಲ್ಲಿದ್ದ ಟಿಟಿಇ ಪಿ.ಎಂ.ಕೃಷ್ಣನ್ ಹಾಗೂ ಅಜಿತ್ ಜಾಧವ್ ಅವರು ರೈಲ್ವೆ ಅಧಿಕಾರಿಗಳಿಗೆ ವರದಿ ಮಾಡಿದ್ದರು. ಅವರು ನೀಡಿದ ವರದಿಯ ಆಧಾರದಲ್ಲಿ ರೈಲ್ವೆ ಪೊಲೀಸರು ಇಂಡಿಯನ್ ರೈಲ್ವೆ ಆ್ಯಕ್ಟ್ 1989ನ ಸೆಕ್ಷನ್ 141 ಅಡಿ ಕೇಸು ದಾಖಲಿಸಿಕೊಂಡಿದ್ದರು. ಇದು ಅಲರಾಂ ಚೈನ್‌ನ್ನು ಅಸಹಜ ಕಾರಣಗಳಿಗೆ ಬಳಸುವುದನ್ನು ನಿಷೇಧಿಸುತ್ತದೆ.

ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ನಿಜವಾದ ವೈದ್ಯಕೀಯ ಕಾರಣಗಳಿಗೆ ಹಾಗೂ ತುರ್ತು ಸಂದರ್ಭಗಳಲ್ಲಿ ಮಾತ್ರ ಅಲರಾಂ ಚೈನ್ ಬಳಕೆಯನ್ನು ಮಾಡುವಂತೆ ಕೊಂಕಣ ರೈಲ್ವೆ ಎಲ್ಲಾ ಪ್ರಯಾಣಿಕರಲ್ಲಿ ಮನವಿ ಮಾಡಿದೆ. ಅಲರಾಂ ಚೈನ್‌ನ್ನು ದುರುಪಯೋಗ ಪಡಿಸಿಕೊಂಡರೆ ರೈಲಿನ ಪ್ರಯಾಣದಲ್ಲಿ ಅನಗತ್ಯ ವಿಳಂಬ, ಸಾವಿರಾರು ಪ್ರಯಾಣಿಕರಿಗೆ ತೊಂದರೆ ಯಾಗಲಿದ್ದು, ಇದು ಕಾನೂನಿನಡಿ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಕೊಂಕಣ ರೈಲ್ವೆ ಹೇಳಿಕೆಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News